Asianet Suvarna News Asianet Suvarna News

ಬೆಂಗಳೂರು ಸುರಂಗ ರಸ್ತೆ ನಿರ್ಮಿಸದಂತೆ ಸಂಸದ ತೇಜಸ್ವಿ ಸೂರ್ಯ ಮನವಿ: ಡಿಕೆಶಿ ಕನಸಿನ ಯೋಜನೆಗೆ ಕೊಳ್ಳಿ!

ಬೆಂಗಳೂರಿನಲ್ಲಿ ಟ್ರಾಫಿಕ್‌ ಜಾಮ್‌ ನಿಯಂತ್ರಣ ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚರ್ಚಿಸಿದ ಸಂಸದ ತೇಜಸ್ವಿ ಸೂರ್ಯ ಸುರಂಗ ರಸ್ತೆ ಯೋಜನೆ ಕೈಬಿಡಲು ಮನವಿ ಮಾಡಿದ್ದಾರೆ.

MP Tejasvi Surya pleads to DCM DK Shivakumar not construct tunnel road in Bangalore sat
Author
First Published Nov 9, 2023, 11:48 AM IST

ಬೆಂಗಳೂರು (ನ.09): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು (Bengaluru traffic jam) ನಿಯಂತ್ರಣ ಮಾಡುವ ಉದ್ದೇಶದಿಂದ ಉಪಮುಖ್ಯಮಂತ್ರಿಯೂ ಆಗಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಸುರಂಗ ರಸ್ತೆ (Tunnel road) ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದರು. ಆದರೆ, ಟನಲ್‌ ರಸ್ತೆ ನಿರ್ಮಾಣವನ್ನು ಕೈಬಿಟ್ಟು ಟ್ರಾಫಿಕ್‌ ನಿಯಂತ್ರಣಕ್ಕೆ ರೈಲು ಮಾರ್ಗವನ್ನು ವಿಸ್ತರಣೆ ಮಾಡುವಂತೆ ಸಂಸದ ತೇಜಸ್ವಿ ಸೂರ್ಯ ಅವರು ಮನವಿ ಮಾಡುವ ಮೂಲಕ  ಡಿಕೆಶಿ ಅವರ ಕನಸಿನ ಯೋಜನೆಗೆ ಕೊಳ್ಳಿ ಇಡುವ ಕೆಲಸ ಮಾಡಿದ್ದಾರೆ.

ಬೆಂಗಳೂರಿನ ಮೂಲಭೂತ ಸೌಕರ್ಯ, ಹಲವು ಅಭಿವೃದ್ಧಿ ಕಾರ್ಯಗಳ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾದ ಸಂಸದ ತೇಜಸ್ವಿ ಸೂರ್ಯ ಅವರು ವಿವಿಧ ವಿಷಯಗಳನ್ನು ಚರ್ಚೆ ಮಾಡಿದ್ದಾರೆ. ಈ ವೇಳೆ ಬೆಂಗಳೂರು ಮಹಾನಗರದಲ್ಲಿ, ನಿಯೋಜಿತ ಟನಲ್ ರಸ್ತೆ ನಿರ್ಮಾಣದ ಬದಲಾಗಿ, ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯತೆ ಇದ್ದು, ಟನಲ್ ಬದಲು ರೈಲು ಮಾರ್ಗ ನಿರ್ಮಾಣವಾದಲ್ಲಿ ಸಂಚಾರ ದಟ್ಟಣೆ ನಿಯಂತ್ರಣವಾಗಲಿದೆ ಎಂಬುದನ್ನು ಇದೇ ಸಂದರ್ಭದಲ್ಲಿ ವಿವರಿಸಿದ್ದು, ಈ ಸಲಹೆಗಳ ಕುರಿತು ಪರಿಶೀಲಿಸುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಚಿಂದಿ ಆಯುವ ವ್ಯಕ್ತಿಗೆ ಸಿಕ್ತು ಕಂತೆ ಕಂತೆ ಡಾಲರ್‌ ನೋಟುಗಳು!

ಬಿಎಂಆರ್‌ಸಿಎಲ್‌ ಎಂಡಿ ಹುದ್ದೆ ಭರ್ತಿ ಮಾಡಿ: ಕಳೆದ 5-6  ತಿಂಗಳುಗಳಿಂದ ಕೆ - ರೈಡ್ & ಬಿ.ಎಂ.ಆರ್.ಸಿ.ಎಲ್ ನ ಎಂ.ಡಿ ಹುದ್ದೆಗಳು ಖಾಲಿಯಿದ್ದು, ಈ ಕುರಿತು ನಾನು ಹಲವಾರು ಬಾರಿ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣದ ಬಹುಮುಖ್ಯ ಕಾಮಗಾರಿಗಳಿಗೆ ಪೂರ್ಣಾವಧಿ ಎಂ.ಡಿ ನೇಮಕದ ಅಗತ್ಯತೆ ಬಗೆಗೆ ಶ್ರೀ ಡಿ ಕೆ ಶಿವಕುಮಾರ್ ಬಳಿ ವಿವರಿಸಿದ್ದು, ಶೀಘ್ರಗತಿಯಲ್ಲಿ ಎರಡೂ ಪ್ರಾಧಿಕಾರಗಳಿಗೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ ಎಂದರು.

