Asianet Suvarna News Asianet Suvarna News

ಯೋಜನೆಗಳ ರೂಪಿಸುವಾಗ ಜನಾಭಿಪ್ರಾಯ ಮುಖ್ಯ: ರಾಜೀವ್‌ ಚಂದ್ರಶೇಖರ್‌

ಒಂದು ಕಾಲದಲ್ಲಿ ಬೆಂಗಳೂರು ಹಾಗಿತ್ತು, ಹೀಗಿತ್ತು ಎಂದು ಕೊರಗುತ್ತಾ ಕೂರುವುದರಲ್ಲಿ ಅರ್ಥವಿಲ್ಲ| ನಮ್ಮ ಮುಂದಿರುವ ವಾಸ್ತವವನ್ನು ಎದುರಿಸಲೇಬೇಕು| ಬೆಂಗಳೂರು ನಗರದ ಜನಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ನಾವು ಯೋಜನೆ ರೂಪಿಸಿ, ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಂಡು ಸಾಗಬೇಕು| ನಮ್ಮ ಬೆಂಗಳೂರು ಪ್ರತಿಷ್ಠಾನ ಆಯೋಜಿಸಿದ್ದ ಸಂವಾದದಲ್ಲಿ ರಾಜೀವ್‌ ಚಂದ್ರಶೇಖರ್‌ ಅಭಿಮತ|

MP Rajeev Chandrashekar Talks Over Bengaluru City
Author
Bengaluru, First Published Aug 5, 2020, 7:25 AM IST

ಬೆಂಗಳೂರು(ಆ.05): ಯಾವುದೇ ನಗರದ ಅಭಿವೃದ್ಧಿ ಯೋಜನೆ ರೂಪಿಸುವಾಗ ಆ ನಗರಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಪರಿಗಣಿಸಬೇಕು. ಯೋಜನೆ ರೂಪಿಸುವಾಗ ಜನಾಭಿಪ್ರಾಯ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡಬೇಕು. ಆಗ ಮಾತ್ರ ಸರ್ಕಾರದ ಯೋಜನೆಗಳ ಗರಿಷ್ಠ ಪ್ರಯೋಜನ ಜನತೆಗೆ ಮುಟ್ಟಲು ಸಾಧ್ಯ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

ನಮ್ಮ ಬೆಂಗಳೂರು ಪ್ರತಿಷ್ಠಾನ ಆಯೋಜಿಸಿದ್ದ ‘ನಮ್ಮ ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಪರಿಸರದ ಸಮತೋಲನದ ಬಗ್ಗೆ ಸಂವಾದ’ ವೆಬಿನಾರ್‌ ಕಾರ್ಯಕ್ರಮದಲ್ಲಿ ರಾಜೀವ್‌ ಚಂದ್ರಶೇಖರ್‌ ಮಾತನಾಡಿದರು.
ಒಂದು ಕಾಲದಲ್ಲಿ ಬೆಂಗಳೂರು ಹಾಗಿತ್ತು, ಹೀಗಿತ್ತು ಎಂದು ಕೊರಗುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ನಮ್ಮ ಮುಂದಿರುವ ವಾಸ್ತವವನ್ನು ಎದುರಿಸಲೇಬೇಕು. ಈ ನಗರದ ಜನಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ನಾವು ಯೋಜನೆ ರೂಪಿಸಿ, ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಂಡು ಸಾಗಬೇಕು ಎಂದು ಕರೆ ನೀಡಿದರು.

ರಾಜೀವ್‌ ಚಂದ್ರಶೇಖರ್‌ ಜತೆಗೆ ಸಂವಾದ: ನಮ್ಗೂ ಪ್ಯಾಕೇಜ್‌ ಕೊಡಿ, ಮಹಿಳಾ ಉದ್ಯಮಿಗಳ ಆಗ್ರಹ

ದಕ್ಷಿಣ ಭಾರತದ ಪ್ರಮುಖ ಆರ್ಥಿಕ ಕೇಂದ್ರವಾಗಿರುವ ಬೆಂಗಳೂರು ಅಭಿವೃದ್ಧಿಗೊಳ್ಳಲೇಬೇಕು. ಇದು ಸಾಧ್ಯವಾಗಬೇಕಾದರೆ ಸರ್ಕಾರದ ಯೋಜನೆಗಳಲ್ಲಿ ಜನರ ಪಾಲ್ಗೊಳ್ಳುವಿಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಬೇಕು. ಯೋಜನೆಗಳು ರೂಪುಗೊಳ್ಳುವ ಹಂತದಲ್ಲೇ ಜನರೊಂದಿಗೆ ಸಮಾಲೋಚನೆ ನಡೆಸಬೇಕು. ಪರಿಸರ, ಪರಂಪರೆ, ವಾಹನ ಸೌಕರ್ಯ, ಜೀವನ ಕ್ರಮ, ಆರೋಗ್ಯ ಹೀಗೆ ಎಲ್ಲ ಅಂಶಗಳನ್ನು ಒಳಗೊಂಡಿರುವ ಸಮಗ್ರವಾದ ಯೋಜನೆ ಇರಬೇಕು ಎಂದು ಪ್ರತಿಪಾದಿಸಿದರು.

