Mysuru kyathamaranahalli mosque reopen controversia: ಮೈಸೂರಿನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಕೊಲೆಗೆ ಕಾರಣವಾಗಿದ್ದ ವಿವಾದಿತ ಮಸೀದಿ ರೀ ಓಪನ್‌ಗೆ ಬಾರಿ ಕಸರತ್ತು ನಡೆದಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಸಭೆಯಲ್ಲಿ ಎರಡೂ ಗುಂಪುಗಳು ತಮ್ಮದೇ ವಾದವನ್ನು ಮಂಡಿಸಿವೆ.
ಮೈಸೂರು (ಮಾ.14): ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಕೊಲೆಗೆ ಕಾರಣವಾಗಿದ್ದ ವಿವಾದಿತ ಮಸೀದಿ ರೀ ಓಪನ್‌ಗೆ ಬಾರಿ ಕಸರತ್ತು ನಡೆದಿದೆ. ಹೈ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದು ಸ್ಥಳೀಯರ ಅಭಿಪ್ರಾಯ ಸಂಗ್ರಹ ಮಾಡಿದ ಜಿಲ್ಲಾಧಿಕಾರಿಗಳು, ಸಭೆಯ ಅಭಿಪ್ರಾಯವನ್ನು ಹೈಕೋರ್ಟ್ ಗೆ ರವಾನಿಸುವ ತಯಾರಿ ಮಾಡಿದ್ದಾರೆ. ಆದರೆ ಸಭೆಯಲ್ಲೂ ಎರಡೂ ಗುಂಪುಗಳು ತಮ್ಮದೇ ವಾದವನ್ನು ಮುಂದಿಟ್ಟಿವೆ.
ಅದು 2016ರ ಮಾರ್ಚ್ ತಿಂಗಳು. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಬರ್ಬರ ಹತ್ಯೆ ಜರುಗಿತ್ತು. ಹತ್ಯೆಗೆ ಮೂಲ ಕಾರಣವಾಗಿದ್ದು ಉದಯಗಿರಿ ಠಾಣೆ ವ್ಯಾಪ್ತಿಯ ಕ್ಯಾತಮಾರನಹಳ್ಳಿ ಗ್ರಾಮದ ಆ ಮಸೀದಿಯಾಗಿತ್ತು. ಸ್ಥಳೀಯರ ಭಾರಿ ವಿರೋಧದ ನಡುವೆ ಆರಂಭವಾಗಿದ್ದ ಮದರಸಾ/ಮಸೀದಿ ಹಿಂದೂ ಕಾರ್ಯಕರ್ತ ರಾಜು ಹತ್ಯೆಯಿಂದ ಮುಚ್ಚಲ್ಪಟ್ಟಿತ್ತು. ಆದರೆ 9 ವರ್ಷಗಳ ನಂತರ ಮತ್ತೆ ಅದೇ ಸ್ಥಳದಲ್ಲಿ ಮದರಸ ತೆರೆಯಲು ಪ್ರಯತ್ನಿಸುತ್ತಿದ್ದು ಇದಕ್ಕೆ ಮತ್ತೆ ವಿರೋಧಗಳು ಹೆಚ್ಚಾಗಿವೆ. ಈ ಬಗ್ಗೆ ಸ್ಥಳೀಯರ ಅಭಿಪ್ರಾಯ ಸಂಗ್ರಹಕ್ಕೆ ಮೈಸೂರು ಜಿಲ್ಲಾಧಿಕಾರಿಗಳು ಸಭೆ ನಡೆಸಿದರು.
