ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಮೌನ ವಹಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಕೊಪ್ಪಳ (ಜುಲೈ 8): ಕಲ್ಯಾಣ ಕರ್ನಾಟಕದ ಬಹುಪಾಲು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ತಾಲೂಕಿನ ದ್ಯಾಂಪೂರು ಗ್ರಾಮದಲ್ಲಿ ನೂತನ ಸರ್ಕಾರಿ ಪ್ರೌಢಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 46 ಸಾವಿರ ಶಾಲೆ, 57 ಲಕ್ಷ ಮಕ್ಕಳಿದ್ದು, ಶಿಕ್ಷಣ ಇಲಾಖೆಯಿಂದ ಸಕಲ ಸವಲತ್ತು ಕಲ್ಪಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಹಣ ಶಿಕ್ಷಣಕ್ಕೆ ಬಳಕೆ ಆಗುತ್ತಿದೆ ಎಂದರು.
ಮಕ್ಕಳ ಅಭಿವೃದ್ಧಿಯೇ ರಾಷ್ಟ್ರದ ಅಭಿವೃದ್ಧಿ:
ಶಾಸಕ ಬಸವರಾಜ ರಾಯರಡ್ಡಿ ಅವರು ನನ್ನ ಇಲಾಖೆಯಿಂದ ಬರುವ ಹಣಕ್ಕಿಂತ ತಮ್ಮ ಕ್ಷೇತ್ರದಲ್ಲಿ ಬಹುಪಾಲು ಕಲ್ಯಾಣ ಕರ್ನಾಟಕ ಹಣವನ್ನು ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ ಎಂದ ಅವರು, ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಿದರೆ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದರು.
13000 ಶಿಕ್ಷಕರ ನೇಮಕಾತಿ:
ಈ ಹಿಂದೆ ಮಕ್ಕಳು ನಕಲು ಮಾಡಿ ತೇರ್ಗಡೆಯಾಗುತ್ತಿದ್ದರು. ಅದಕ್ಕೆ ನಾನು ಬ್ರೇಕ್ ಹಾಕಿದ್ದರಿಂದ ಸಾಕ್ಷರತಾ
ಪ್ರಮಾಣ ಹೆಚ್ಚಾಗಿದೆ ಎಂದ ಅವರು, ಹಿಂದಿನ ಸರ್ಕಾರ ಶಿಕ್ಷಕರ ಕೊರತೆ ನೇಮಕ ಮಾಡಲಿಲ್ಲ. ನಾನು ಬಂದ ಬಳಿಕ 13000 ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಶೇ. 80ರಷ್ಟು ಶಿಕ್ಷಕರ ಕೊರತೆ ನೀಗಿದೆ ಎಂದು ಹೇಳಿದರು.
ತಳಬಾಲಿನ ಭೀಮವ್ವಗೆ ಸನ್ಮಾನ:
ಅಗತ್ಯವಿರುವ ಕೆಪಿಎಸ್‌ಸಿ ಶಾಲೆಗಳಿಗೆ ಶಾಲಾ ವಾಹನ ವ್ಯವಸ್ಥೆ ಮಾಡಲಾಗುವುದು. ಶೀಘ್ರದಲ್ಲಿ ಶಿಕ್ಷಕರ ಹಾಜರಾತಿ ಡಿಜಿಟಿಲಿಕರಣ ಮಾಡಿ ಫೇಸ್ ಹಾಜರಾತಿ ಕಡ್ಡಾಯಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಇದೇ ವೇಳೆ ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ರಾಜ್ಯಪಾಲರಿಂದ 16 ಚಿನ್ನದ ಪದಕ ಪಡೆದ ತಳಬಾಲಿನ ಭೀಮವ್ವ ಅವರನ್ನು ಸನ್ಮಾನಿಸಲಾಯಿತು. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಬಿಇಒ ಸೋಮಶೇಖರಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಮಂಜುಳಾ, ಚಂದ್ರಶೇಖರಯ್ಯ ಹಿರೇಮಠ, ಕೆರಿಸಬಪ್ಪನಿಡಗುಂದಿ, ಮಂಜುನಾಥ ಕಡೇಮನಿ, ಖಾಸಿಂಸಾಬ್ ತಳಕಲ್, ಬಸವರಾಜ ಮಾಸೂರು, ಅಂದಾನಗೌಡ, ಈರಪ್ಪ ಕುಡಗುಂಟಿ, ಕ್ಷರಭಯ್ಯ ಇದ್ದರು.
ಸಿಎಂ ಬದಲಾವಣೆ ಬಗ್ಗೆ ಬಾಯಿ ಮುಚ್ಚಿಕೊಂಡಿರಿ ಎಂದಿದ್ದಾರೆ: ಸಚಿವ ಮಧು
ಮುಖ್ಯಮಂತ್ರಿ ಬದಲಾವಣೆ ಕುರಿತು ನಮಗೆ ಬಾಯಿ ಮುಚ್ಚಿಕೊಂಡು ಇರಲು ಹೇಳಿದ್ದಾರೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬಾಯಿ ತೆರೆದರೆ ಏನು ಪ್ರಯೋಜನ? ನಾನು ಬಾಯಿ ತೆರೆಯುವವನಲ್ಲ. ಸಿಎಂ ಬದಲಾವಣೆ ವಿಚಾರದಲ್ಲಿ ಗಪ್ ಚುಪ್ ಇರುತ್ತೇನೆ ಎಂದರು.
ಸುರ್ಜೇವಾಲ ಅವರು ನಮ್ಮ ನಾಯಕರು. ರಾಜ್ಯಕ್ಕೆ ಆಗಮಿಸಿ ಶಾಸಕರ ಸಭೆ ಮಾಡಿಕೊಂಡು ಹೋಗುತ್ತಾರೆ. ಅದರಿಂದ ನಿಮಗೇನು? ಶಾಸಕರ ಅಸಮಾಧಾನ ವಿಚಾರವಾಗಿ ಅವರೇನು ನಿಮಗೆ ಬಂದು ಹೇಳಿದರಾ ಎಂದು ಮಾಧ್ಯಮದವರನ್ನು ಸಚಿವರು ಪ್ರಶ್ನಿಸಿದರು.
