* ಬೂಸ್ಟರ್‌ ಡೋಸ್‌ಗೆ ರಾಜ್ಯದಲ್ಲಿ 24 ಲಕ್ಷ ಜನ ಅರ್ಹ* ಆಸ್ಪತ್ರೆಗಳಲ್ಲಿ ಇರೋದು 40 ಸಾವಿರ ಡೋಸ್‌ ಮಾತ್ರ* 3ನೇ ಡೋಸ್‌ಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯೇ ಇಲ್ಲ!

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಏ.10): ಸದ್ಯ ರಾಜ್ಯದಲ್ಲಿ ಕೊರೋನಾ ಲಸಿಕೆಯ ಬೂಸ್ಟರ್‌ ಡೋಸ್‌ ಪಡೆಯಲು 18ರಿಂದ 59 ವರ್ಷದ 24 ಲಕ್ಷ ಮಂದಿ ಅರ್ಹರಿದ್ದಾರೆ. ಆದರೆ, ಇವರಿಗೆ ಲಸಿಕೆ ನೀಡಲು ರಾಜ್ಯದ ಖಾಸಗಿ ಆಸ್ಪತ್ರೆಗಳ ಬಳಿ ಲಭ್ಯವಿರುವುದು 40 ಸಾವಿರ ಡೋಸ್‌ ಲಸಿಕೆ ಮಾತ್ರ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಖಾಲಿಯಾಗಿದ್ದು, ಬಹುತೇಕ ಆಸ್ಪತ್ರೆಗಳಲ್ಲಿ ಬೂಸ್ಟರ್‌ ಡೋಸ್‌ ಲಸಿಕೆ ಸಿಗುವುದೇ ಡೌಟ್‌!

ಅಲ್ಲದೆ, ರಾಜ್ಯದಲ್ಲಿರುವ ಖಾಸಗಿ ಆಸ್ಪತ್ರೆಗಳ ಲಸಿಕೆ ಕೇಂದ್ರಗಳಲ್ಲಿ ಶೇ.90ರಷ್ಟುಬೆಂಗಳೂರಿನಲ್ಲಿಯೇ ಇವೆ. ಕೆಲ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕಾ ಕೇಂದ್ರವಿದ್ದು, 10ಕ್ಕೂ ಹೆಚ್ಚು ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಲ್ಲಿ ಒಂದೂ ಲಸಿಕಾ ಕೇಂದ್ರವೇ ಆರಂಭವಾಗಿಲ್ಲ.

ಇತ್ತ ಭಾನುವಾರದಿಂದ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ ನೀಡಿಕೆ ಆರಂಭವಾಗಲಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ರಾಜ್ಯದಲ್ಲಿ 18-59 ವರ್ಷ 24 ಲಕ್ಷಕ್ಕೂ ಅಧಿಕ ಮಂದಿ ಎರಡನೇ ಡೋಸ್‌ ಪಡೆದು ಒಂಬತ್ತು ತಿಂಗಳು ಪೂರ್ಣಗೊಂಡಿದೆ. ಇವರು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಶುಲ್ಕ ಪಾವತಿಸಿ ಲಸಿಕೆ ಪಡೆಯಬೇಕಿದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್‌ ಡೋಸ್‌ ಆರಂಭಿಸಲು ಅಗತ್ಯ ಪ್ರಮಾಣದ ಲಸಿಕೆ ಲಭ್ಯವಿಲ್ಲ. ಬೆಂಗಳೂರಿನಲ್ಲಿ ಫೋರ್ಟಿಸ್‌ ಆಸ್ಪತ್ರೆ ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿಯೇ ಲಸಿಕೆ ದಾಸ್ತಾನು ಇಲ್ಲದೇ ಬೂಸ್ಟರ್‌ ಡೋಸ್‌ ಮುಂದೂಡಲಾಗಿದೆ.

ಎಲ್ಲೆಡೆ ಲಸಿಕೆ ಸಿಗದು

ರಾಜ್ಯದ ಬಹುತೇಕ ಖಾಸಗಿ ಆಸ್ಪತ್ರೆಗಳ ಬಳಿ ಲಸಿಕೆ ದಾಸ್ತಾನು ಇಲ್ಲ. ಕೆಲ ದೊಡ್ಡ ಆಸ್ಪತ್ರೆಗಳಲ್ಲಿ ಒಟ್ಟಾರೆ 40ರಿಂದ 50 ಸಾವಿರ ಡೋಸ್‌ನಷ್ಟುಲಸಿಕೆ ಇರಬಹುದು. ಹೀಗಾಗಿ, ಎಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆ ಶಿಬಿರ ನಡೆಯುವುದಿಲ್ಲ, ಜತೆಗೆ ಎಲ್ಲರಿಗೂ ಲಸಿಕೆ ಸಿಗುವುದಿಲ್ಲ.

