'ಬ್ಲ್ಯಾಕ್‌ಮೇಲರ್' ಎಂದಿದ್ದಕ್ಕೆ ಸಿಎಂ ವಿರುದ್ಧ ಅಬ್ರಾಹಂ ಮಾನಹಾನಿ ದಾವೆ
ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಹಗರಣ ಬೆಳಕಿಗೆ ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟಗಳು ಎದುರಾಗುತ್ತಲೇ ಇದ್ದು, ಇದೀಗ ಮತ್ತೊಂದು ಕಾನೂನು ಸಮಸ್ಯೆ ಎದುರಿಸಬೇಕಾಗಿದೆ.
ಬೆಂಗಳೂರು (ಅ.31): ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಹಗರಣ ಬೆಳಕಿಗೆ ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟಗಳು ಎದುರಾಗುತ್ತಲೇ ಇದ್ದು, ಇದೀಗ ಮತ್ತೊಂದು ಕಾನೂನು ಸಮಸ್ಯೆ ಎದುರಿಸಬೇಕಾಗಿದೆ.
ತಮ್ಮನ್ನು ಬ್ಲ್ಯಾಕ್‌ಮೇಲರ್ ಎಂದು ಕರೆದಿರುವುದಕ್ಕೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಬುಧವಾರ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವ ಟಿ.ಜೆ.ಅಬ್ರಹಾಂ, ತಮ್ಮ ವಿರುದ್ಧ ನೀಡಿರುವ ಹೇಳಿಕೆ ಸಂಬಂಧ ಸಮರ್ಪಕ ದಾಖಲೆಗಳನ್ನು ಒದಗಿಸಬೇಕು ಅಥವಾ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ನನ್ನ ವಿರುದ್ಧ ಹೇಳಿಕೆ ನೀಡುವ ಭರದಲ್ಲಿ ಸಿದ್ದರಾಮಯ್ಯ ಕೆಲವು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಅವರು ನನ್ನನ್ನು ಬ್ಲ್ಯಾಕ್‌ಮೇಲರ್ ಮತ್ತು ಕೆಟ್ಟ ಪೂರ್ವಾಪರ ಹೊಂದಿರುವ ವ್ಯಕ್ತಿ ಎಂದು ಕರೆದಿದ್ದಾರೆ. ಈ ಸಂಬಂಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಡಾ ಹಗರಣದಲ್ಲಿ ಬೈರತಿ ಸುರೇಶ್ ಪಾತ್ರವೂ ಇದೆ: ಸಂಸದ ಕಾಗೇರಿ ಆರೋಪ
ಸಿದ್ದರಾಮಯ್ಯ ವಿರುದ್ಧ ಟಿ.ಜೆ.ಅಬ್ರಹಾಂ ಅವರು ಮೈಸೂರು ಲೋಕಾಯುಕ್ತ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮುಡಾ ಹಗರಣ ಸಂಬಂಧ ದೂರು ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಸಿದ್ದರಾಮಯ್ಯ ಅವರು ಅಬ್ರಹಾಂ ವಿರುದ್ಧ ಹೇಳಿಕೆ ನೀಡಿದ್ದರು.