ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ದೇವಸ್ಥಾನಗಳಿಗಿಂತ ಶಾಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಪ್ರತಿಪಾದಿಸಿದ್ದಾರೆ. ಹಿರೇವಂಕಲಕುಂಟ ಗ್ರಾಮದಲ್ಲಿ ಬಾಲಕಿಯರ ಪ್ರೌಢಶಾಲೆ ಉದ್ಘಾಟಿಸಿದ ಅವರು, ದೇವಸ್ಥಾನಗಳಿಗೆ ಹಣ ನೀಡುವ ಬದಲು ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದರು. 

ಕೊಪ್ಪಳ(ಜು.7): ಬಾಲಕಿಯರ ಸರಕಾರಿ ಪ್ರೌಢಶಾಲೆ ಉದ್ಘಾಟನೆಗಾಗಿ ಕೊಪ್ಪಳಕ್ಕೆ ಆಗಮಿಸಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ, 'ನಾನು ಯಾವ ದೇವಸ್ಥಾನಕ್ಕೂ ಹಣ ನೀಡೋದಿಲ್ಲ. ದೇವಸ್ಥಾನದಲ್ಲಿ ಗಂಟೆ ಹೊಡೆಯೋದಕ್ಕಿಂತ ಶಾಲೆಯಲ್ಲಿ ಗಂಟೆಯ ಶಬ್ದ ಕೇಳಬೇಕು' ಎಂದು ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಗ್ರಾಮದಲ್ಲಿ ಬಾಲಕಿಯರ ಪ್ರೌಢಶಾಲೆಯನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಉಪಸ್ಥಿತರಿದ್ದರು.

ಬಳಿಕ ಮಾತನಾಡಿದ ಮಧು ಬಂಗಾರಪ್ಪ, 'ಬಿಜೆಪಿ ಅವರು ಹಿಂದುತ್ವ, ಹಿಂದುತ್ವ ಎಂದು ಮಾತನಾಡುತ್ತಾರೆ. ಅವರಿಗೇನು ಗೊತ್ತು ಹಿಂದುತ್ವ ಬದನೆಕಾಯಿ. ಹಿಂದುತ್ವ ಅವರಿಗೇನು ಗೊತ್ತು. ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲು ಆಗುತ್ತಿರಲಿಲ್ಲ. ನಾವು ಆರಾಧನಾ ಕಾರ್ಯಕ್ರಮದ ಮೂಲಕ ದೇವಸ್ಥಾನಗಳಿಗೆ ಹಣ ನೀಡಿದೆವು. ಅಲ್ಲಿ‌ ಜಾತಿ ನೋಡಲಿಲ್ಲ. ಅಜೀಂ ಪ್ರೇಮ್‌ಜಿ ಅವರು ಯಾವ ಜಾತಿಯವರು. ಅಂಥ ಪುಣ್ಯಾತ್ಮರು ನಮ್ಮ ರಾಜ್ಯದಲ್ಲಿ ಇರುವುದು ಪುಣ್ಯ ಎಂದು ಹೇಳಿದ್ದಾರೆ.

ಸರ್ಕಾರಿ ಶಾಲೆಯಲ್ಲಿಯೇ ನಮ್ಮ‌ ತಂದೆ ಬಂಗಾರಪ್ಪ, ಸಿಎಂ ಸಿದ್ದರಾಮಯ್ಯ ಕಲಿತಿದ್ದರು. ಸಿದ್ದರಾಮಯ್ಯ ನೇರವಾಗಿ 4ನೇ ತರಗತಿಗೆ ಹೋಗಿದ್ದರು. ಅಲ್ಲಿಯವರೆಗೆ ಅವರು ದನ ಕಾಯುತ್ತಿದ್ದರೋ ಏನು ಮಾಡುತ್ತಿದ್ದರೋ ಗೊತ್ತಿಲ್ಲ. ನನ್ನ‌ ಕ್ಷೇತ್ರದಲ್ಲಿ ಜನರು ದೇವಸ್ಥಾನಕ್ಕೆ ಹಣ ಕೇಳಲು ಬರುತ್ತಾರೆ. ನಾನು ಯಾವುದೇ ದೇವಸ್ಥಾನಕ್ಕೆ ಹಣ ಕೊಡುವುದಿಲ್ಲ. ದೇವಸ್ಥಾನದ ಗಂಟೆ ಹೊಡೆದರೆ ಏನಾಗುತ್ತೋ ಗೊತ್ತಿಲ್ಲ. ಆದರೆ ಅದಕ್ಕಿಂತ ಹೆಚ್ಚು ಶಾಲೆಯ ಗಂಟೆ ಹೊಡೆಯಬೇಕು ಎಂದು ಹೇಳಿದ್ದಾರೆ.

