ಕಸ ವಿಗಂಡಣೆ: ಯದ್ವಾತದ್ವಾ ದಂಡ ವಸೂಲಿ, ಸಾರ್ವಜನಿಕರ ಆಕ್ರೋಶ
ಕಸ ವಿಂಗಡಣೆ, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಸೇರಿ ಇತರೆ ತಪ್ಪಿಗೆ ಮಾರ್ಷಲ್‌ಗಳಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ದಂಡ| ಯಾವುದೇ ತಪ್ಪಿಗೆ ಇನ್ಯಾವುದೋ ನಿಯಮ ಉಲ್ಲಂಘನೆಗೆ ವಿಧಿಸುವ ದಂಡ ಪ್ರಯೋಗ| ಸಾರ್ವಜನಿಕರಿಂದ ಗಂಭೀರ ಆರೋಪ|
ಬೆಂಗಳೂರು(ಸೆ.05): ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಂಗಡಣೆ, ಬಯಲು ಬಹಿರ್ದೆಸೆ, ಪ್ಲಾಸ್ಟಿಕ್ ಬಳಕೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಧೂಮಪಾನ ಮಾಡುವುದು ಸೇರಿದಂತೆ ಇತರೆ ನಿಯಮ ಉಲ್ಲಂಘಿಸುವವರ ವಿರುದ್ಧ ಪಾಲಿಕೆ ಮಾರ್ಷಲ್‌ಗಳು ನಿಗದಿತ ದಂಡಕ್ಕಿಂತ ಹೆಚ್ಚು ದಂಡ ವಿಧಿಸುತ್ತಿದ್ದಾರೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದದಲ್ಲಿ ಸಮರ್ಪಕ ಕಸ ನಿರ್ವಹಣೆ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ, ಉಗುಳುವ, ಧೂಮಪಾನ ಮಾಡುವ, ಮೂತ್ರ ವಿಸರ್ಜಿಸುವವರ ಮೇಲೆ ನಿಗಾವಹಿಸಿ, ದಂಡ ವಿಧಿಸಲು ಪಾಲಿಕೆಯು ಮಾರ್ಷಲ್‌ಗಳನ್ನು ನೇಮಿಸಿದೆ. ಈ ಮಾರ್ಷಲ್‌ಗಳು ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವಾಗ ಯಾವುದೋ ನಿಯಮ ಉಲ್ಲಂಘನೆಗೆ ಮತ್ಯಾವುದೋ ನಿಯಮ ಉಲ್ಲಂಘನೆಯಡಿ ದಂಡ ವಿಧಿಸುತ್ತಿದ್ದಾರೆ. ಪಾಲಿಕೆ ಬೈಲಾದ ಪ್ರಕಾರ ದಂಡ ವಿಧಿಸುತ್ತಿಲ್ಲ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.
ಬೆಂಗಳೂರಲ್ಲಿ ಕಸ ವಿಲೇವಾರಿಗೆ ‘ಇಂದೋರ್ ಮಾದರಿ’
ಬಿಬಿಎಂಪಿಯು ಒಂದೊಂದು ನಿಯಮ ಉಲ್ಲಂಘನೆಗೂ ಪ್ರತ್ಯೇಕ ದಂಡ ನಿಗದಿ ಪಡಿಸಿದೆ. ಹಸಿ ಕಸ-ಒಣ ಕಸ ವಿಂಗಡಣೆ ನಿಯಮ ಉಲ್ಲಂಘನೆಗೆ ಮೊದಲ ಬಾರಿಗೆ ಒಂದು ಸಾವಿರ ರು. ಹಾಗೂ ಎರಡನೇ ಬಾರಿಗೆ ಎರಡು ಸಾವಿರ ರು. ದಂಡ ನಿಗದಿ ಮಾಡಲಾಗಿದೆ. ಆದರೆ, ಪಾಲಿಕೆ ಮಾರ್ಷಲ್‌ಗಳು, ಕಸ ವಿಂಗಡಣೆ ನಿಯಮ ಉಲ್ಲಂಘನೆಗೆ ಪ್ಲಾಸ್ಟಿಕ್ ವಸ್ತು ಬೇರ್ಪಡಿಸದಿರುವ ನಿಯಮ ಉಲ್ಲಂಘನೆಯಡಿ ದಂಡ ವಿಧಿಸುತ್ತಿದ್ದಾರೆ. ಇದಕ್ಕೆ 1 ಸಾವಿರು ರು. ದಂಡ ಪಾವತಿಸಬೇಕಾಗಿದ್ದು, 500 ರು. ಹೆಚ್ಚಿಗೆ ವಸೂಲಿ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ವಸ್ತು, ಬಯೋ ಮೆಡಿಕಲ್ ತ್ಯಾಜ್ಯ ವಿಂಗಡಣೆ, ಧೂಮಪನಾ, ಮೂತ್ರವಿಸರ್ಜನೆ ಸೇರಿದಂತೆ ಇತರೆ ನಿಯಮ ಉಲ್ಲಂಘನೆಗೆ ದಂಡ ವಿಧಿಸುವಾಗ ಎಡವಟ್ಟು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಮಾರ್ಷಲ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಾರ್ಷಲ್‌ಗಳಿಗೆ ಹೆಚ್ಚಿನ ತರಬೇತಿ
ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾರ್ಷಲ್‌ಗಳು ದಂಡ ವಿಧಿಸುವವ ಬಗ್ಗೆ ತರಬೇತಿ ನೀಡಲಾಗಿದೆ. ಈಗ ಯಾವುದೋ ನಿಯಮ ಉಲ್ಲಂಘನೆಗೆ ಮತ್ಯಾವುದೋ ನಿಯಮ ಉಲ್ಲಂಘನೆಯಡಿ ದಂಡ ವಿಧಿಸುವುದು ತಪ್ಪು. ಈ ರೀತಿಯ ನಿರ್ದಿಷ್ಟಪ್ರಕರಣಗಳ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಕಸ ನಿರ್ವಹಣೆ ಬೈಲಾ ಹಾಗೂ ನಿಯಮ ಉಲ್ಲಂಘನೆ ನಿಗದಿ ಮಾಡಿರುವ ದಂಡ ಮೊತ್ತ ಈ ಎಲ್ಲದರ ಕುರಿತು ಮಾರ್ಷಲ್‌ಗಳಿಗೆ ಹೆಚ್ಚಿನ ತರಬೇತಿ ನೀಡಿ ತಪ್ಪು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
7 ತಿಂಗಳಲ್ಲಿ 2.84 ಕೋಟಿ ದಂಡ ವಸೂಲಿ!
ಬಿಬಿಎಂಪಿ ಮಾರ್ಷಲ್‌ಗಳು ಕಳೆದ ಜನವರಿಯಿಂದ ಜುಲೈ ಅಂತ್ಯದ ವರೆಗೆ ನಗರದಲ್ಲಿ ಕಸ ವಿಂಗಡಣೆ, ಪ್ಲಾಸ್ಟಿಕ್ ಬಳಕೆ, ಉಗುಳುವುದು, ಮೂತ್ರ ವಿಸರ್ಜನೆ, ಧೂಮಪಾನ ಸೇರಿದಂತೆ ವಿವಿಧ ನಿಯಮ ಉಲ್ಲಂಘಿಸಿದವರ ವಿರುದ್ಧ ಸುಮಾರು 2.84 ಕೋಟಿ ರು. ದಂಡ ವಸೂಲಿ ಮಾಡಿದ್ದಾರೆ. ಈ ಪೈಕಿ ಘನ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಿವೆ.