ಮುಡಾ ಹಗರಣದಲ್ಲಿ ಬೈರತಿ ಸುರೇಶ್ ಪಾತ್ರವೂ ಇದೆ: ಸಂಸದ ಕಾಗೇರಿ ಆರೋಪ
ಕೇಂದ್ರದ ಕಾಂಗ್ರೆಸ್ ಭ್ರಷ್ಟಾಚಾರದ ಜನಕ, ರಕ್ಷಕ ಹಾಗೂ ಪ್ರೋತ್ಸಾಹಕವಾಗಿದೆ. ಆದ್ದರಿಂದಲೇ ಸಿದ್ದರಾಮಯ್ಯರ ರಾಜೀನಾಮೆ ಕೊಡೋಕೆ ಸಾಧ್ಯವಾಗ್ತಿಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದರು.
ಕಾರವಾರ, ಉತ್ತರಕನ್ನಡ (ಅ.21) : ಕೇಂದ್ರದ ಕಾಂಗ್ರೆಸ್ ಭ್ರಷ್ಟಾಚಾರದ ಜನಕ, ರಕ್ಷಕ ಹಾಗೂ ಪ್ರೋತ್ಸಾಹಕವಾಗಿದೆ. ಆದ್ದರಿಂದಲೇ ಸಿದ್ದರಾಮಯ್ಯರ ರಾಜೀನಾಮೆ ಕೊಡೋಕೆ ಸಾಧ್ಯವಾಗ್ತಿಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದರು.
ಮುಡಾ ಹಗರಣ ವಿಚಾರವಾಗಿ ಇಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮುಡಾ ಹಗರಣ ಆರೋಪ ಹೊತ್ತಿರುವ ಸಿದ್ಧರಾಮಯ್ಯ ಹುಂಬತನ ಮಾಡದೇ ನೈತಿಕತೆ ಪ್ರದರ್ಶಿಸಬೇಕು. ಈ ಹಗರಣದಲ್ಲಿ ಬೈರತಿ ಸುರೇಶ್ ಅವರ ಪಾತ್ರವೂ ಇದೆ. ಹೀಗಾಗಿ ಮುಡಾ ಹಗರಣ ಗಂಭೀರವಾಗಿದ್ದು, ಸಿಬಿಐಗೆ ವಹಿಸಬೇಕು ಎಂದರು.
ಬೈರತಿ ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ- ರೇಣುಕಾಚಾರ್ಯ
ಈ ಕಾಂಗ್ರೆಸ್ಸಿಗರು ನೋಡೋದಕ್ಕೆ ಕೈಯಲ್ಲಿ ಸಂವಿಧಾನ ಪುಸ್ತಕ ಹಿಡ್ಕೋತಾರೆ. ಆದ್ರೆ ಅದರ ಅನುಷ್ಠಾನದಲ್ಲಿ ಸಂವಿಧಾನಕ್ಕೆ ಯಾವುದೇ ರೀತಿಯ ಗೌರವ ಕೊಡಲ್ಲ. ರಾಜ್ಯಪಾಲರ ಹುದ್ದೆಗೆ ಬೆಲೆ ಕೊಡಲ್ಲ. ಅಧಿಕಾರಿಗಳ ಮೇಲೆ ಒತ್ತಡ ತಂದು ಕಡತಗಳನ್ನು ತನಿಖಾ ಸಂಸ್ಥೆಗಳಿಗೆ ಕೊಡದಂತೆ ತಡೆದಿದ್ದಾರೆ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಕುಮ್ಮಕ್ಕೂ ಸಹ ಇದೆ. ಕಾಂಗ್ರೆಸ್ ಸರ್ಕಾರ ಎಫ್.ಐ.ಆರ್. ಸರ್ಕಾರ, ಕೋರ್ಟ್ ನಲ್ಲಿರೋ ಸರ್ಕಾರವಾಗಿದೆ. ಅದು ತಮ್ಮ ಭ್ರಷ್ಟಾಚಾರ ಬಯಲಿಗೆಳೆದ, ತಮ್ಮ ತಪ್ಪು ತೋರಿಸಿದ ಬಿಜೆಪಿ ನಾಯಕರನ್ನು ಹುಡುಕಿ ಹುಡುಕಿ ಎಫ್‌ಐಆರ್ ಹಾಕುವ ಕೆಲಸ ಮಾಡುತ್ತಿದೆ. ನಮ್ಮ ಪ್ರಭಾವಿ ನಾಯಕರ ಮೇಲೆ ಕಪ್ಪು ಮಸಿ ಬಳಿಯೋ ಷಡ್ಯಂತ್ರ ಮಾಡುತ್ತಿದೆ. ಈ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ, ರಾಜ್ಯದಲ್ಲಿ ನೂರಕ್ಕೂ ನೂರು ಹಾಫ್ ಕಾಮ್ಸ್ ಮಳಿಗೆಗಳು ಬಂದ್ ಆಗಿವೆ. ಇದೊಂದು ರೈತವಿರೋಧಿ ಸರ್ಕಾರ ಎಂದು ಹರಿಹಾಯ್ದರು.