ಬೆಂಗಳೂರು ಕೇಂದ್ರದ ಲೋಕಸಭಾ ಸದಸ್ಯ ಪಿ.ಸಿ.ಮೋಹನ್‌ ಮಾತನಾಡಿ, ಸಬ್‌ಅರ್ಬನ್‌ ರೈಲಿನಿಂದ ಬೆಂಗಳೂರಿನ ಸುತ್ತಲಿನ ಜನರಿಗೆ ಬೆಂಗಳೂರಿಗೆ ಬಂದು ಹೋಗಲು ಅನುಕೂಲವಾಗುತ್ತದೆ. ಅದೇ ರೀತಿ ಪೆರಿಫೆರಲ್‌ ರಿಂಗ್‌ ರೋಡ್‌ ಕೂಡಬೇಕು. ನಗರದ ಮರಗಳ ಸಂರಕ್ಷಣೆಯಾಗಬೇಕು ಎಂದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಚ್‌. ಆರ್‌. ಮಹಾದೇವ್‌ ಮಾತನಾಡಿ, ಪಾರದರ್ಶಕತೆ ಮತ್ತು ಜನರ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದು ಹೇಳಿದರು. ಇದೇ ವೇಳೆ ಗಿಡ ನೆಡಲು ಬಿಡಿಎ ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಹಿರಿಯ ರಂಗಕರ್ಮಿ ಪ್ರಕಾಶ್‌ ಬೆಳವಾಡಿ ನಡೆಸಿಕೊಟ್ಟಸಂವಾದ ಕಾರ್ಯಕ್ರಮದಲ್ಲಿ ಅರ್ಬನ್‌ ಲ್ಯಾಂಡ್‌ ಟ್ರಾನ್ಸ್‌ಪೋರ್ಟ್‌ನ ಕಮೀಷನರ್‌ ವಿ.ಮಂಜುಳಾ, ಭಾರತೀಯ ವಿಜ್ಞಾನ ಸಂಸ್ಥೆಯ ಅಸೋಸಿಯೆಟ್‌ ಪ್ರೊಫೆಸರ್‌ ಡಾ.ಆಶೀಶ್‌ ವರ್ಮಾ, ಇನ್ಸಿಟ್ಯೂಟ್‌ ಅಫ್‌ ವುಡ್‌ ಸೈನ್ಸ್‌ ಮತ್ತು ಟೆಕ್ನಾಲಜಿಯ ವಿಜ್ಞಾನಿ ಡಾ. ಮುತ್ತುಕುಮಾರ್‌ ಅರುಣಾಚಲಂ ಮುಂತಾದವರು ಭಾಗವಹಿಸಿದರು. ನಮ್ಮ ಬೆಂಗಳೂರು ಪ್ರತಿಷ್ಠಾನದ ಜನರಲ್‌ ಮ್ಯಾನೇಜರ್‌ ಹರೀಶ್‌ ಕುಮಾರ್‌ ಎಂ.ಪಿ. ಉಪಸ್ಥಿತರಿದ್ದರು.

ಕಾಟಾಚಾರದ ಪ್ರಕ್ರಿಯೆ ಆಗಿರಬಾರದು

ಜನರ ಜೊತೆಗಿನ ಸಮಾಲೋಚನೆ ಎಂಬುದು ಕಾಟಾಚಾರದ ಪ್ರಕ್ರಿಯೆ ಆಗಿರಬಾರದು. ಸುಪ್ರೀಂಕೋರ್ಟ್‌ ಕೂಡ ಸಾರ್ವಜನಿಕ ಸಮಾಲೋಚನೆಯಲ್ಲಿ ವ್ಯಕ್ತವಾಗುವ ಪ್ರತಿ ಅಭಿಪ್ರಾಯವನ್ನು ಪರಿಶೀಲಿಸಬೇಕು ಎಂದು ತೀರ್ಪು ನೀಡಿದೆ. ನಾವು ಜನರ ಹಣವನ್ನು ಜನರ ಉಪಯೋಗಕ್ಕೆ ಬಳಸುವಾಗ ಅವರ ಅಭಿಪ್ರಾಯವನ್ನು ಪರಿಗಣಿಸುವುದು ಅತ್ಯಗತ್ಯ ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದರು. ಯೋಜನೆ, ಸಮಾಲೋಚನೆ ಮತ್ತು ಪಾರದರ್ಶಕತೆಯನ್ನು ಹೊಂದಿರುವ ಯೋಜನೆ ಜನರನ್ನು ತಲುಪುತ್ತದೆ. ಇಲ್ಲಿ ಪಾರದರ್ಶಕತೆಯನ್ನು ಯೋಜನೆಯನ್ನು ರೂಪಿಸುವ ಹಂತದಲ್ಲಿ ಮತ್ತು ಬಳಿಕ ಗುತ್ತಿಗೆ ನೀಡುವ ಸಂದರ್ಭದಲ್ಲಿ ಕಾಪಾಡಿಕೊಳ್ಳಬೇಕು ಎಂದು ರಾಜೀವ್‌ ಸಲಹೆ ನೀಡಿದರು.
 

Follow Us:
Download App:
  • android
  • ios