ಮೈಸೂರು ಅರಮನೆ ದ್ವಾರದ ಬಳಿ ನೈಟ್ರೋಜನ್ ಸಿಲಿಂಡರ್ ಸ್ಫೋಟ; ಓರ್ವ ಸಾವು, ನಾಲ್ವರಿಗೆ ಗಾಯ, ಅರಮನೆಯ ಜಯಮಾರ್ತಂಡ ದ್ವಾರ ಬಳಿ ಘಟನೆ ನಡೆದಿದೆ. ಗಾಯಾಳುಗಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಆರೋಗ್ಯ ಗಂಭೀರವಾಗಿದೆ.
ಮೈಸೂರು (ಡಿ.25) ರಜಾ ದಿನ ಹಿನ್ನಲೆಯಲ್ಲಿ ಮೈಸೂರು ಅರಮನೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹೆಚ್ಚು. ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರು ಅರಮನೆ ಹಾಗೂ ಸುತ್ತ ಮುತ್ತ ಇರುವಾಗಲೇ ನೈಟ್ರೋಜನ್ ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ. ಅರಮನೆಯ ಜಯಮಾರ್ತಂಡ ದ್ವಾರ ಬಳಿ ಈ ದುರ್ಘಟನೆ ನಡೆದಿದೆ. ಬಲೂನ್ ಗ್ಯಾಸ್ ಸಿಡಿದು ಅವಘಡ ನಡೆದಿದೆ. ಘಟನೆಯಲ್ಲಿ ಓರ್ವ ಮೃತಪಟ್ಟದ್ದರೆ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಲೂನ್ ಗೆ ಗ್ಯಾಸ್ ತುಂಬುವಾಗ ದುರ್ಘಟನೆ
ಮೈಸೂರಿನ ಅರಮನೆ ಸೇರಿದಂತೆ ಮೈಸೂರಿಗೆ ಇಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರ. ಹೀಗಾಗಿ ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ವ್ಯಾಪಾರಸ್ಥರು ಭಾರಿ ತಯಾರಿಯೊಂದಿಗೆ ವ್ಯಾಪರ ಮಾಡುತ್ತಿದ್ದರು. ಮಕ್ಕಳ ಪ್ರಮುಖ ಆಕರ್ಷಣೆಯಾಗಿರುವ ನೈಟ್ರೋಜನ್ ಬಲೂನ್ ಎಲ್ಲೆಡೆ ಲಭ್ಯವಿದೆ. ಹೀಗೆ ಅರಮನೆಯ ಜಯಮಾರ್ತಂಡ ದ್ವಾರ ಬಳಿ ನೈಟ್ರೋಜನ್ ಬಲೂನ್ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಬಳಿ ಗ್ರಾಹಕರು ಬಲೂನ್ ಖರೀದಿಸಲು ತೆರಳಿದ್ದಾರೆ. ಈ ವೇಳೆ ಬಲೂನ್‌ಗೆ ಗ್ಯಾಸ್ ತುಂಬುವ ವೇಳೆ ದುರ್ಘಟನೆ ನಡೆದಿದೆ. ಗ್ಯಾಸ್ ಬಲೂನ್ ಸಿಡಿದ ಬೆನ್ನಲ್ಲೇ ನೈಟ್ರೋಜನ್ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಸ್ಥಳದಲ್ಲಿದ್ದ ಎಲ್ಲರೂ ಗಾಯಗೊಂಡಿದ್ದಾರೆ. ಓರ್ವ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ನಾಲ್ವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬಲೂನ್ ಮಾರುವ ಯುವಕ ಸಾವು
ಮೈಸೂರು ಅರಮನೆ ಬಲೂನ್ ಗೆ ಗ್ಯಾಸ್ ತುಂಬುವ ಹಿಲಿಯಂ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಅವಘಡ ಸಂಭವಿಸಿದೆ. ಈ ಘಟೆನೆಯಲ್ಲಿ ಬಲೂನ್ ಮಾರುತ್ತಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಪೈಕಿ ಬೆಂಗಳೂರು ಮೂಲದ ಲಕ್ಷ್ಮಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ನಂಜನಗೂಡು ಮೂಲದ ಮಂಜುಳಾ, ಕೊಲ್ಕತ್ತಾ ಮೂಲದ ಶಾಹಿನಾ ಶಬ್ಬಿರ್ ಕಾಲಿಗೆ ಗಾಯವಾಗಿದ್ದರೆ, ರಾಣೆಬೆನ್ನೂರು ಮೂಲದ ಕೊಟ್ಟ್ರೇಶಿ ಗೆ ಗಾಯವಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹೇಳಿದ್ದಾರೆ.
ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ
ಘಟನೆ ನಡೆದಾಗ ಕೂಗಳತೆ ದೂರದಲ್ಲಿದ್ದ ಪೊಲೀಸರು ಧಾವಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಸ್ಫೋಟದ ವಸ್ತುಗಳು ಸೇರಿದಂತೆ ಇತರ ವಸ್ತುಗಳನ್ನು ಕಲೆ ಹಾಕಿದ್ದಾರೆ. ಇದೇ ವೇಳೆ ಮೈಸೂರು ಅರಮನೆ ಹಾಗೂ ನಗರದ ಸುತ್ತ ಮುತ್ತ ನೈಟ್ರೋಜನ್ ಬಲೂನ್ ಮಾರಾಟ ಎಷ್ಟು ಸುರಕ್ಷಿತ ಅನ್ನೋ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಇದೇ ವೇಳೆ ಇತರ ನೈಟ್ರೋಜನ್ ಬಲೂನ್ ಮಾರಾಟಗಾರರಿಗೆ ಸುರಕ್ಷತಾ ಕ್ರಮಗಳ ಕುರಿತು ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಇನ್ನು ನೈಟ್ರೋಜನ್ ಬಲೂನ್ ನಿಷೇಧಿಸುವ ಕುರಿತು ಅಧಿಕಾರಿಗಳು ಚರ್ಚಿಸಿದ್ದಾರೆ.
ಉತ್ಸವ, ಜಾತ್ರೆಗಳಲ್ಲಿ ನೈಟ್ರೋಜನ್ ಬಲೂನ್ ಮಾರಾಟ ಭರದಿಂದ ನಡೆಯುತ್ತಿದೆ. ಆದರೆ ಹೆಚ್ಚಿನ ಜನಸಂದಣಿ ಬಳಿ ಸಣ್ಣ ಅವಘಡ ಅತೀ ದೊಡ್ಡ ದುರಂತಕ್ಕೆ ಕಾರಣವಾಗಲಿದೆ. ಹೀಗಾಗಿ ನೈಟ್ರೋಜನ್ ಬಲೂನ್ ಮಾರಾಟ ನಿಷೇಧ ಕುರಿತು ಚರ್ಚೆಗಳು ನಡೆಯುತ್ತಿದೆ.


