ಚಲನಚಿತ್ರ ವೀಕ್ಷಣೆಗೆ ದುಬಾರಿ ಟಿಕೆಟ್ ದರ ನಿಗದಿ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನಗೊಳ್ಳುವ ಚಲನಚಿತ್ರಗಳ ವೀಕ್ಷಣೆಯ ಟಿಕೆಟ್ ದರವನ್ನು ಗರಿಷ್ಠ 200 ರು. ಮಿತಿಗೊಳಿಸಿ ಆದೇಶಿಸಿದೆ.
ಬೆಂಗಳೂರು (ಅ.04): ರಾಜ್ಯದ ಮಲ್ಟಿಪ್ಲೆಕ್ಸ್‌ಗಳಲ್ಲಿನ ಚಲನಚಿತ್ರ ಪ್ರದರ್ಶನದ ಟಿಕೆಟ್ ಮೇಲೆ ವಿಧಿಸಿದ್ದ ₹200 ಮಿತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಚಲನಚಿತ್ರ ವೀಕ್ಷಿಸುವವರು ತಮ್ಮ ಟಿಕೆಟ್ ಮತ್ತು ಹಣ ಪಾವತಿಸಿದ ದಾಖಲೆಗಳನ್ನು ಜಾಗರೂಕತೆಯಿಂದ ಇಟ್ಟುಕೊಳ್ಳುವಂತೆ ಚಿತ್ರ ವೀಕ್ಷಕರಿಗೆ ಸರ್ಕಾರ ಸೂಚಿಸಿದೆ.
ಚಲನಚಿತ್ರ ವೀಕ್ಷಣೆಗೆ ದುಬಾರಿ ಟಿಕೆಟ್ ದರ ನಿಗದಿ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನಗೊಳ್ಳುವ ಚಲನಚಿತ್ರಗಳ ವೀಕ್ಷಣೆಯ ಟಿಕೆಟ್ ದರವನ್ನು ಗರಿಷ್ಠ 200 ರು. ಮಿತಿಗೊಳಿಸಿ ಆದೇಶಿಸಿದೆ. ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅದರ ಜತೆಗೆ ಮಲ್ಟಿಪ್ಲೆಕ್ಸ್‌ಗಳು ಮಾರಾಟವಾದ ಪ್ರತಿ ಟಿಕೆಟ್‌ಗೆ ಸಮಗ್ರ ಮತ್ತು ಲೆಕ್ಕಪರಿಶೋಧಿಸಬಹುದಾದ ದಾಖಲೆಗಳನ್ನು ನಿರ್ವಹಿಸುವಂತೆ ನಿರ್ದೇಶಿಸಿದೆ.
ಪ್ರಮುಖವಾಗಿ ಟಿಕೆಟ್ ಮಾರಾಟದ ದಿನಾಂಕ, ಸಮಯ, ಆನ್‌ಲೈನ್ ಅಥವಾ ಭೌತಿಕ ಕೌಂಟರ್‌ಗಳ ಮೂಲಕ ಟಿಕೆಟ್ ಮಾರಾಟದ ವಿವರ, ಕ್ರೆಡಿಟ್/ಡೆಬಿಟ್ ಕಾರ್ಡ್, ಯುಪಿಐ ನೆಟ್ ಬ್ಯಾಂಕಿಂಗ್ ಅಥವಾ ನಗದು ಪಾವತಿ ವಿವರ, ಸಂಗ್ರಹಿಸಿದ ಮೊತ್ತ, ಜಿಎಸ್‌ಟಿ ಮೊತ್ತ ಸೇರಿ ಸಮಗ್ರ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಎಲ್ಲ ನಗದು ವಹಿವಾಟುಗಳಿಗೆ ಡಿಜಿಟಲ್ ಆಗಿ ಪತ್ತೆ ಹಚ್ಚಬಹುದಾದ ರಸೀದಿಗಳನ್ನು ನೀಡಬೇಕು ಮತ್ತು ಪ್ರತಿದಿನ ನಗದು ರಿಜಿಸ್ಟರ್‌ಗಳನ್ನು ಮಲ್ಟಿಪ್ಲೆಕ್ಸ್‌ನ ವ್ಯವಸ್ಥಾಪಕರು ಸಹಿ ಮಾಡಬೇಕು.
ಒಂದು ವೇಳೆ ಹೈಕೋರ್ಟ್ ಅಂತಿಮ ತೀರ್ಪು ಸರ್ಕಾರದ ಪರ ಬಂದರೆ, ಮಲ್ಟಿಪ್ಲೆಕ್ಸ್ ಗಳು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಸಂಗ್ರಹಿಸಿದ ಎಲ್ಲ ಮೊತ್ತವನ್ನು ಟಿಕೆಟ್‌ಗಳನ್ನು ಬುಕ್ ಮಾಡಿದ ಗ್ರಾಹಕರಿಗೆ ಬುಕ್ಕಿಂಗ್‌ಗೆ ಬಳಸಿದ ಪಾವತಿ ವಿಧಾನದ ಮೂಲಕವೇ ಮರುಪಾವತಿಸಬೇಕು ಎಂದು ನಿರ್ದೇಶಿಸಲಾಗಿದೆ.
ಮರುಪಾವತಿಗೆ ಅನುಕೂಲ
ಹೀಗಾಗಿ ಚಲನಚಿತ್ರ ವೀಕ್ಷಣೆ ಮಾಡಿದವರು ಭೌತಿಕ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪಡೆದ ಟಿಕೆಟ್‌ಗಳನ್ನು ಭದ್ರವಾಗಿ ಕಾಯ್ದಿರಿಸಿಕೊಳ್ಳಬೇಕು. ಅದರ ಜತೆಗೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ಎಲ್ಲ ರೀತಿಯ ಸಿನೆಮಾ ಟಿಕೆಟ್‌ಗಳ ಮಾರಾಟದ ಸಂಪೂರ್ಣ ದಾಖಲೆಗಳನ್ನು ನಿರ್ವಹಿಸಬೇಕು. ಅದರಿಂದ ಚಿತ್ರ ವೀಕ್ಷಿಸಿದವರಿಗೆ ಹೆಚ್ಚುವರಿ ಮೊತ್ತ ಮರುಪಾವತಿಗೆ ಅನುಕೂಲವಾಗಲಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