ಬನಶಂಕರಿ ಮೆಟ್ರೋ ಸ್ಟೇಷನ್‌ ಬಳಿ ಸ್ಕೈವಾಕ್‌ ನರ್ಮಾಣಕ್ಕೆ ಮನವಿ: ಬನಶಂಕರಿ ಮೆಟ್ರೋ ಸ್ಟೇಷನ್ & ಬನಶಂಕರಿ ಬಿ.ಎಂ.ಟಿ.ಸಿ ಬಸ್ ನಿಲ್ದಾಣಗಳ ಮಧ್ಯೆ  ಸ್ಕೈವಾಕ್ ನಿರ್ಮಾಣಕ್ಕೆ 2019 ರಿಂದಲೂ ನಾನು ಒತ್ತಾಯಿಸುತ್ತ ಬಂದಿದ್ದು, ಸ್ಕೈ ವಾಕ್ ನಿರ್ಮಾಣದಿಂದ ಬಹು ಆಯಾಮದ ಸಂಚಾರಕ್ಕೆ ಇದರಿಂದ ಅನುಕೂಲವಾಗಲಿದೆ. ಈ ಯೋಜನೆಯು ನೀಲನಕ್ಷೆ 2019 ರಲ್ಲಿಯೇ ತಯಾರಾಗಿದ್ದು, ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸುವಂತೆಯೂ ಕೂಡ ಒತ್ತಾಯಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿರುತ್ತಾರೆ.

ಬೆಂಗಳೂರು ಪೊಲೀಸ್‌ ಇಲಾಖೆಯಿಂದ ಶಸ್ತ್ರಾಸ್ತ್ರಗಳ ಸಂತೆ : ಇವು ಮಾರಾಟಕ್ಕಲ್ಲ, ಒಣಗಿಸೋದಕ್ಕೆ ಮಾತ್ರ!

ಮೆಟ್ರೋ 3ನೇ ಹಂತದ ಡಿಪಿಆರ್‌ ಸಲ್ಲಿಕೆ ಮಾಡಿ: ನಮ್ಮ ಮೆಟ್ರೋ ಮಾರ್ಗದ 3ನೇ ಹಂತದ ಕಾಮಗಾರಿಗೆ ಹಿಂದಿನ ರಾಜ್ಯ ಸರ್ಕಾರ ಈಗಾಗಲೇ ಹಸಿರು ನಿಶಾನೆ ತೋರಿಸಿದ್ದು, ಪರಿಷ್ಕೃತ ಡಿ. ಪಿ.ಆರ್ ಅನ್ನು ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಕೆಯಾಗಿಲ್ಲ. ಡಿ.ಪಿ.ಆರ್ ಸಲ್ಲಿಕೆ ವಿಳಂಬದಿಂದ ನಗರದ ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರ ವಹಿಸಬಲ್ಲ ಕಾಮಗಾರಿಗಳು ವಿಳಂಬಗೊಳ್ಳುವ ಸಾಧ್ಯತೆಯ ಕುರಿತು ವಿವರಿಸಿದೆ. ಇನ್ನು ನನ್ನ ಲೋಕಸಭಾ ಕ್ಷೇತ್ರದ ಹೊಸಕೆರೆ ಹಳ್ಳಿಯಲ್ಲಿ, ಅಂಡರ್ ಗ್ರೌಂಡ್ ಕೇಬಲ್  ಮೂಲಕ 66 ಕೆವಿ EHT ಲೈನ್ ಎಳೆಯುವದರಿಂದ ಚಿಕ್ಕಮಕ್ಕಳು, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬಹುದು ಎಂಬುದರ ಬಗ್ಗೆ ವಿವರಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುತ್ತಾರೆ.

ನಾಯಂಡಹಳ್ಳಿಯಲ್ಲಿಯೂ ಮಲ್ಪಿ ಲೆವೆಲ್‌ ಮೇಲ್ಸೇತುವೆ ನಿರ್ಮಾಣ: ಮೆಟ್ರೋ 3ನೆ ಹಂತದ ಕಾಮಗಾರಿಯೊಂದಿಗೆ, ಇದೇ ಮಾರ್ಗದಲ್ಲಿ ಬಹು ಆಯಾಮದ ಫ್ಲೈ ಓವರ್ ನಿರ್ಮಾಣದಿಂದ ವೆಗಾ ಸಿಟಿ ಮಾಲ್ & ನಾಯಂಡಹಳ್ಳಿ ವರೆಗೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದರ ಕುರಿತು ಕೂಡ ಇದೇ ಸಮಯದಲ್ಲಿ ವಿವರಿಸಿದ್ದೇನೆ. ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಾರ್ವಜನಿಕ ಸಾರಿಗೆ ಸಂಚಾರ ಉತ್ತೇಜನ ಅತೀ ದೊಡ್ಡ ಪರಿಹಾರವಾಗಿದ್ದು,  ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಿದ್ದೇನೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

Follow Us:
Download App:
  • android
  • ios