*ಕಚ್ಚಾ ವಸ್ತುಗಳ ಬೆಲೆ ಏರಿಕೆ ವಿರುದ್ಧ ಆಕ್ರೋಶ*ಪೀಣ್ಯದ 16000 ಕೈಗಾರಿಕೆಗಳು ಬಂದ್‌*ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಮಾಲಿಕರಿಂದ ಪ್ರತಿಭಟನೆ*ಕೂಡಲೇ ಕಚ್ಚಾ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಂತೆ ಆಗ್ರಹ*ಹೋರಾಟಕ್ಕೆ ಕೈಗಾರಿಕಾ ಸಂಘಟನೆಗಳ ಸಾಥ್

ಬೆಂಗಳೂರು (ಡಿ. 21): ಕೈಗಾರಿಕೆಗಳಿಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಂತೆ ಆಗ್ರಹಿಸಿ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಮಾಲೀಕರು (MSME Association) ಸೋಮವಾರ ಉತ್ಪಾದನಾ ಕಾರ್ಯವನ್ನು ಸ್ಥಗಿತಗೊಳಿಸಿ ರಾಜ್ಯಾದ್ಯಂತ ಮೌನ ಪ್ರತಿಭಟನೆ ನಡೆಸಿದರು. ಬೆಂಗಳೂರು ನಗರ (Bengaluru City) ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಕೈಗಾರಿಕಾ ಸಂಘಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ರಾಜ್ಯಾದ್ಯಂತ ಒಟ್ಟು 6.5 ಲಕ್ಷ ಕೈಗಾರಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ, ಆಯಾ ಜಿಲ್ಲಾ ಹಂತದಲ್ಲಿ ಕೈಗಾರಿಕೆಗಳ ಮಾಲೀಕರು (Industrialist) ಮೌನ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರು.

ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿದ್ದನ್ನು ( Raw Materials Prices) ಖಂಡಿಸಿ ‘ಆಲ್‌ ಇಂಡಿಯ ಕೌನ್ಸಿಲ್‌ ಆಫ್‌ ಅಸೋಸಿಯೇಷನ್‌’ (All India council of Association) ಕರೆ ನೀಡಿದ್ದ ಪ್ರತಿಭಟನೆಗೆ ಪೀಣ್ಯ, ಮೈಸೂರು, ಬೆಳಗಾವಿ, ಕರ್ನಾಟಕ ಸ್ಟೇಟ್‌ ಪಾಲಿಮ​ರ್‍ಸ್ ಅಸೋಸಿಯೇಷನ್ಸ್‌, ಫೋಂಡ್ರಿ ಕ್ಲಸ್ಟರ್‌, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫೋಂಡ್ರಿ, ಬೊಮ್ಮಸಂದ್ರ, ಮಾಚೋಹಳ್ಳಿ, ರಾಜಾಜಿನಗರ ಕೈಗಾರಿಕಾ ಸಂಘಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು.

ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ಸ್ತಬ್ಧ:

ಮುಷ್ಕರದ ಭಾಗವಾಗಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶ (Peenya Industrial Area) ಇಡೀ ದಿನ ಸ್ತಬ್ಧವಾಗಿತ್ತು. ಅಲ್ಲದೆ, ಇಲ್ಲಿಯ 16 ಸಾವಿರಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳು ತನ್ನ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆಗೆ ಬೆಂಬಲ (Protest) ಸೂಚಿಸಿದ್ದವು. ಎಲ್ಲಾ ಕೈಗಾರಿಕೆಗಳ ಮಾಲೀಕರು ಪ್ರತಿಭಟನೆಯಲ್ಲಿ ಭಾಗವಹಿಸಿ ತುಮಕೂರು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌4) ಪಕ್ಕದ ಸವೀರ್‍ಸ್‌ ರಸ್ತೆಯಿಂದ ಪೀಣ್ಯ ಜಿಮ್‌ಕಾನ್‌ ಕ್ಲಬ್‌ ವರೆಗೆ 2 ಕಿ.ಮೀ. ಮೌನ ರಾರ‍ಯಲಿ ನಡೆಸಿದರು.

ಇದನ್ನೂ ಓದಿ:Accident in Bengaluru: ನಡುರಾತ್ರಿ ಬೈಕ್‌ಗಳ ನಡುವೆ ಭೀಕರ ಡಿಕ್ಕಿ: ಇಬ್ಬರು ಬಲಿ!

