ಬೆಂಗಳೂರು(ಸೆ.16): ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಫ್ರೇಜರ್‌ಟೌನ್‌ ವಾರ್ಡ್‌ನಲ್ಲಿರುವ ಸುಮಾರು 25 ಕೋಟಿ ಮೌಲ್ಯದ ಪಾಲಿಕೆ ಸ್ವತ್ತನ್ನು ಸದ್ದಿಲ್ಲದೆ ಕಬಳಿಸುವ ಸಂಚು ನಡೆಯುತ್ತಿದ್ದು, ಈ ಸಂಬಂಧ ತನಿಖೆ ನಡೆಸಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಬಿಎಂಟಿಎಫ್‌ಗೆ ದೂರು ನೀಡಿದ್ದಾರೆ.

ವಾರ್ಡ್‌ ಸಂಖ್ಯೆ 78ರ ಫ್ರೇಜರ್‌ಟೌನ್‌ ರಸ್ತೆಯಲ್ಲಿರುವ 80*80 ಅಳತೆಯ ಸುಮಾರು 25 ಕೋಟಿ ಮೌಲ್ಯದ ಪಾಲಿಕೆಯ ಜಾಗವಿದೆ. ಮಾಜಿ ಶಾಸಕ ಹಮೀದ್‌ ಷಾ ಅವರ ಪತ್ನಿ ಫಮೀದಾ ಬೇಗಂ ಅವರಿಗೆ ಹಸು ಸಾಗಾಣಿಕೆಗೆಂದು 50 ವರ್ಷಗಳ ಅವಧಿಗೆ, ವರ್ಷಕ್ಕೆ 600 ರುಪಾಯಿಯಂತೆ ಗುತ್ತಿಗೆ ನೀಡಲಾಗಿದೆ. ಪ್ರಸ್ತುತ ಈ ಆಸ್ತಿಯನ್ನು ಕಬಳಿಸುವ ಸಂಚು ನಡೆದಿದೆ ಎಂದು ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.

1975ರಲ್ಲಿ ಶಾಸಕರಾಗಿದ್ದ ಹಮೀದ್‌ ಷಾ ಅವರ ಮನವಿ ಮೇರೆಗೆ ಹಸುಗಳ ಸಾಗಾಣಿಕೆಗೆಂದು ಅವರ ಪತ್ನಿ ಫಮೀದಾ ಬೇಗಂ ಅವರಿಗೆ ಗುತ್ತಿಗೆ ಪತ್ರ ಮಾಡಿಕೊಡಲಾಗಿತ್ತು. ಈ ಸ್ವತ್ತನ್ನು ಉದ್ದೇಶಿತ ಬಳಕೆಗೆ ಮಾತ್ರವೇ ಬಳಸಬೇಕು ಎಂದು ಷರತ್ತು ವಿಧಿಸಲಾಗಿತ್ತು. ಆದರೆ, ಈ ಜಾಗದಲ್ಲಿ ವಸತಿ ಕಟ್ಟಡಗಳು, ಐಸ್‌ ಫ್ಯಾಕ್ಟರಿ, ಗ್ಯಾರೇಜ್‌ ಮೊದಲಾದ ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ.

'ಬಿಬಿಎಂಪಿ ಸದಸ್ಯನಿಂದ 18 ಕೋಟಿ ಮೌಲ್ಯದ ಆಸ್ತಿ ಗುಳುಂ'

ಷರತ್ತುಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಈ ಸ್ವತ್ತನ್ನು ಬಿಬಿಎಂಪಿ ತನ್ನ ವಶಕ್ಕೆ ಪಡೆದುಕೊಳ್ಳಬಹುದು. ಅಲ್ಲದೆ, ನಾಲ್ಕು ವರ್ಷಗಳಲ್ಲಿ ಗುತ್ತಿಗೆ ಅವಧಿ ಮುಗಿದು ಪೂರ್ಣಗೊಳ್ಳಲಿದ್ದು, ಸ್ವತ್ತಿನ ಗುತ್ತಿಗೆ ಅವಧಿಯನ್ನು ಮುಂದಿನ 35 ವರ್ಷಗಳಿಗೆ ವಿಸ್ತರಿಸಬೇಕೆಂದು ಷಮೀದಾ ಬೇಗಂ ಈಗಾಗಲೇ ಪಾಲಿಕೆ ಆಯುಕ್ತರ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧಿತ ಕಡತವು 16 ತಿಂಗಳಿನಿಂದ ಆಸ್ತಿಗಳ ವಿಭಾಗದ ವಿಶೇಷ ಆಯುಕ್ತರ ಕಚೇರಿಯಲ್ಲಿ ಕೊಳೆಯುತ್ತಿದೆ. ಈ ಸ್ವತ್ತನ್ನು ಶಾಶ್ವತವಾಗಿ ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಫಮೀದಾ ಬೇಗಂ ಪ್ರಯತ್ನಿಸುತ್ತಿದ್ದಾರೆ.

ಕಾನೂನು ಬಾಹಿರವಾಗಿ ನಿರ್ಮಾಣವಾಗಿರುವ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಕಂದಾಯ ಮೊತ್ತವನ್ನು ನಿಗದಿಪಡಿಸಿರುವ ಪುಲಿಕೇಶಿನಗರದ ಉಪವಿಭಾಗದ ಕಂದಾಯ ಅಧಿಕಾರಿಗಳ ವಿರುದ್ಧ ಹಾಗೂ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟ ಎಂಜಿನಿಯರ್‌ಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಮೇಶ್‌ ಮನವಿ ಮಾಡಿದ್ದಾರೆ. ಈ ಸಂಬಂಧ ಬಿಬಿಎಂಪಿ ಆಯುಕ್ತರಿಗೂ ದೂರು ನೀಡಿದ್ದಾರೆ.