ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನನ್ನ ಹೆಂಡ್ತಿಗೆ ಕಾನೂನುಬದ್ಧವಾಗಿ ಸೈಟು ಕೊಟ್ಟಿದೆ; ಸಿಎಂ ಸಿದ್ದರಾಮಯ್ಯ
ಮೈಸೂರು ರಿಂಗ್ ರಸ್ತೆಯಲ್ಲಿದ್ದ ನನ್ನ ಹೆಂಡತಿಯ 3 ಎಕರೆ ಭೂಮಿಯನ್ನು ನಿವೇಶನ ಮಾಡಿ ಹಂಚಿದ ಮೂಡಾ, ಅದಕ್ಕೆ ಬದಲಿಯಾಗಿ ನನ್ನ ಹೆಂಡ್ತಿಗೆ ಬೇರೆಡೆ ಸೈಟು ಹಂಚಿಕೆ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು (ಜು.02): ಮೈಸೂರು ರಿಂಗ್ ರೋಡ್ ಬಳಿ ನನ್ನ ಹೆಂಡತಿಯ ಹೆಸರಲ್ಲಿದ್ದ 3 ಎಕರೆ 16 ಗುಂಟೆ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ವಶಕ್ಕೆ ಪಡೆದು ಸೈಟ್ ಮಾಡಿಕೊಂಡಿತ್ತು. ಇದಕ್ಕೆ ಬದಲಿಯಾಗಿ ನನ್ನ ಹೆಂಡತಿಗೆ ಸೈಟ್ ಹಂಚಿಕೆಯಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ನನ್ನ ಪತ್ನಿಗೆ ಅವರ ತವರು ಮನೆಯಿಂದ ದಾನವಾಗಿ ಬಂದ ಮೈಸೂರಿನ ರಿಂಗ್ ರೋಡ್ ಬಳಿಯ 3 ಎಕರೆ 16 ಗುಂಟೆ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಸೈಟ್ ಮಾಡಿ ಬೇರೆಯವರಿಗೆ ಹಂಚಿದರು. ನಾವು ಈ ಬಗ್ಗೆ ವಿಚಾರ ಮಾಡಿ ನ್ಯಾಯ ಕೇಳಿದಾಗ 50:50 ನಿಯಮದಲ್ಲಿ ಅದಕ್ಕೆ ಬದಲಿ ಜಮೀನು ನೀಡುವುದಾಗಿ ಹೇಳಿದ್ದರು. ನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬೇರೆ ಕಡೆ ಭೂಮಿ ಹಂಚಿಕೆ ಮಾಡಿದ್ದಾರೆ.
ಮುಡಾ ಬಹುಕೋಟಿ ಹಗರಣ; ಗೋಲ್ಮಾಲ್ ಸಿಎಂ, ₹ 4,000 ಕೋಟಿ ಗುಳುಂ : ಆರ್. ಅಶೋಕ ಟೀಕೆ
ಈ ಭೂಮಿಯನ್ನು ನಮ್ಮ ಭಾವ ಮಲ್ಲಿಕಾರ್ಜುನ ಅವರು ಖರೀದಿ ಮಾಡಿದ್ದಾರೆ. ಆದರೆ, ಈ ಭೂಮಿಯನ್ನು ಹರಿಶಿಣ ಕುಂಕುಮ ಅಂತ ಅವರ ಪಾಲನ್ನು ಭಾಗ ಮಾಡಿಕೊಂಡಾಗ ಅಲ್ಲಿನ ಭೂಮಿಯನ್ನು ಅವರ ಸಹೋದರಿ ಅಂದರೆ ನನ್ನ ಹೆಂಡತಿಗೆ ಸೈಟ್ ಮಾಡಿ ಹಂಚಿಕೆ ಮಾಡಿಬಿಟ್ಟರು. ಆಗ ನಮಗೆ ಜಮೀನೇ ಇಲ್ಲದೆ ನಾವು ಪರದಾಡುತ್ತಿದ್ದೆವು. ಜಮೀನಿನ ಭಾಗದಲ್ಲಿ ಹೋಗಿ ನೋಡಿದರೆ ಅದಾಗಲೇ ಮೂಡಾದವರು ಸೈಟ್ ಕೊಟ್ಟಿದ್ದಾರೆಂದು ಬೇರೊಬ್ಬರಿಗೆ ಮಾಲೀಕತ್ವ ಕೊಡಲಾಗಿತ್ತು. ಹೀಗಾಗಿ, ಮೂಡಾದಿಂದ 50:50 ನಿಯಮ ಜಾರಿಗೆ ತಂದು ನಮಗೆ ಬೇರೆಡೆ ಶೇ.50 ಭಾಗವನ್ನು ನಿವೇಶನ ನೀಡಿದ್ದಾರೆ. ಒಟ್ಟಾರೆ ನನ್ನ ಪತ್ನಿ ಕಳೆದುಕೊಂಡಿದ್ದ ಜಮೀನಿಗೆ ಕಾನೂನುಬದ್ಧವಾಗಿ ಬೇರೆ ಕಡೆ ಭೂಮಿ ನೀಡಿದ್ದಾರೆ. ಇದೇನು ತಪ್ಪಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.