ಈ ವೇಳೆ, ಬೊಮ್ಮಸಂದ್ರ ಕೈಗಾರಿಕಾ ಸಂಘ, ನಾನ್ಸಿಯಾ, ಬಾಕ್ಸಿಯಾ, ಮಾಚೋಹಳ್ಳಿ ಕೈಗಾರಿಕಾ ಸಂಘ, ರಾಜಾಜಿನಗರ ಸಣ್ಣ ಕೈಗಾರಿಕೆ ಸಂಘ, ರಾಜ್ಯ ಪಾಲಿಮರ್ಸ್‌ ಇಂಡಸ್ಟ್ರೀಸ್‌ ಅಸೋಸಿಯೇಷನ್‌, ಮೈಸೂರು ಇಂಡಸ್ಟ್ರೀಸ್‌ ಅಸೋಸಿಯೇಷನ್‌ ಸೇರಿದಂತೆ ವಿವಿಧ ಕೈಗಾರಿಕಾ ಸಂಘಗಳ ಮತ್ತು ಕಾರ್ಖಾನೆಗಳ ನೂರಾರು ಮಾಲೀಕರು ಭಾಗಿಯಾಗಿ ಕಚ್ಚಾ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಸರ್ಕಾರಕ್ಕೆ ಕೋಟ್ಯಂತರ ರು. ತೆರಿಗೆ ಸಂಗ್ರಹದ ನಷ್ಟ!

ಬಳಿಕ ಮಾತನಾಡಿದ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಮುರಳಿಕೃಷ್ಣ, ಆರ್ಥಿಕ ಸಂಕಷ್ಟದಲ್ಲಿರುವ ಎಂಎಸ್‌ಎಂಇ ವಲಯಕ್ಕೆ ಅಗತ್ಯವಾದ ಕಚ್ಚಾ ವಸ್ತುಗಳ ಬೆಲೆ ದುಬಾರಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷಕ್ಕೆ ಶೇ.50-70ರಷ್ಟುಬೆಲೆ ಏರಿದೆ. ಇದನ್ನು ಖಂಡಿಸಿ ನಡೆದ ಮುಷ್ಕರದಿಂದ ಪೀಣ್ಯದಲ್ಲಿರುವ ಒಟ್ಟು 16 ಸಾವಿರ ಸಣ್ಣ, ಅತಿ ಸಣ್ಣ ಕೈಗಾರಿಗಳು ಕಾರ್ಯ ಸ್ಥಗಿತಗೊಂಡಿವೆ. ಈ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರು. ತೆರಿಗೆ ಸಂಗ್ರಹದಲ್ಲಿ ನಷ್ಟಉಂಟುಮಾಡಿ ಸಂದೇಶ ರವಾನಿಸುತ್ತಿದ್ದೇವೆ ಎಂದರು.

ಇದನ್ನೂ ಓದಿ:PM Modi meets top CEOs ಬಜೆಟ್‌ಗೂ ಮುನ್ನ ಪ್ರಮುಖ ಖಾಸಗಿ ಕಂಪನಿ ಸಿಇಒ ಜೊತೆ ಪ್ರಧಾನಿ ಮೋದಿ ಸಂವಾದ!

ಪಿಐಎ ಕಾರ್ಯದರ್ಶಿ ಶಿವಕುಮಾರ್‌, ಹಿರಿಯ ಉಪಾಧ್ಯಕ್ಷ ಮಂಜುನಾಥ್‌, ಉಪಾಧ್ಯಕ್ಷ ಎಚ್‌.ಎಂ.ಹಾರಿಫ್‌, ಜಂಟಿ ಕಾರ್ಯದರ್ಶಿ ಆರ್‌.ಕುಮಾರ್‌, ಖಜಾಂಚಿ ಡಿ.ಎಚ್‌ ಪಾಟೀಲ್‌, ಜಂಟಿ ಖಜಾಂಚಿ ಕೆ.ಬಿ.ಬಸವರಾಜ್‌, ನಿಕಟಪೂರ್ವ ಅಧ್ಯಕ್ಷ ಸಿ. ಪ್ರಕಾಶ್‌ ಹಾಗೂ ಇರತ ಸಂಘಗಳ ಮುಖ್ಯಸ್ಥರು, ಕಾರ್ಖಾನೆಗಳ ಮಾಲೀಕರು ಭಾಗವಹಿಸಿದ್ದರು.