ಮುಸ್ಲಿಮರಿಗೆ ಭಾಗವಹಿಸಲು ಅವಕಾಶ ಇಲ್ಲ, ಕಠಿಣ ಕಾನೂನು ಪಾಲಿಸಲು ಮುಂದಾದ ಮುಜರಾಯಿ ಇಲಾಖೆ
* ಮುಂಬರುವ ಹರಾಜಿನಲ್ಲಿ ಮುಸ್ಲಿಮರಿಗೆ ಭಾಗವಹಿಸಲು ಅವಕಾಶ ಇಲ್ಲ
* ಹಿಂದೂಗಳು ಸಬ್ ಲೀಸ್ ಕೂಡ ಅನ್ಯ ಧರ್ಮೀಯರಿಗೆ ನೀಡುವಂತಿಲ್ಲ
* ಮುಜರಾಯಿ ದೇವಸ್ಥಾನದ ಅಂಗಡಿಗಳಲ್ಲಿ ಮುಸಲ್ಮಾನರಿಗಿಲ್ಲ ಅವಕಾಶ
ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಏ.12): ರಾಜ್ಯದಲ್ಲಿ ಹಿಂದೂ-ಮುಸ್ಲಿಂ ನಡುವಿನ ಧರ್ಮ ದಂಗಲ್ ನಿಂದಾಗಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಎಚ್ಚೆತ್ತುಕೊಂಡಿದೆ. ಈಗಾಗಲೇ ಜಾತ್ರಾ ಮಹೋತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಹಲವೆಡೆ ನಿರ್ಬಂಧಗಳನ್ನ ವಿಧಿಸಲಾಗ್ತಿದೆ. ಹೀಗಾಗಿ ಕಠಿಣ ಕಾನೂನು ಪಾಲಿಸಲು ಮುಂದಾದ ಮುಜರಾಯಿ ಇಲಾಖೆ ಕೂಡ ಮುಂದಾಗಿದೆ.
ಮುಜರಾಯಿ ದೇವಸ್ಥಾನದ ಅಂಗಡಿಗಳನ್ಮ ಇನ್ಮುಂದೆ ಅನ್ಯಧರ್ಮೀಯರಿಗೆ ಅವಕಾಶ ನೀಡದೆ ಇರಲು ತೀರ್ಮಾನಿಸಿದೆ. ಹಿಂದೂ ಧಾರ್ಮಿಕ ದತ್ತಿ ಕಾನೂನಿನಲ್ಲಿರುವ ಅಂಶಗಳನ್ನೇ ಇಟ್ಟುಕೊಂಡು ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಮುಸ್ಲಿಮರು ಸೇರಿದಂತೆ ಅನ್ಯ ಧರ್ಮಿಯರಿಗೆ ಹರಾಜಿನಲ್ಲಿ ಅವಕಾಶ ಮಾಡಿಕೊಡದಿರಲು ನಿರ್ಧರಿಸಿದೆ.
ಮುಜರಾಯಿ ಅಂಗಡಿ ಮಳಿಗೆಗಳ ಹರಾಜಿನಲ್ಲಿ 2012 ರ ಹಿಂದೆ ಮುಸ್ಲಿಮರೆಲ್ಲಾ ಭಾಗವಹಿಸ್ತಿದ್ರು. ಅಲ್ಲದೇ ಹಿಂದೂಗಳು ಪಡೆದ ಅಂಗಡಿಗಳನ್ನು ಸಬ್ ಲೀಸ್ ಮೂಲಕ ಮುಸ್ಲಿಮರು ನಡೆಸುತ್ತಿದ್ದರು. ಆದರೆ ಈಗ ಕಾನೂನಿನ ಅಂಶಗಳನ್ನ ಇಟ್ಟುಕೊಂಡು ಮುಂದೆ ಬರುವ ಹರಾಜಿನಲ್ಲಿ ಮುಸ್ಲಿಮರಿಗೆ ಭಾಗವಹಿಸಲು ಅವಕಾಶ ಇಲ್ಲದಂತೆ ಹರಾಜು ಪ್ರಕ್ರಿಯೆಗಳು ನಡೆಯಲಿವೆ. ಇದರ ಜೊತೆಗೆ ಹಿಂದೂಗಳು ಪಡೆದ ಅಂಗಡಿಗಳನ್ನ ಸಬ್ ಲೀಸ್ ಕೂಡ ಅನ್ಯ ಧರ್ಮೀಯರಿಗೆ ನೀಡುವಂತಿಲ್ಲ. ಒಂದು ವೇಳೆ ಹಿಂದೂಗಳು ಹರಾಜಿನಲ್ಲಿ ಪಡೆದ ಅಂಗಡಿಯನ್ನು ಅನ್ಯಧರ್ಮಿಯರಿಗೆ ನೀಡಿದರೆ ಆ ದೇವಾಲಯದ EO (Executive officer) ಸಸ್ಪೆಂಡ್ ಆಗಲಿದ್ದಾರೆ. ಹೀಗಾಗಿ ಯಾರು ಹರಾಜಿನಲ್ಲಿ ಪಡೆಯುತ್ತಾರೆಯೋ ಅವರೇ ಅಂಗಡಿಗಳನ್ನ ನಡೆಸಬೇಕು.
