ಕಾರ್ಪೊರೇಟರ್‌ ಜಾಕೀರ್‌ರಿಂದ ಪಾಲಿಕೆ ಆಸ್ತಿ ಕಬಳಿಕೆ|ಬಿಎಂಟಿಎಫ್‌ಗೆ ಎನ್‌.ಆರ್‌.ರಮೇಶ್‌ ದೂರು| ಫ್ರೇಜರ್‌ಟೌನ್‌ ಬಡಾವಣೆಯ ಹೇನ್ಸ್‌ ರಸ್ತೆಯಲ್ಲಿರುವ ಪಾಲಿಕೆ ಸ್ವತ್ತು ಮತ್ತು ಅದಕ್ಕೆ ಹೊಂದಿಕೊಂಡಿರುವ ಬಂಬೂ ಬಜಾರ್‌ ರಸ್ತೆಯಲ್ಲಿರುವ ಪಾಲಿಕೆ ಸ್ವತ್ತು ಕಬಳಿಕೆ| 

ಬೆಂಗಳೂರು(ಸೆ.05): ನಗರದ ಪುಲಕೇಶಿನಗರ ವಾರ್ಡ್‌ನ ಪಾಲಿಕೆ ಸದಸ್ಯ ಅಬ್ದುಲ್‌ ರಕೀಬ್‌ ಜಾಕೀರ್‌ ಮತ್ತವರ ಪಾಲುದಾರರು 18 ಕೋಟಿ ರು.ಗಿಂತ ಹೆಚ್ಚು ಮೌಲ್ಯದ ಪಾಲಿಕೆಯ ಎರಡು ಸ್ವತ್ತುಗಳನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಬಿಎಂಟಿಎಫ್‌ಗೆ ದೂರು ನೀಡಿದ್ದಾರೆ.

ಹಗರಣ ಕುರಿತು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ 345 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದ ರಮೇಶ್‌, ಫ್ರೇಜರ್‌ಟೌನ್‌ ಬಡಾವಣೆಯ ಹೇನ್ಸ್‌ ರಸ್ತೆಯಲ್ಲಿರುವ ಪಾಲಿಕೆ ಸ್ವತ್ತು ಮತ್ತು ಅದಕ್ಕೆ ಹೊಂದಿಕೊಂಡಿರುವ ಬಂಬೂ ಬಜಾರ್‌ ರಸ್ತೆಯಲ್ಲಿರುವ ಪಾಲಿಕೆ ಸ್ವತ್ತನ್ನು ಕಬಳಿಸಲಾಗಿದೆ. ಅಮೂಲ್ಯ ಪಾಲಿಕೆ ಸ್ವತ್ತನ್ನು ನಿಯಮಬಾಹಿರವಾಗಿ ಮಾರಾಟ ಮಾಡಿರುವ ನಿವೃತ್ತ ಐಎಎಸ್‌ ಅಧಿಕಾರಿ ಜಯರಾಂ ವಿರುದ್ಧ ಮತ್ತು ಈ ಎರಡು ಪಾಲಿಕೆ ಸ್ವತ್ತುಗಳಿಗೆ ನಕಲಿ ದಾಖಲೆ ಸೃಷ್ಟಿಸಿರುವವರ ಹೆಸರುಗಳಿಗೆ ಕಾನೂನು ಬಾಹಿರವಾಗಿ ಖಾತಾ ಮಾಡಿಕೊಟ್ಟಿರುವ ಪುಲಕೇಶಿನಗರ ಉಪ-ವಿಭಾಗದ ಕಂದಾಯ ಇಲಾಖೆಯ ಹಿಂದಿನ ಭಷ್ಟ್ರ ಅಧಿಕಾರಿಗಳ ವಿರುದ್ಧ ಮತ್ತು ಅಬ್ದುಲ್‌ ರಕೀಬ್‌ ಜಾಕೀರ್‌ ಮತ್ತವರ ಪಾಲುದಾರರ ವಿರುದ್ಧ ಎಸಿಬಿ, ಬಿಎಂಟಿಎಫ್‌ಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೇಳಿದರು.

