ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಪಾರ್ವತಿ ಸಿದ್ದರಾಮಯ್ಯ ಸೇರಿದಂತೆ ಆರೋಪಿಗಳಿಗೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದೆ. ದೂರುದಾರ ಸ್ನೇಹಮಯಿ ಕೃಷ್ಣಗೆ ನೋಟೀಸ್ ನೀಡಲಾಗಿದೆ.
ಬೆಂಗಳೂರು (ಫೆ.19): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿವೇಶನ ಹಂಚಿಕೆಯಲ್ಲಿ ಹಗರಣ ನಡೆದಿದೆ ಎಂದು ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಗೆ ಲೋಕಾಯುಕ್ತ ಇಲಾಖೆ ನೊಟೀಸ್ ನೀಡಲಾಗಿದೆ. ಇದರಲ್ಲಿ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಪಾರ್ವತಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ದೇವರಾಜು ವಿರುದ್ಧ ಸಾಕ್ಷಾಧಾರಗಳ ಕೊರತೆಯಿದೆ. ಆದ್ದರಿಂದ ಎಲ್ಲ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡುವುದಾಗಿ ತಿಳಿಸಲಾಗಿದೆ.
ಮೈಸೂರಿನ ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಹಂಚಿಕೆ ಮಾಡಲಾದ 14 ನಿವೇಶನಗಳಲ್ಲಿ ಅಕ್ರಮ ನಡೆದಿದೆ ಎಂದು ರಾಜ್ಯಪಾಲರಿಗೆ ದೂರು ನೀಡಿದ್ದರು. ಇದಾದ ನಂತರ ಮೈಸೂರಿನಲ್ಲಿ ಲೋಕಾಯುಕ್ತ ಇಲಾಖೆಗೆ ದೂರು ಸಲ್ಲಿಸಿ ತನಿಖೆಗೆ ಮನವಿ ಮಾಡಿದ್ದರು. ಇದೀಗ ಹಲವು ದಿನಗಳಿಂದ ತನಿಖೆ ಮಾಡಿದ ಲೋಕಾಯುಕ್ತ ಪೊಲೀಸ್ ಇಲಾಖೆಯು ಇದೀಗ ದೂರುದಾರ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರಿಗೆ ನೋಟೀಸ್ ನೀಡಿದ್ದಾರೆ.
ಇದರಲ್ಲಿ ಮುಡಾ ಹಗರಣದ ತನಿಖೆಯಲ್ಲಿ ತನಿಖಾಧಿಕಾರಿಗಳಿಗೆ ಈ ಪ್ರಕರಣ ಸಿವಿಲ್ ಸ್ವರೂಪದ್ದೆಂದು, ತನಿಖೆ ನಡೆಸಲು ತಕ್ಕುದಲ್ಲವೆಂದು, ಈ ಸಂಗತಿ ಅಥವಾ ಕಾನೂನಿನ ತಪ್ಪು ತಿಳುವಳಿಕೆಯೆಂದು, ಕ್ರಮ ಜರುಗಿಸತಕ್ಕುದಲ್ಲವೆಂದು (ಇದರಡಿಯಲ್ಲಿ ತನಿಖೆ ನಡೆಸದೆ ವಜಾ ಮಾಡಿದ ಮೊಕದ್ದಮೆಗಳು ಬರುತ್ತವೆ) ಹಾಗೂ ಮುಖ್ಯವಾಗಿ ಸಾಕ್ಷ್ಯಾಧಾರಗಳ ಕೊರತೆ ಎಂದು ಕಂಡು ಬಂದಿದೆ. ನೀವು ಈ ವರದಿಯನ್ನು ವಿರೋಧಿಸುವುದಿದ್ದರೆ, ತಾವು ಈ ನೋಟೀಸು ತಲುಪಿದ ಒಂದು ವಾರದೊಳಗಾಗಿ ಮೇಲೆ ನಮೂದಿಸಿದ ಮ್ಯಾಜಿಸ್ಟ್ರೇಟರ ಎದುರು ಆ ಬಗ್ಗೆ ವಿರೋಧಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಮುಡಾ ಹಗರಣ.. 2-3 ದಿನದಲ್ಲಿ ಲೋಕಾಯುಕ್ತ ಫೈನಲ್ ರಿಪೋರ್ಟ್! CM in Muda Case | Suvarna News | Suvarna News
ಪ್ರಕರಣದ ಆರೋಪಿ-1 ರಿಂದ ಆರೋಪಿ-4 ರವರೆಗಿನ (ಸಿಎಂ ಸಿದ್ದರಾಮಯ್ಯ, ಪಾರ್ವತಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ದೇವರಾಜು) ಮೇಲಿನ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಬೀತಾಗಿಲ್ಲವಾದ್ದರಿಂದ ಅಂತಿಮ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಳ್ಳುತ್ತಿದೆ. ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ 2016ನೇ ಸಾಲಿನಿಂದ 2024ನೇ ಸಾಲಿನವರೆಗೆ 50:50 ಅನುಪಾತದಲ್ಲಿ ಪರಿಹಾರಾತ್ಮಕ ನಿವೇಶನಗಳನ್ನು ನೀಡಿರುವ ಆರೋಪಗಳ ಬಗ್ಗೆ ಹೆಚ್ಚುವರಿ ತನಿಖೆ ನಡೆಸಿ ಕಲಂ 173 (8) ಸಿ.ಆರ್.ಪಿ.ಸಿ ರೀತ್ಯಾ ಹೆಚ್ಚುವರಿ ಅಂತಿಮ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
