ಬಿಜೆಪಿ ನಾಯಕರ ಮಾತಿಗೆ ನೊಂದು ಸಿಎಂ ಪತ್ನಿ 14 ಸೈಟ್ ಹಿಂದಿರುಗಿಸಿದ್ದಾರೆ: ಸಚಿವ ಮಂಕಾಳು ವೈದ್ಯ
ಮುಡಾ ನಿವೇಶನಗಳ ಹಂಚಿಕೆ ಹಗರಣ ವಿಚಾರದಲ್ಲಿ ಬಿಜೆಪಿ ನಾಯಕರ ಮಾತಿನಿಂದ ಸಿಎಂ ಸಿದ್ದರಾಮಯ್ಯರ ಪತ್ನಿ ತುಂಬಾ ನೊಂದಿದ್ದಾರೆ. ನೊಂದುಕೊಂಡು ಈ ಸೈಟ್‌ಗಳು ಬೇಡವೇ ಬೇಡ ಎಂದು ಮುಡಾಗೆ ಹಿಂದಿರುಗಿಸಿದ್ದಾರೆ ಎಂದು ಸಚಿವ ಮಂಕಾಳು ವೈದ್ಯ ಪ್ರತಿಕ್ರಿಯಿಸಿದರು.
ಕಾರವಾರ, ಉತ್ತರಕನ್ನಡ (ಅ.1): ಮುಡಾ ನಿವೇಶನಗಳ ಹಂಚಿಕೆ ಹಗರಣ ವಿಚಾರದಲ್ಲಿ ಬಿಜೆಪಿ ನಾಯಕರ ಮಾತಿನಿಂದ ಸಿಎಂ ಸಿದ್ದರಾಮಯ್ಯರ ಪತ್ನಿ ತುಂಬಾ ನೊಂದಿದ್ದಾರೆ. ನೊಂದುಕೊಂಡು ಈ ಸೈಟ್‌ಗಳು ಬೇಡವೇ ಬೇಡ ಎಂದು ಮುಡಾಗೆ ಹಿಂದಿರುಗಿಸಿದ್ದಾರೆ ಎಂದು ಸಚಿವ ಮಂಕಾಳು ವೈದ್ಯ ಪ್ರತಿಕ್ರಿಯಿಸಿದರು.
ಇಂದು ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಹಿಂದೆಯೇ ಹೇಳಿದ್ದೆ, ಇವತ್ತೂ ಹೇಳ್ತೇನೆ, ಸಿಎಂ ಸಿದ್ಧರಾಮಯ್ಯ ಅವರು ಮುಡಾ ವಿಚಾರದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಯಾವುದೇ ಆಸ್ತಿ ಮಾಡಿಕೊಂಡಿಲ್ಲ. ಅವರಿಗೆ ಪತ್ನಿಗಿಂತಲೂ ರಾಜ್ಯದ ಹಿತ ಮುಖ್ಯ. ಯಾವತ್ತು ಹೆಂಡ್ತಿ ಮಕ್ಕಳ ಬಗ್ಗೆ ಚಿಂತಿಸಿದವರಲ್ಲ. ಸದಾ ರಾಜ್ಯದ ಬಡವರು, ದಲಿತ, ಹಿಂದೂಳಿದವರ ಒಳಿತಿಗಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿದವರು. ಆದರೆ ರಾಜಕೀಯ ಕಾರಣಗಳಿಗಾಗಿ ವಿರೋಧಿಗಳು ಸಿಎಂ ಸಿದ್ದರಾಮಯ್ಯರ ಮೇಲೆ ಆರೋಪ ಹೊರಿಸಿದ್ದಾರೆ. ರಾಜಕೀಯ ಟೀಕೆಗಳಿಂದ ನೊಂದು ಸಿಎಂ ಪತ್ನಿ ಎಲ್ಲ ಸೈಟ್‌ಗಳನ್ನು ಹಿಂದಿರುಗಿಸಿದ್ದಾರೆ ಎಂದರು.
ನನ್ನ ಮೇಲಿನ ತೇಜೋವಧೆಗೆ ಮನನೊಂದು, ಪತ್ನಿ 14 ಸೈಟು ವಾಪಸ್ ಕೊಟ್ರು: ಸಿದ್ದರಾಮಯ್ಯ
ಕಳೆದ 40 ವರ್ಷಗಳಿಂದ ಸಿಎಂ ಸಿದ್ದರಾಮಯ್ಯರ ಪತ್ನಿ ಸರಳವಾಗಿ ಜೀವನ ಮಾಡಿದ್ದಾರೆ. ಅವರು ಸಿಎಂ ಪತ್ನಿ ಎಂದು ಯಾವತ್ತೂ ಅಧಿಕಾರ ದುರುಪಯೋಗ ಮಾಡಿಕೊಂಡವರಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಂಡವರಲ್ಲ. ಆದರೆ ಇಂದು ಅಂತವರನ್ನು ರಾಜಕೀಯ ದ್ವೇಷಕ್ಕೆ ಎಳೆದು ತರಲಾಗಿದೆ. ಅವರಿಂದು ಸೈಟ್ ರಿಟರ್ನ್ ಮಾಡಿದ್ದನ್ನು ನೋಡಿ ನನಗೆ ದುಃಖವಾಯ್ತು ಎಂದರು.
ಕೊನೆದಾಗಿ ಬಿಜೆಪಿಯವರಿಗೆ ಕೈಮುಗಿದು ಕೇಳಿಕೊಳ್ತೇನೆ. ಈಗ ಮುಡಾದ 14 ಸೈಟ್‌ಗಳನ್ನು ಹಿಂದಿರುಗಿಸಿ ಆಗಿದೆ. ಈಗ್ಲಾದ್ರೂ ನೆಮ್ಮದಿಯಿಂದ ರಾಜ್ಯದ ಅಭಿವೃದ್ಧಿ ಮಾಡಲು ಬಿಡಿ ಸ್ವಾಮಿ. ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಈಗ ಇದನ್ನು ಇಲ್ಲಿಗೆ ನಿಲ್ಲಿಸೋಣ ಎಂದ ಸಚಿವ.