ಲೈಂಗಿಕ ಕಿರುಕುಳ ಕೇಸಲ್ಲಿ ಜಾಮೀನು ಕೋರಿದ ಸಂಸದ ಪ್ರಜ್ವಲ್ ಹಾಗೂ ರೇವಣ್ಣ; ಎಸ್‌ಐಟಿಗೆ ನೋಟೀಸ್ ಕೊಟ್ಟ ಕೋರ್ಟ್
ಲೈಂಗಿಕ ಕಿರುಕುಳ ಕೇಸ್‌ನಲ್ಲಿ ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಹೆಚ್.ಡಿ. ರೇವಣ್ಣ ಸಲ್ಲಿಕೆ ಮಾಡಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಎಸ್‌ಐಟಿಗೆ ನೋಟೀಸ್ ಜಾರಿ ಮಾಡಿದೆ.
ಬೆಂಗಳೂರು (ಮೇ 02): ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ತಮ್ಮ ಮೇಲೆ ಮಹಿಳೆಯೊಬ್ಬರು ದಾಖಲಿಸಲಾದ ಪ್ರಕರಣದಲ್ಲಿ ಪೊಲೀಸರು ಬಂಧಿಸದಂತೆ ಸಂಸದ ಪ್ರಜ್ವಲ್ ಹಾಗೂ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ನೋಟೀಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.
ರಾಜ್ಯದಲ್ಲಿ ಕಳೆದೊಂದು ವಾರದಿಂದ ಭಾರಿ ಸುದ್ದಿಯಾಗಿತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲ್ಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲಿಯೇ ಹಾಸನದ ಹೊಳೆ ನರಸೀಪುರದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿತ್ತು. ಈಗ ಬಂಧನದ ಭೀತಿ ಎದುರಾದ ಬೆನ್ನಲ್ಲಿಯೇ ತಂದೆ-ಮಗ ಇಬ್ಬರೂ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಈ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಕಲಾಪದ ಸಮಯ ಮುಕ್ತಾಯವಾಗಿದ್ದರಿಂದ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ಆದರೆ, ನ್ಯಾಯಾಲಯವು ಎಸ್‌ಐಟಿಗೆ ನೋಟೀಸ್ ಜಾರಿ ಮಾಡಲಾಗಿದೆ.
ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ ಎಸ್ಐಟಿ; ಇದರಿಂದಾಗುವ ಪರಿಣಾಮವೇನು?
ಜಾಮೀನು ಅರ್ಜಿ ವಿಚಾರಣೆ ವೇಳೆ ನಡೆದಿದ್ದೇನು?
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಅರ್ಜಿ ವಿಚಾರಣೆ ಆರಂಭಿಸಿದರು. ಈ ವೇಳೆ ಆರೋಪಿಗಳಾದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಹೆಚ್.ಡಿ. ರೇವಣ್ಣ ಪರವಾಗಿ ಹಿರಿಯ ವಕೀಲ ಮೂರ್ತಿ ಡಿ. ನಾಯ್ಕ್ ವಾದ ಮಂಡಿಸಿದರು. ವಾದ ಆಲಿಸಿದ ಕೋರ್ಟ್ ಪೀಠದಿಂದ, ಎಫ್ಐಆರ್ ನಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಆರೋಪಗಳಿವೆ. ನಿರೀಕ್ಷಣಾ ಜಾಮೀನು ಅರ್ಜಿ ಹೇಗೆ ಊರ್ಜಿತವಾಗುತ್ತದೆ? ನೀವು ವಿಚಾರಣಾ ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಬಹುದಿತ್ತಲ್ಲವೇ? ಎಂದು ಹೆಚ್.ಡಿ.ರೇವಣ್ಣ ಪರ ಹಿರಿಯ ವಕೀಲರಿಗೆ ಪ್ರಶ್ನೆ ಮಾಡಲಾಯಿತು.
ಸಂಸದ ಪ್ರಜ್ವಲ್ ರೇವಣ್ಣರನ್ನು ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಬಂಧಿಸಲು ಸಾಧ್ಯವಿಲ್ಲ; ವಕೀಲ ಸುಧನ್ವ ಮಾಹಿತಿ
ಇದಕ್ಕೆ ವಾದ ಮುಂದುವರೆಸಿದ ವಕೀಲ ಮೂರ್ತಿ ಡಿ. ನಾಯ್ಕ್ ಅವರು, ಎಫ್ಐಆರ್ ನಲ್ಲಿ ಜಾಮೀನು ನೀಡಬೇಕಾದ ಆರೋಪಗಳಿವೆ. ಆದರೆ, ಮ್ಯಾಜಿಸ್ಟ್ರೇಟ್ ಗೆ ಅತ್ಯಾಚಾರ ಆರೋಪ ಸೇರಿಸಲು ಎಸ್‌ಐಟಿ ಕಡೆಯಿಂದ ಅರ್ಜಿ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಹೆಚ್.ಡಿ.ರೇವಣ್ಣ ಅವರು ನಿರೀಕ್ಷಣಾ ಜಾಮೀನಿಗಾಗಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಕೋರ್ಟ್‌ಗೆ ತಿಳಿಸಿದರು. ಅವರ ವಾದ ಆಲಿಸಿದ ಕೋರ್ಟ್‌ನಿಂದ ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ನೋಟಿಸ್ ಜಾರಿಮಾಡಲಾಯಿತು. ಏನಾದರೂ ಆಕ್ಷೇಪಣೆಗಳಿದ್ದರೆ ನಾಳೆ ಸಲ್ಲಿಸಿ. ಇನ್ನೂ ನಿಮ್ಮ ಅರ್ಜಿಯ ವಿವರ ಲಭ್ಯವಾಗಿಲ್ಲ. ಜೊತೆಗೆ, ಅತ್ಯಾಚಾರ ಕೇಸ್ ಸೇರ್ಪಡೆಗೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದು, ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಕೆಗೆ ಸೂಚನೆ ನೀಡಲಾಗಿದೆ. ಇನ್ನು ಕೋರ್ಟ್ ಕಲಾಪದ ಅವಧಿ ಮುಗಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಯಿತು.