'ನಿಮ್ಮ ಮುಂದೆ ನಾನೇ ಬರುತ್ತೇನೆ ಗುಂಡಿಕ್ಕಿ ಕೊಲ್ಲಿ': ಈಶ್ವರಪ್ಪ ಹೇಳಿಕೆಗೆ ಡಿಕೆ ಸುರೇಶ್ ತೀಕ್ಷ್ಣ ಪ್ರತಿಕ್ರಿಯೆ
ಮಹಾತ್ಮಾ ಗಾಂಧಿಯವರನ್ನು ಕೊಂದ ಕೀರ್ತಿ ಬಿಜೆಪಿ ಪಕ್ಷಕ್ಕಿದೆ. ಕನ್ನಡಪರ, ಕರ್ನಾಟಕ ಪರ ಧ್ವನಿಯೆತ್ತಿದ್ದಕ್ಕೆ ನನ್ನನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳುತ್ತಿದ್ದಾರೆ. ಬೇರೆಯವರು ಯಾಕೆ ಬೇಕು? ನಾನು ಸಮಯ ಕೊಟ್ಟು ನಿಮ್ಮ ಮುಂದೆ ಬರುತ್ತೇನೆ ಕೊಂದುಬಿಡಿ ಎಂದು ಡಿಕೆ ಸುರೇಶ್ ಈಶ್ವರಪ್ಪ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಬೆಂಗಳೂರು (ಫೆ.10): ದೇಶ ವಿಭಜನೆ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲಿ ಎಂಬ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಡಿ ಕೆ ಸುರೇಶ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಹಾತ್ಮಾ ಗಾಂಧಿಯವರನ್ನು ಕೊಂದ ಕೀರ್ತಿ ಬಿಜೆಪಿ ಪಕ್ಷಕ್ಕಿದೆ. ಕನ್ನಡಪರ, ಕರ್ನಾಟಕ ಪರ ಧ್ವನಿಯೆತ್ತಿದ್ದಕ್ಕೆ ನನ್ನನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳುತ್ತಿದ್ದಾರೆ. ಬಡವರನ್ನು ಬಾವಿಗೆ ತಳ್ಳಿ ಯಾಕೆ ಆಟ ನೋಡುತ್ತೀರಿ, ನಿಮಗೆ ರಾಜ್ಯಪಾಲ ಹುದ್ದೆಯ ಆಸೆ ಇರಬೇಕೆಂದು ಕಾಣಿಸುತ್ತದೆ. ಬಿಜೆಪಿಯವರು ನಿಮ್ಮನ್ನು ಮೂಲೆಗುಂಪು ಮಾಡುತ್ತಿದ್ದಾರೆ ಅಂತ ಕಾಣಿಸುತ್ತದೆ. ಇದರಿಂದಾಗಿ ನೊಂದು ಹಿರಿಯರಾಗಿದ್ದರೂ ಕೂಡ ಏನೋ ಮಾತನಾಡಬೇಕೆಂದು ಆಗಾಗ ಈ ರೀತಿ ಮಾತನಾಡುತ್ತಿದ್ದೀರಿ ಎಂದು ಕಾಣಿಸುತ್ತಿದೆ ಎಂದು ಈಶ್ವರಪ್ಪಗೆ ಟಾಂಗ್ ಕೊಟ್ಟರು.
'ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಬೇಕು ವಿವಾದಾತ್ಮಕ ಹೇಳಿಕೆ: ಕೆಎಸ್ ಈಶ್ವರಪ್ಪ ವಿರುದ್ಧ ಎಫ್‌ಐಆರ್!
ನಿಮ್ಮ ಮುಂದೆ ಬರುತ್ತೇನೆ, ಗುಂಡಿಕ್ಕಿ ಕೊಲ್ಲಿ: ಬೇರೆಯವರು ಏಕೆ ಗುಂಡಿಕ್ಕಿ ಕೊಲ್ಲಬೇಕು, ನೀವು ಸಮಯ ಕೊಟ್ಟರೆ ನಿಮ್ಮ ಎದುರು ಬಂದು ನಿಲ್ಲುತ್ತೇನೆ, ನೀವೇ ಗುಂಡಿಕ್ಕಿ ಕೊಂದುಬಿಡಿ ಈಶ್ವರಪ್ಪನವರೇ, ಕನ್ನಡಿಗರಿಗಾಗಿ, ಕರ್ನಾಟಕ್ಕೋಸ್ಕರ ಇನ್ನೊಂದು ವಾರದೊಳಗೆ ಸಮಯ ಕೊಡುತ್ತೇನೆ, ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ, ದಯವಿಟ್ಟು ನಿಮ್ಮ ಆಸೆ ಈಡೇರಿಸಿಕೊಂಡು ನಿಮ್ಮ ನಾಯಕರಿಂದ ಶಹಬ್ಬಾಸ್ ಗಿರಿ ತೆಗೆದುಕೊಳ್ಳಿ ಎಂದು ವ್ಯಂಗ್ಯವಾಡಿದರು.