ಮೈಸೂರು ಅರಮನೆ ಮುಂಭಾಗದ ಜಯಮಾರ್ತಾಂಡ ಗೇಟ್ ಬಳಿ ಬಲೂನ್ ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೊಬ್ಬರು ಮಹಿಳೆಯರು ಶುಕ್ರವಾರ ಮೃತಪಟ್ಟಿದ್ದಾರೆ. ಅವರನ್ನು ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೈಸೂರು (ಡಿ.27): ಮೈಸೂರು ಅರಮನೆ ಮುಂಭಾಗದ ಜಯಮಾರ್ತಾಂಡ ಗೇಟ್ ಬಳಿ ಬಲೂನ್ ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೊಬ್ಬರು ಮಹಿಳೆಯರು ಶುಕ್ರವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿದೆ. ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದ ಚಾಮಲಾಪುರ ಬೀದಿಯ ನಿವಾಸಿ ಮಂಜುಳಾ (28), ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಚಿದ್ದಾರೆ. ಊರಿನಲ್ಲಿ ಹೂವಿನ ವ್ಯಾಪಾರ ನಡೆಸುತ್ತಿದ್ದ ಮಂಜುಳಾ, ಹೂ ಖರೀದಿಗಾಗಿ ಬಂದಿದ್ದಾಗ ಸ್ಫೋಟದಲ್ಲಿ ಗಾಯಗೊಂಡಿದ್ದರು. ಅವರನ್ನು ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಂಜುಳಾ ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ. ಇದೇ ವೇಳೆ, ತೀವ್ರವಾಗಿ ಗಾಯಗೊಂಡಿದ್ದ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಲಕ್ಷ್ಮೀ ಕೂಡ ಶುಕ್ರವಾರ ಸಂಜೆ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಕನೋಜ್ ಜಿಲ್ಲೆ ತೊಫಿಯ ಗ್ರಾಮದ ಸಲೀಂ (40) ಗುರುವಾರ ರಾತ್ರಿ ಸ್ಫೋಟದ ವೇಳೆ, ಸ್ಥಳದಲ್ಲಿಯೇ ಅಸುನೀಗಿದ್ದ. ಈ ಮಧ್ಯೆ, ಉಳಿದ ಗಾಯಾಳುಗಳಾದ ಕೊಲ್ಕತ್ತಾದ ಶಮಿನಾ ಶಬೀರ್, ರಾಣೆಬೆನ್ನೂರಿನ ಕೊಟ್ರೇಶ್ ಮತ್ತು ರಂಜಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಸಲೀಂ ಸ್ನೇಹಿತರ ವಿಚಾರಣೆ: ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ಬಲೂನ್ ವ್ಯಾಪಾರಿ ಸಲೀಂ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಗಾಯಾಳು ರಾಣೆಬೆನ್ನೂರು ನಿವಾಸಿ, ಕೆಎಸ್ಆರ್ ಟಿಸಿಯಲ್ಲಿ ಎಫ್‌ಡಿಎ ಆಗಿರುವ ಕೊಟ್ರೇಶ್ ಬೀರಪ್ಪ ಗುತ್ತೇರ್ ಅವರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಸಲೀಂ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕೊಟ್ರೇಶ್ ಅವರು ಕುಟುಂಬದ ಜೊತೆ ಮೈಸೂರು ಪ್ರವಾಸಕ್ಕೆ ಗುರುವಾರ ಬಂದಿದ್ದರು.

ಅರಮನೆ ಜಯಮಾರ್ತಾಂಡ ಗೇಟ್ ಬಳಿ ಮಕ್ಕಳಿಗೆ ಬಲೂನ್ ತೆಗೆದುಕೊಳ್ಳವಾಗ ಸಿಲಿಂಡರ್ ಸ್ಫೋಟವಾಗಿ ಕಾಲುಗಳಿಗೆ ಗಾಯವಾಗಿತ್ತು. ಯಾವುದೇ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳದೇ ಸೈಕಲ್ ಮೇಲೆ ಸಿಲಿಂಡರ್ ಇರಿಸಿಕೊಂಡು ಬಲೂನ್‌ಗೆ ಗಾಳಿ ತುಂಬಿಸುವ ವೇಳೆ ಈ ಘಟನೆ ನಡೆದಿದೆ. ಹೀಗಾಗಿ, ಸಲೀಂ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೊಟ್ರೇಶ್ ದೂರು ನೀಡಿದ್ದಾರೆ. ಇದೇ ವೇಳೆ, ಲಷ್ಕರ್‌ ಮೊಹಲ್ಲಾದ ಶರೀಫ್‌ ಲಾಡ್ಜ್‌ ನಲ್ಲಿ ಮೃತ ಸಲೀಂನೊಂದಿಗೆ ವಾಸವಿದ್ದ ಅರ್ಬಾಜ್‌, ರಿಜ್ವಾನ್‌ ಮತ್ತು ರಾಜು ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಎನ್‌ಐಎ ತಂಡ ಭೇಟಿ: ಈ ಮಧ್ಯೆ, ಘಟನೆ ನಡೆದ ಮೈಸೂರು ಅರಮನೆ ಜಯಮಾರ್ತಾಂಡ ಗೇಟ್ ಬಳಿಯ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೂವರು ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಮಾಹಿತಿ ಪಡೆದು ತೆರಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದೇ ವೇಳೆ, ಶುಕ್ರವಾರ ಬೆರಳಚ್ಚು ತಜ್ಞರು, ಪೊಲೀಸ್‌ ಇಲಾಖೆಯ ವಿವಿಧ ತಂಡಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿದ್ದಾರೆ. ಸ್ಥಳದಲ್ಲಿ ಬಿಳಿ ಪೌಡರ್‌ ದೊರೆತಿದೆ. ಬಲೂನಿಗೆ ತುಂಬಲು ಸೋಡಿಯಂ ಹೈಡ್ರಾಕ್ಸೈಡ್‌ ಹಾಗೂ ಕಾಸ್ಟಿಕ್‌ ಸೋಡ ಬಳಸಲಾಗಿದೆ ಎನ್ನಲಾಗಿದೆ. ಹೀಗಾಗಿ, ನಗರ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

ಗ್ಯಾಸ್ ಬಲೂನ್ ಮಾರಾಟ ನಿಷೇಧ

ಘಟನೆ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಮೂಲಕ ಗಾಳಿ ತುಂಬಿ ಬಲೂನ್ ಮಾರಾಟ ಮಾಡುವುದನ್ನು ಜಿಲ್ಲಾಡಳಿತ ನಿಷೇಧಿಸಲು ಮುಂದಾಗಿದೆ. ಸಿಲಿಂಡರ್‌ ಗಳಿಂದ ಗಾಳಿ ತುಂಬುವುದು ಅಪಾಯಕಾರಿಯಾಗಿದೆ. ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಜನನಿಬಿಡ ಪ್ರದೇಶಗಳು ಮತ್ತು ಪ್ರವಾಸಿ ತಾಣಗಳಲ್ಲಿ ಇದನ್ನು ನಿಷೇಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.