- ಪ್ರಸನ್ನ, ಖಾಸಗಿ ಆಸ್ಪತ್ರೆ- ನರ್ಸಿಂಗ್‌ ಹೋಂ ಅಸೋಸಿಯೇಷನ್‌ (ಫನಾ) ಅಧ್ಯಕ್ಷ

ಕಾದು ನೋಡುವ ತಂತ್ರ

ಎರಡು ಮತ್ತು ಮೂರನೇ ಅಲೆಯ ಸಂದರ್ಭದಲ್ಲಿ ಜನರು ಆಗಮಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಹೆಚ್ಚಿನ ಪ್ರಮಾಣದ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳು ಖರೀದಿಸಿದ್ದವು. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಿದ ಕಾರಣ ಜನರು ಖಾಸಗಿ ಆಸ್ಪತ್ರೆಗಳಿಗೆ ಬರಲಿಲ್ಲ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದಾಸ್ತಾನಿರಿಸಿದ್ದ ಎರಡು ಲಕ್ಷಕ್ಕೂ ಹೆಚ್ಚು ಡೋಸ್‌ಗಳ ಅವಧಿ ಮುಗಿದು ನಷ್ಟವಾಗಿತ್ತು. ಹೀಗಾಗಿ ಕೆಲ ದಿನ ಕಳೆದ ಮೇಲೆ ಸರ್ಕಾರವೇ ಎಲ್ಲರಿಗೂ ಉಚಿತವಾಗಿ ಬೂಸ್ಟರ್‌ ಡೋಸ್‌ ನೀಡಬಹುದು ಎಂಬ ಅನುಮಾನದಲ್ಲಿ ಖಾಸಗಿ ಆಸ್ಪತ್ರೆಗಳಿವೆ.

ಬೆಂಗಳೂರಿಗೆ ಸೀಮಿತ ಬೂಸ್ಟರ್‌ ಡೋಸ್‌?

ಲಸಿಕೆ ಅಭಿಯಾನ ಆರಂಭವಾದಾಗಿನಿಂದ (15 ತಿಂಗಳಿಂದ) ರಾಜ್ಯದಲ್ಲಿ 400ಕ್ಕಿಂತಲೂ ಕಡಿಮೆ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ಕೇಂದ್ರ ತೆರೆಯಲಾಗಿದೆ. ಈ ಪೈಕಿ 370 ಬೆಂಗಳೂರಿನಲ್ಲಿಯೇ ಇದ್ದು, ಮಂಗಳೂರು 6, ಮೈಸೂರು, ಉಡುಪಿ, ಶಿವಮೊಗ್ಗದಲ್ಲಿ ತಲಾ ಲಸಿಕೆ ಕೇಂದ್ರಗಳಿವೆ. ಉಳಿದಂತೆ 10 ಜಿಲ್ಲೆಗಳ ಜಿಲ್ಲಾಕೇಂದ್ರಗಳಲ್ಲಿ ಒಂದು ಖಾಸಗಿ ಆಸ್ಪತ್ರೆಯಲ್ಲಿ ಲಸಿಕಾ ಕೇಂದ್ರವಿದ್ದು, ಸದ್ಯ ಅಲ್ಲಿ ಲಸಿಕೆ ದಾಸ್ತಾನಿಲ್ಲ. ಇನ್ನು ಕೊಡಗು, ಉತ್ತರಕನ್ನಡ, ಬೀದರ್‌, ಯಾದಗಿರಿ, ಚಿತ್ರದುರ್ಗ, ಚಿಕ್ಕಮಗಳೂರು, ಕೋಲಾರ, ಚಾಮರಾಜನಗರ, ಕೊಪ್ಪಳ, ಬಳ್ಳಾರಿ, ಹಾಸನ ಸೇರಿದಂತೆ 11 ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆಗಳು ಲಸಿಕೆ ಕೇಂದ್ರ ತೆರೆಯಲು ಮುಂದಾಗಿಲ್ಲ.

ಈ ಕುರಿತು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂ ಅಸೋಸಿಯೇಷನ್‌ (ಫನಾ) ಅಧ್ಯಕ್ಷ ಪ್ರಸನ್ನ ಮಾತನಾಡಿ, ‘ರಾಜ್ಯ ಬಹುತೇಕ ಖಾಸಗಿ ಆಸ್ಪತ್ರೆಗಳ ಬಳಿ ಲಸಿಕೆ ದಾಸ್ತಾನು ಇಲ್ಲ. ಕೆಲ ದೊಡ್ಡ ಆಸ್ಪತ್ರೆಗಳಲ್ಲಿ ಒಟ್ಟಾರೆ 40ರಿಂದ 50 ಸಾವಿರ ಡೋಸ್‌ನಷ್ಟುಲಸಿಕೆ ಇರಬಹುದು. ಹೀಗಾಗಿ, ಎಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆ ಶಿಬಿರ ನಡೆಯುವುದಿಲ್ಲ, ಜತೆಗೆ ಎಲ್ಲರಿಗೂ ಲಸಿಕೆ ಸಿಗುವುದಿಲ್ಲ’ ಎಂದು ತಿಳಿಸಿದ್ದಾರೆ.