ಇದನ್ನೂ ಓದಿ: ಸಿದ್ದರಾಮಯ್ಯನವರು ಮಂಡಿಸಿದ್ದು ಅಲ್ಪಸಂಖ್ಯಾತರ ಓಲೈಕೆಯ ಬಜೆಟ್: ಸಂಸದ ಯದುವೀರ್ ಒಡೆಯರ್ ಟೀಕೆ
ಮಸೀದಿ ವಿರೋಧಿಸುತ್ತಿರುವ ಕ್ಯಾತಮಾರನಹಳ್ಳಿ ಗ್ರಾಮಸ್ಥರ ಪರವಾಗಿ ಯಜಮಾನರುಗಳು, ಮಸೀದಿ ಪರವಾಗಿ ಹಲೀಂ ಶಾದಿಯಾ ಟ್ರಸ್ಟ್ ಸದಸ್ಯರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರಡ್ಡಿ ನೇತೃತ್ವದಲ್ಲಿ ಕಚೇರಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಮುತ್ತುರಾಜ್, ಮಹಾ ನಗರಪಾಲಿಕೆ ಆಯುಕ್ತ ಸೇಕ್ ತನ್ವೀರ್ ಆಸಿಫ್, ಕ್ಯಾತಮಾರನಹಳ್ಳಿ ಗ್ರಾಮದ ಯಜಮಾನರಾದ ಶಿವಕುಮಾರ್, ನಾರಾಯಣಪ್ಪ, ಲೋಕೇಶ್, ಮೂರ್ತಿ, ಆನಂದ್, ರಾಜು , ಕುಮಾರ್, ಪಾಪಣ್ಣ, ಮಾದಪ್ಪ, ಮಹಾದೇವಸ್ವಾಮಿ 20 ಜನ ಹಾಗೂ ಸ್ಥಳೀಯ ಮುಸ್ಲಿಮ. ಮುಖಂಡರಾ ಶೌಕತ್ ಪಾಷ, ಸಲೀಂಪಾಷ, ಅಕ್ಬರ್ ಪಾಷ, ಮೌಲಾನಾ ಅಯೂಬ್ ಅನ್ಸಾರಿ, ಮೌಲಾನಾ ಅಕ್ಬರ್ ಷರೀಫ್ ರವರು ಭಾಗವಹಿಸಿದ್ದರು.
ಸಭೆಯ ಆರಂಭದಲ್ಲೇ ಜಿಲ್ಲಾಧಿಕಾರಿಯವರು ಕ್ಯಾತಮಾರನಹಳ್ಳಿ ಗ್ರಾಮದ ಹಲೀಂ ಶಾದಿಯಾ ಮದರಸ ವಿಷಯದಲ್ಲಿ ಜನರ ಅಭಿಪ್ರಾಯ ಪಡೆಯುವುದು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇವೆ. ಈ ವಿಚಾರದಲ್ಲಿ ಜಿಲ್ಲಾಡಳಿತ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಸ್ಲಿಂ ಮುಖಂಡ ಶೌಕತ್ ಪಾಷ, 2007-08 ರ ಸಮಯದಲ್ಲಿ ಹಲೀಂ ಶಾದಿಯಾ ಟ್ರಸ್ಟ್ ನವರು ಪ್ರಾಪರ್ಟಿ ಖರೀದಿಸಿ ನಗರ ಪಾಲಿಕೆಯಿಂದ ಮದರಸ & ಮಸೀದಿ ಕಟ್ಟಲು ಲೈಸನ್ಸ್ ಪಡೆದು ತೆರಿಗೆಯನ್ನು ಕಟ್ಟಿರುತ್ತಾರೆ. 2009 ರಲ್ಲಿ ಮದಸರದಲ್ಲಿ ಮಾಂಸ ವಿಷಯದಲ್ಲಿ ವಾತಾವರಣ ಕೆಟ್ಟು ಹೋಗುತ್ತವೆ. 2010 ರಲ್ಲಿ ಒಂದು ಸಮಿತಿಯನ್ನು ರಚಿಸಲಾಯಿತು. ಆದರೆ 2013 ರವರಗೆ ಯಾವುದೇ ಮೀಟಿಂಗ್ ಆಗುವುದಿಲ್ಲ. ಅಲ್ಲಿ ಅರೇಬಿಕ್ ಶಾಲೆಗೆ ಮದರಸ ತೆರೆಯಲು ಅವಕಾಶ ಕೊಡಬೇಕು. ಈ ವಿಚಾರದಲ್ಲಿ ನ್ಯಾಯಾಲಯದಲ್ಲಿ ಯಾವುದೇ ತೀರ್ಮಾನ ಬಂದರೂ ಸಹ ಸ್ವೀಕರಿಸುತ್ತೇವೆ ಎಂದು ವಾದ ಮಂಡಿಸಿದರು.
ಸಭೆ ಬಳಿಕ ಮಾತನಾಡಿದ ಶೌಕತ್ ಪಾಷಾ ಅದು ಮಸೀದಿ ಅಲ್ಲ, ಅದು ಮದರಸ. ಮದರಸವನ್ನೇ ಮಾರು ನಾಲ್ಕು ವರ್ಷ ನಡೆಸಿದ್ದೇವೆ. ಆ ನಂತರ ನಡೆಯಬಾರದ ಒಂದು ಘಟನೆ ನಡೆಯಿತು. ಈಗ ನಮಗೆ ಸೌಹರ್ಧಯುತವಾಗಿ ಮತ್ತೆ ಮದರಸ ನಡೆಸಲು ಅವಕಾಶ ಕೊಡಿ ಎಂದು ಕೇಳಿದ್ದೇವೆ. ಇದರಲ್ಲಿ ಯಾವ ರಾಜಕೀಯವೂ ಇಲ್ಲ. ನಮಗೆ ಮದರಸ ನಡೆಸಲು ಅವಕಾಶ ಕೊಡಿ. ಇದು ಮಸೀದಿ ಎಂಬ ಭಾವನೆಯಲ್ಲಿ ಕೆಲವರು ಅದಕ್ಕೆ ವಿರೋಧ ಮಾಡುತ್ತಿದ್ದಾರೆ ಅಷ್ಟೇ. ಅದು ಮಸೀದಿಯಲ್ಲ ಮದರಸ ಅಷ್ಟೇ ಎಂದರು.