ಇನ್ನು ತಮ್ಮ ಹೇರ್‌ಸ್ಟೈಲ್‌ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ, 'ನನ್ನ ಹೇರಸ್ಟೈಲ್ ಇರುವುದೇ ಹೀಗೆ. ಬಿಜೆಪಿಯವರು ಅನೇಕರು ಟೀಕೆ ಮಾಡಿದವರು. ಅವರು ಏನು ಬೇಕಾದರು ಮಾತನಾಡಲಿ. ಒಮ್ಮೆ ನಾನು ಹೇರಸ್ಟೈಲ್ ಸಣ್ಣದಾಗಿ ಮಾಡಿಸಿಕೊಂಡಿದ್ದೆ. ಆಗ ನಮ್ಮ‌ ತಂದೆಯವರು ನನ್ನ ಜೊತೆಗೆ 15 ದಿನ ಮಾತನಾಡಿರಲಿಲ್ಲ. ಈಗ ನನ್ನ ಹೇರಸ್ಟೈಲ್ ಚೆನ್ನಾಗಿದ್ದರೆ ಒಂದು ಚಪ್ಪಾಳೆ ಹೊಡೆಯಿರಿ' ಎಂದು ಹೇಳುವ ಮೂಲಕ ಮಧು ಬಂಗಾರಪ್ಪ ಚಪ್ಪಾಳೆ ಹೊಡಿಸಿಕೊಂಡಿದ್ದಾರೆ.

ನಮ್ಮ‌ತಂದೆಯ ಗುಣಗಳನ್ನ ನಾನು ರಾಯರೆಡ್ಡಿ ಅವರ ಬಳಿ ನೋಡುತ್ತಿದ್ದೇನೆ. ಬಾಳ‌ ಕಷ್ಟದ ಇಲಾಖೆ ನಿನಗೆ ಕೊಡುತ್ತಿದ್ದೇವೆ ಅಂತ ಸಿ ಎಂ,‌ಡಿಸಿಎಂ ಹೇಳಿ ಖಾತೆ ನೀಡಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿದ್ದೀನಿ. ಎಲ್ಲವನ್ನ ನಿಭಾಯಿಸ್ತಿನಿ. ಮಾಜಿ ಶಿಕ್ಷಣ ಸಚಿವರು ನನ್ನ ಬಗ್ಗೆ ಟೀಕೆ ಮಾಡಿದ್ದರು. ಇಡಿ ರಾಜ್ಯದಲ್ಲಿ ಕಾಪಿ ಚೀಟಿಗಳನ್ನ ಬಂದ್ ಮಾಡಿದ್ದಿನಿ. ಕಾಪಿ ಮಾಡಿ ಬರೆದ್ರೆ ಇವತ್ತು ಪಾಸ್ ಆಗ್ತಾರೆ ಆದ್ರೆ ಜೀವನದಲ್ಲಿ ಫೇಲ್‌ ಆಗ್ತಾರೆ. ಅದಕ್ಕೆ ಮೂರು ಎಕ್ಸಾಂ ಪಾಲಿಸಿ ಮಾಡಿದ್ದೇವೆ. ಮಕ್ಕಳು ಫೇಲ್ ಆದ್ರೂ ಪರವಾಗಿಲ್ಲ, ಅವರನ್ನ ತಿದ್ದೋ ಕೆಲಸ ಮಾಡೋಣ. ಇಂದು ಮೂರು ಪರೀಕ್ಷಾ ಪಾಲಿಸಿಯಿಂದ 85% ಮಕ್ಕಳು ಪಾಸ್ ಆಗುತ್ತಿದ್ದಾರೆ. ಟೀಕೆ ಟಿಪ್ಪಣಿಗಳು ಏನೆ ಬರಲಿ ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ.

ಶಿಕ್ಷಣ ಸಚಿವರಿಗಾಗಿ ಕುಂಭ ಹೊತ್ತು ಸುಸ್ತಾದ ವಿದ್ಯಾರ್ಥಿಗಳು

ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮಕ್ಕೆ ಅಂದಾಜು ಒಂದೂವರೆ ಗಂಟೆ ತಡವಾಗಿ ಮಧು ಬಂಗಾರಪ್ಪ ಆಗಮಿಸಿದ್ದರು. ಇದರಿಂದಾಗಿ ಶಿಕ್ವಣ ಸಚಿವರ ಸ್ವಾಗತಕ್ಕೆ ಕುಂಬ ಹೊತ್ತು ನಿಂತಿದ್ದ ವಿದ್ಯಾರ್ಥಿಗಳು ಸುಸ್ತಾಗಿ ಹೋಗಿದ್ದರು. 10.30 ಕ್ಕೆ ಸಚಿವರು ಆಗಮಿಸಬೇಕಿತ್ತು. ಸಚಿವರ ಆಗಮನಕ್ಕೂ ಅರ್ಧಗಂಟೆ ಮುಂಚೆಯಿಂದಲೇ ವಿದ್ಯಾರ್ಥಿನಿಯರು ಕಾಯುತ್ತಿದ್ದರು. 10 ಗಂಟೆಯಿಂದ ಸಚಿವ ಮಧು ಬಂಗಾರಪ್ಪಗಾಗಿ ಕಾದು ಕುಳಿತಿದ್ದರು. ಕುಂಭ ಹೊತ್ತು ಸುಸ್ತಾಗಿ ಬಳಿಕ‌ ನೆಲದಲ್ಲಿಯೇ ಕುಳಿತುಕೊಳ್ಳಲು ಆರಂಭಿಸಿದ್ದರು.