ಮುಡಾ ಹಗರಣ: ಸೆ.2ಕ್ಕೆ ಸಿದ್ದರಾಮಯ್ಯ ವಿರುದ್ಧದ ದೂರುಗಳ ವಿಚಾರಣೆ
ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಸೈಟ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಲ್ಲಿಕೆಯಾಗಿರುವ ದೂರುಗಳ ವಿಚಾರಣೆಯನ್ನು ಹೈಕೋರ್ಟ್ ಸೂಚನೆ ಮೇರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬರುವ ಸೆ.2ಕ್ಕೆ ಮುಂದೂಡಿದೆ.
ಬೆಂಗಳೂರು (ಆ.21): ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಸೈಟ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಲ್ಲಿಕೆಯಾಗಿರುವ ದೂರುಗಳ ವಿಚಾರಣೆಯನ್ನು ಹೈಕೋರ್ಟ್ ಸೂಚನೆ ಮೇರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬರುವ ಸೆ.2ಕ್ಕೆ ಮುಂದೂಡಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಮೇರೆಗೆ ವಿಚಾರಣೆಗೆ ಅಂಗೀಕರಿಸುವ ಕುರಿತು ಮಂಗಳವಾರ ಆದೇಶ ಕಾಯ್ದಿರಿಸಲಾಗಿತ್ತು. ಆದರೆ, ಹೈಕೋರ್ಟ್ ಇದೇ ತಿಂಗಳು 29ರವರೆಗೆ ಪ್ರಕರಣಕ್ಕೆ ತಡೆ ನೀಡಿರುವ ಕಾರಣ, ಸೆ.2ಕ್ಕೆ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ.
ಸಿದ್ದರಾಮಯ್ಯ ವಿರುದ್ಧ ಆಭಿಯೋಜನೆಗೆ ಅನುಮತಿ ನೀಡಿರುವ ಆದೇಶ ಮತ್ತು ಹೈಕೋರ್ಟ್‌ನ ಸೂಚನೆಯ ಆದೇಶವನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಯಿತು. ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅಂಗೀಕರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ವಾದ ಆಲಿಸಿದ ನ್ಯಾಯಾಲಯ ಮಂಗಳವಾರ ಆದೇಶ ನೀಡಲು ಕಾಯ್ದಿರಿಸಿತ್ತು. ಇದೀಗ ಹೈಕೋರ್ಟ್ ಸೂಚನೆ ಮೇರೆಗೆ ಮುಂದೂಡಿಕೆ ಮಾಡಲಾಗಿದೆ. ಈ ನಡುವೆ, ಮತ್ತೋರ್ವ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ದೂರಿನ ವಿಚಾರಣೆಯು ಬುಧವಾರ ಇದ್ದು, ಅದು ಸಹ ಮುಂದೂಡಿಕೆಯಾಗುವ ಸಾಧ್ಯತೆ ಇದೆ.
ಸಿಎಂ ರಾಜೀನಾಮೆಗೆ ನಳಿನ್ ಕುಮಾರ್ ಆಗ್ರಹ: ಕಾಂಗ್ರೆಸ್ ನಾಯಕರು ಹತಾಶರಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ನೈತಿಕತೆ ಇದ್ದರೆ ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ. ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು, ಮೂಡಾ ಹಗರಣದಲ್ಲಿ ಸಾವಿರಾರು ಕೋಟಿ ರು. ಲೂಟಿ ಆಗಿದೆ. ವಾಲ್ಮೀಕಿ ನಿಗಮದಲ್ಲೂ 187 ಕೋಟಿ ರು. ಹಗರಣ ಆಗಿದೆ. ಆದರೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧಿಕಾರದ ಆಸೆಗೆ ಅಂಟಿ ಕುಳಿತುಕೊಂಡಿದ್ದಾರೆ ಎಂದರು.
ನನ್ನ ವಿರುದ್ಧ ಬಿಜೆಪಿಗರ ಸುಳ್ಳು ಆರೋಪ: ಸಿಎಂ ಸಿದ್ದರಾಮಯ್ಯ
ಹೋರಾಟದ ನೆಪದಲ್ಲಿ ಕಾಂಗ್ರೆಸ್ ಆರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತಿದೆ. ರಾಜ್ಯಪಾಲರ ನಡೆ ಸಮರ್ಥನೀಯವಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವ ರಾಜ್ಯಪಾಲರನ್ನು ನಿಂದಿಸುತ್ತಿರುವುದು ಕಾಂಗ್ರೆಸ್‌ನ ಹೇಯ ರಾಜಕಾರಣ ಎಂದು ನಳಿನ್ ಹೇಳಿದರು.