ಹಿಂದೂ- ಮುಸ್ಲಿಂ ವ್ಯಾಪಾರ ವಿವಾದಕ್ಕೆ ಬ್ರೇಕ್ ಹಾಕಲು ಮುಜರಾಯಿ ಇಲಾಖೆ ಪ್ಲಾನ್
ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಪ್ರತಿಕ್ರಯಿಸಿದ ಬೆಂಗಳೂರು ನಗರ ಧಾರ್ಮಿಕ ದತ್ತಿ ತಹಶೀಲ್ದಾರ್ ಅರವಿಂದ್ ಬಾಬು, ಈ ಮೊದಲೆಲ್ಲಾ ಮುಜರಾಯಿ ದೇಗುಲದ ಮಳಿಗೆಗಳಲ್ಲಿ ಮುಸ್ಲಿಮರು ಹರಾಜಿನಲ್ಲಿ ಭಾಗವಹಿಸಿದ್ದು ಇದೆ. ಕೆಲವರು ಮುಸ್ಲಿಮರಿಗೆ ಸಬ್ ಲೀಸ್ ಕೂಡ ಕೊಟ್ಟಿರೋದು ಇದೆ. ಆದರೆ ಇನ್ಮುಂದೆ ಅದೆಲ್ಲಾ ನಡೆಯಲ್ಲ. ಇಷ್ಟು ದಿನ ಮುಜರಾಯಿ ಕಾನೂನು ಕಠಿಣವಾಗಿ ಜಾರಿ ಆಗಿರಲಿಲ್ಲ. ಈಗಿನ ಆಯುಕ್ತರರಾದ ರೋಹಿಣಿ ಸಿಂಧೂರಿ ಅವರು ಬಂದ ಮೇಲೆ ಕಾನೂನು ಜಾರಿಗೊಳಿಸುವಿಕೆ ಕಠಿಣವಾಗಿದೆ. ಕಾನೂನಿನ ಪ್ರಕಾರವೇ ಅನ್ಯಧರ್ಮಿಯರಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಇಲ್ಲ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ರು.
ಬೆಂಗಳೂರಿನಲ್ಲಿ ಹರಾಜಿಗೆ ರೆಡಿ ಇದೆ 45 ಅಂಗಡಿಗಳು
ಬೆಂಗಳೂರಲ್ಲಿ ಟೆಂಡರ್ ಮುಗಿದಿರುವ ಸುಮಾರು 48 ಅಂಗಡಿಗಳಿಗೆ ನೋಟಿಸ್ ಕೊಡಲಾಗಿದೆ. ಒಟ್ಟು 45 ಅಂಗಡಿಗಳು ಹರಾಜಿಗಾಗಿ ರೆಡಿ ಇವೆ. ಬಂಡಿ ಶೇಷಮ್ಮ ಚೌಲ್ಟ್ರಿ ಬಳೇ ಪೇಟೆ, ಶ್ರೀನಿವಾಸ ದೇವಸ್ಥಾನ ಬಳೇಪೇಟೆ, ಸುಗ್ರೀವ ವೆಂಕಟರಮಣ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ, ಸೋಮೇಶ್ವರ ದೇವಸ್ಥಾನ ಬಳೇಪೇಟೆ, ಕಾಡು ಮಲ್ಲೇಶ್ವರ ದೇವಸ್ಥಾನ, ಮಲ್ಲೇಶ್ವರ ಹೀಗೆ ಹಲವು ಕಡೆ ದೇವಾಲಯ ಅಂಗಡಿಗಳಿಗೆ ನೋಟಿಸ್ ಕೂಡ ನೀಡಲಾಗಿದೆ