ಮತ್ತೊಂದೆಡೆ ಕ್ಯಾತಮಾರನಹಳ್ಳಿ ಗ್ರಾಮದ ಯಜಮಾನರಾದ ಶಿವಕುಮಾರ್ 2009 ರಲ್ಲಿ ನಡೆದ ಘಟನೆಗಳು ಈ ಭಾಗದಲ್ಲಿ ಬಹಳ ಆತಂಕವನ್ನು ಉಂಟುಮಾಡುತ್ತಿದೆ. ವಸತಿ ವಿಷಯದಲ್ಲಿ ಆಸ್ತಿಯನ್ನು ಕೊಡಲಾಗಿತ್ತು. ಆದರೆ ಬದಲಾಗಿ ನಡೆದಿರುವುದು ಗೊತ್ತಿದೆ. ಮದೀನ ಮಸೀದಿ ಪಕ್ಕದಲ್ಲೇ ಇದೆ. ಇದಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ. ಅಮಾಯಕರಿಗೆ ತೊಂದರೆ ಆಗಬಾರದು. ಮುಸ್ಲಿಂ ಭಾಂದವರು ಅರ್ಥ ಮಾಡಿಕೊಳ್ಳಿ ಈ ವಿಷಯದಿಂದ ಕೈ ಬಿಟ್ಟು ಸಹಕರಿಸಿ ಎಂದು ಕೇಳಿಕೊಂಡರು.
ಇದನ್ನೂ ಓದಿ: ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡಬೇಕಿಲ್ಲ, ಸರ್ಟಿಫಿಕೇಟ್ ಕೊಟ್ಟರೆ ಸಾಕು: ಸಂಸದ ಯದುವೀರ್
ಸಭೆ ನಂತರ ಮಾತನಾಡಿದ ಹಿಂದೂ ಮುಖಂಡ ಶಿವಕುಮಾರ್ ವಿವಾದಿತ ಮಸೀದಿ ವಿಚಾರದಲ್ಲಿ ಯಥಸ್ಥಿತಿಯನ್ನ ಜಿಲ್ಲಾಡಳಿತ ಕಾಯ್ದುಕೊಳ್ಳಬೇಕು. ಮಸೀದಿ ಮತ್ತೊಂದು ಯಾವುದು ತೆರೆಯುವುದು ಬೇಡ. ಅದರಿಂದ ಬಹಳ ದೊಡ್ಡ ಕೆಟ್ಟ ಘಟನೆಗಳು ನಡೆದುಹೋಗಿದೆ. ಶಾಂತಿ ಸೌಹರ್ಧತೆ ದೃಷ್ಟಿಯಿಂದ ಆ ಸ್ಥಳದಲ್ಲಿ ಯಾವ ಚಟುವಟಿಕೆಯೂ ಆರಂಭವಾಗುವುದು ಬೇಡ. ಈ ಬಗ್ಗೆ ನಾವು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ ಎಂದರು.
ಒಟ್ಟಾರೆ ಕಳೆದ 9 ವರ್ಷ ಗಳಿಂದ ಹಿಂದೂ ಮುಸ್ಲೀಮರ ಭಾವೈಕ್ಯಗೆ ಧಕ್ಕೆ ಉಂಟು ಮಾಡಿರುವ ವಿವಾದಿತ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಮಸೀದಿ ತೆರೆಯಬಾರದು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಸದ್ಯ ಸಭೆಯ ಎರಡೂ ಗುಂಪಿನ ಅಭಿಪ್ರಾಯ ಹೈಕೋರ್ಟ್ ಗೆ ಸಲ್ಲಿಕೆಯಾಗುತ್ತಿದ್ದು, ಎಲ್ಲರ ಚಿತ್ತ ಹೈಕೋರ್ಟ್ ನತ್ತ ನೆಟ್ಟಿದೆ.
ಕ್ಯಾಮೆರಾಮನ್ ನವೀನ್ ಜೊತೆಗೆ ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.
