ಆಸ್ಪತ್ರೆಗೆ ಬರುವ ವೇಳೆಗೆ ಹೃದಯಬಡಿತ ಸ್ತಬ್ಧವಾಗಿತ್ತು, ಎಂ.ಎಸ್‌. ರಾಮಯ್ಯ ಆಸ್ಪತ್ರೆ ಪ್ರಮುಖ ವೈದ್ಯರ ಹೇಳಿಕೆ

ಬೆಂಗಳೂರು(ಸೆ.08): ಸಚಿವ ಉಮೇಶ್‌ ಕತ್ತಿಯವರಿಗೆ ಈ ಹಿಂದೆ ಎರಡು ಬಾರಿ ಹೃದಯಾಘಾತವಾಗಿದ್ದು, ಸ್ಟಂಟ್‌ ಅಳವಡಿಸಲಾಗಿತ್ತು. ಮಂಗಳವಾರ ತಡರಾತ್ರಿ ಮೂರನೇ ಬಾರಿ ಹೃದಯಾಘಾತವಾಗಿದ್ದು, ಆಸ್ಪತ್ರೆ ಆಗಮಿಸುವ ವೇಳೆಗೆ ಹೃದಯಬಡಿತ ನಿಂತಿತ್ತು ಎಂದು ಎಂ.ಎಸ್‌.ರಾಮಯ್ಯ ಆಸ್ಪತ್ರೆ ನಿರ್ದೇಶಕ ಡಾ. ಗುರುದೇವ್‌ ತಿಳಿಸಿದ್ದಾರೆ. ಇದೇ ವೇಳೆ, ಮನೆಯಲ್ಲೇ ಸಿಪಿಆರ್‌ ಪ್ರಾಥಮಿಕ ಚಿಕಿತ್ಸೆ ಸಿಕ್ಕಿದ್ದರೆ ಕತ್ತಿ ಬದುಕುತ್ತಿದ್ದರು ಎಂದು ಆಸ್ಪತ್ರೆಯ ಇತರ ಪ್ರಮುಖ ವೈದ್ಯರು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಗುರುದೇವ್‌, ‘ಮಂಗಳವಾರ ರಾತ್ರಿ 10.30ಕ್ಕೆ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. 10.45ಕ್ಕೆ ಆಸ್ಪತ್ರೆಗೆ ಕರೆತಂದಿದ್ದಾರೆ. ಕೂಡಲೇ ತುರ್ತು ನಿಗಾ ಘಟಕದಲ್ಲಿ ತಪಾಸಣೆ ನಡೆಸಿದ್ದು, ಹೃದಯ ಬಡಿತ ಇರಲಿಲ್ಲ. ಆ ಬಳಿಕವು ಏಳು ಬಾರಿ ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್‌ (ಸಿಪಿಆರ್‌) ಮಾಡಲಾಯಿತು. ಆದರೂ ಹೃದಯ ಬಡಿತ ಆರಂಭವಾಗಲಿಲ್ಲ. 11.30 ವೇಳೆಗೆ ನಿಧನ ಎಂದು ದೃಢಪಡಿಸಲಾಯಿತು’ ಎಂದರು.
‘ಸಚಿವರಿಗೆ ಈ ಹಿಂದೆ ಎರಡು ಬಾರಿ ಹೃದಯಾಘಾತವಾಗಿ ಎರಡು ಸ್ಟಂಟ್‌ಗಳನ್ನು ಅಳವಡಿಸಲಾಗಿತ್ತು. ಮತ್ತೊಮ್ಮೆ ಹೃದಯ ಸಮಸ್ಯೆ ಕಾಣಿಸಿಕೊಂಡರೆ ಬೈಪಾಸ್‌ ಸರ್ಜರಿ ಮಾಡಿಸಬೇಕು ಎಂದು ಹೃದ್ರೋಗ ತಜ್ಞರು ಸಲಹೆ ನೀಡಿದ್ದರು’ ಎಂದು ಮಾಹಿತಿ ನೀಡಿದರು.

Umesh Katti: ಮಣ್ಣಲ್ಲಿ ಮಣ್ಣಾದ ಹ್ಯಾಟ್ರಿಕ್‌ ಗೆಲುವಿನ ಸರದಾರ; ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಪ್ರಥಮ ಚಿಕಿತ್ಸೆ ಸಿಕ್ಕಿದರೆ ಬದುಕುಳಿಯುತ್ತಿದ್ದರು:

‘ತೀವ್ರ ಹೃದಯಾಘಾತವಾದ ಸಂದರ್ಭದಲ್ಲಿ ಮೊದಲ 10 ರಿಂದ 15 ನಿಮಿಷ ಪ್ರಮುಖವಾಗಿರುತ್ತದೆ. ಆ ಸಂದರ್ಭದಲ್ಲಿ ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್‌ (ಸಿಪಿಆರ್‌) ಪ್ರಾಥಮಿಕ ಚಿಕಿತ್ಸೆ ಅಗತ್ಯವಿರುತ್ತದೆ. ವೈದ್ಯರು ಮಾತ್ರವಲ್ಲದೆ ಮಾಹಿತಿಯುಳ್ಳ ಯಾರಾದರೂ ಸಿಪಿಆರ್‌ ಮಾಡಬಹುದು. ಸಚಿವರು ಮನೆಯಲ್ಲಿ ಕುಸಿದುಬಿದ್ದ ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು’ ಎಂದು ಸಚಿವರನ್ನು ಆಸ್ಪತ್ರೆಗೆ ಕರೆತಂದಾಗ ತಪಾಸಣೆ ನಡೆಸಿದ ವೈದ್ಯರಾದ ಡಾ.ಅರುಣ ಮತ್ತು ಡಾ.ರಮೇಶ್‌ ತಿಳಿಸಿದರು.