ಅಮೂಲ್ಯ ಪಾಲಿಕೆ ಸ್ವತ್ತುಗಳನ್ನು ಕೂಡಲೇ ಪಾಲಿಕೆಯ ವಶಕ್ಕೆ ತೆಗೆದುಕೊಳ್ಳುವ ಸಂಬಂಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಅಲ್ಲದೇ, ದಾಖಲೆಗಳನ್ನು ನಾಶಪಡಿಸಿರುವ ಹಿಂದಿನ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕಸ ವಿಗಂಡಣೆ: ಯದ್ವಾತದ್ವಾ ದಂಡ ವಸೂಲಿ, ಸಾರ್ವಜನಿಕರ ಆಕ್ರೋಶ

1750 ಚ.ಅಡಿ ವಿಸ್ತೀರ್ಣದ 25/2-1 ಸಂಖ್ಯೆಯ ಸ್ವತ್ತವನ್ನು ಪಾಲಿಕೆ ಸದಸ್ಯರಾಗಿದ್ದ ಮತ್ತು ಕಡು ಬಡತನ ಸ್ಥಿತಿಯಲ್ಲಿದ್ದ ಪಾಂಡ್ಯನ್‌ ಅವರಿಗೆ 1983-84ರಲ್ಲಿ 50 ವರ್ಷಗಳ ಗುತ್ತಿಗೆಗೆ ನೀಡಲಾಗಿತ್ತು. ಅಂತೆಯೇ 2,760 ಚ.ಅಡಿ ವಿಸ್ತೀರ್ಣದ 25/1 ಸಂಖ್ಯೆಯ ಸ್ವತ್ತನ್ನು ಕಾಂಗ್ರೆಸ್‌ ಪಕ್ಷ ಮುಖಂಡರಾಗಿದ್ದ ವಿ.ರಾಮಾಂಜುಲು ನಾಯ್ಡು ಅವರಿಗೆ 1963-64ರಲ್ಲಿ 99 ವರ್ಷಗಳ ಗುತ್ತಿಗೆ ನೀಡಲಾಗಿತ್ತು. 18 ಕೋಟಿ ರು.ಗಿಂತ ಹೆಚ್ಚು ಮೌಲ್ಯದ ಈ ಎರಡು ಸ್ವತ್ತನ್ನು ವ್ಯವಸ್ಥಿತವಾಗಿ ಅಬ್ದುಲ್‌ ರಕೀಬ್‌ ಜಾಕೀರ್‌ ಮತ್ತವರ ಪಾಲುದಾರರು ತನ್ನದಾಗಿಸಿಕೊಂಡಿದ್ದಾರೆ. ಪ್ಯಾಂಡನ್‌ ಅವರಿಗೆ 50 ವರ್ಷಗಳ ಅವಧಿಯ ಗುತ್ತಿಗೆಗೆ ನೀಡಲಾಗಿದ್ದ ಪಾಲಿಕೆಯ ಸ್ವತ್ತಿನಲ್ಲಿ 7 ಅಂತಸ್ತುಗಳ ವಸತಿ ಸಂಕೀರ್ಣ ಮತ್ತು ರಾಮಾಂಜಲು ನಾಯ್ದು ಅವರಿಗೆ 99 ವರ್ಷಗಳ ಅವಧಿಯ ಗುತ್ತಿಗೆಗೆ ನೀಡಲಾಗಿದ್ದ ಪಾಲಿಕೆಯ ಸ್ವತ್ತಿನಲ್ಲಿ 7 ಅಂತಸ್ತುಗಳ ವಾಣಿಜ್ಯ ಕಟ್ಟಡವನ್ನು ಪಾಲಿಕೆ ಸದಸ್ಯ ಅಬ್ದುಲ್‌ ರಕೀಬ್‌ ಜಾಕೀರ್‌ ಮತ್ತವರ ಪಾಲುದಾರರು ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದರು.

2005ರ ಏ.11ರಂದು ಪಾಲಿಕೆಯ ಆಯುಕ್ತರ ಗಮನಕ್ಕೂ ತರದೆ ಹಾಗೂ ಅನುಮತಿಯನ್ನು ಪಡೆಯದೆ ಏಕಾಏಕಿ ಸ್ವಯಂ ನಿರ್ಧಾರದಿಂದ ಕಾನೂನು ಬಾಹಿರವಾಗಿ ಮಾರಾಟದ ಕ್ರಮ ಪತ್ರವನ್ನು ಜಯರಾಂ ಅವರು ಮಾಡಿಕೊಟ್ಟಿದ್ದರು ಎಂದು ಇದೇ ವೇಳೆ ದೂರಿದರು.