*  1.32 ಲಕ್ಷ ಕೋವಿಡ್‌ ವಾರಿಯ​ರ್ಸ್‌ 2ನೇ ಲಸಿಕೆ ಪಡೆದಿಲ್ಲ*  57746 ಆರೋಗ್ಯ ಸಿಬ್ಬಂದಿ, 74901 ಮಂದಿ ಮುಂಚೂಣಿ ಸಿಬ್ಬಂದಿ*  ಶೀಘ್ರ ಪಡೆವ ವಿಶ್ವಾಸ- ರಂದೀಪ್‌  

ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಡಿ.05): ಒಮಿಕ್ರೋನ್‌ನ(Omicron) ಆತಂಕದಿಂದ ಜನಸಾಮಾನ್ಯರು ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತಿದ್ದರೆ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಮಾತ್ರ ಕೋವಿಡ್‌ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಸಂಗತಿ ರಾಜ್ಯ ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ. ಮೊದಲ ಡೋಸ್‌ ಪಡೆದಿರುವ ಆರೋಗ್ಯ ಕಾರ್ಯಕರ್ತರಲ್ಲಿ ಇನ್ನೂ 57,746 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿಲ್ಲ. ಹಾಗೆಯೇ ಮುಂಚೂಣಿ ಕಾರ್ಯಕರ್ತರಲ್ಲಿ 74,901 ಮಂದಿ ಎರಡನೇ ಡೋಸ್‌ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ. ತನ್ಮೂಲಕ ಒಟ್ಟು 1.32 ಲಕ್ಷ ಮಂದಿ ಕೊರೋನಾ ವಾರಿಯ​ರ್ಸ್‌(Corona Warriors) ಪೂರ್ಣ ಲಸಿಕಾಕರಣದ ವ್ಯಾಪ್ತಿಯಿಂದ ಇನ್ನೂ ಹೊರಗೆ ಉಳಿದಿದ್ದಾರೆ.

ಕೆಲವರು ಮೊದಲ ಡೋಸೂ ಪಡೆದಿಲ್ಲ:

ಅಷ್ಟೇ ಅಲ್ಲದೆ ಕೊರೋನಾ(Coronavirus) ವಾರಿಯರ್‌ಗಳಲ್ಲಿ ಇನ್ನೂ ಕೆಲವರು ಮೊದಲ ಡೋಸ್‌ ಪಡೆದಿಲ್ಲ. ಕಳೆದ ಕೆಲ ದಿನಗಳಿಂದ ಪ್ರತಿದಿನ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್‌ ಪಡೆಯುತ್ತಿರುವ ಮಾಹಿತಿ ದಾಖಲಾಗುತ್ತಲೇ ಇದೆ. ಅದೇ ರೀತಿ ಮುಂಚೂಣಿ ಕಾರ್ಯಕರ್ತರಲ್ಲಿಯೂ ಅನೇಕರು ಕೋವಿಡ್‌ ಲಸಿಕೆಯನ್ನು(Covid19) ಇನ್ನೂ ಪಡೆದೇ ಇಲ್ಲ. ಲಸಿಕೆ ಪಡೆದ ಮುಂಚೂಣಿ ಕಾರ್ಯಕರ್ತರ ಸಂಖ್ಯೆ ಪ್ರತಿದಿನ ಎರಡಂಕಿಯಲ್ಲಿ ವರದಿಯಾಗುತ್ತಲೇ ಇದೆ.
ಎಲ್ಲರಿಗಿಗಿಂತ ಮುಂಚಿತವಾಗಿ ಲಸಿಕೆ(Vaccine) ಪಡೆಯುವ ಅವಕಾಶ ಸಿಕ್ಕಿದ್ದ ಹಾಗೆಯೇ ಬೂಸ್ಟರ್‌ ಡೋಸ್‌(Booster Dose) ಆದ್ಯತೆಯ ಮೇರೆಗೆ ನೀಡಬೇಕು ಎಂಬ ಒತ್ತಾಯ ವ್ಯಕ್ತವಾಗುತ್ತಿರುವ ನಡುವೆ, ಕೊರೋನಾ ವಾರಿಯರ್‌ಗಳಲ್ಲಿ ಇಂದಿಗೂ ಪ್ರತಿ ದಿನ ಸಾವಿರಕ್ಕಿಂತ ಹೆಚ್ಚು ಮಂದಿ ಮಾತ್ರ ಎರಡನೇ ಡೋಸ್‌ ಲಸಿಕೆ ಪಡೆಯುತ್ತಿದ್ದಾರೆ.

Covid19 Vaccine: ಬೆಂಗ್ಳೂರಲ್ಲಿ ಒಂದೇ ದಿನ 89,000+ ಮಂದಿಗೆ ಲಸಿಕೆ

ಇವರು ವಾರಿಯರ್‌ಗಳು:

ಆರೋಗ್ಯ ಕಾರ್ಯಕರ್ತರ ವ್ಯಾಪ್ತಿಯಲ್ಲಿ ವೈದ್ಯರು, ಶುಶ್ರೂಷಕಿಯರು, ಪ್ರಯೋಗಾಲಯ ಸಿಬ್ಬಂದಿ ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳ ಬಂದರೆ ಮುಂಚೂಣಿ ಕಾರ್ಯಕರ್ತರ ವ್ಯಾಪ್ತಿಯಲ್ಲಿ ಪೊಲೀಸ್‌(Police) ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿನ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಪತ್ರಕರ್ತರು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವವರು ಬರುತ್ತಾರೆ.

ಶೀಘ್ರ ಪಡೆವ ವಿಶ್ವಾಸ- ರಂದೀಪ್‌:

ಕೊರೋನಾ ವಾರಿಯರ್‌ಗಳೇ ಲಸಿಕೆ ಪಡೆಯಲು ಹಿಂದೇಟು ಹಾಕುವುದರ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್‌, ‘ಕೊರೋನಾ ವಾರಿಯರ್‌ಗಳು ಲಸಿಕೆ ಪಡೆದು ಇನ್ನಿತರರಿಗೆ ಮಾದರಿ ಆಗಬೇಕಿತ್ತು. ಆದರೂ ಕೊರೋನಾ ವಾರಿಯರ್‌ಗಳಲ್ಲಿ ಅನೇಕರು ಇನ್ನೂ ಲಸಿಕೆ ಪಡೆದಿಲ್ಲ ಎಂಬ ಮಾಹಿತಿ ನಮ್ಮ ಬಳಿ ಇದೆ. ಆದರೆ ಇನ್ನು ಸರ್ಕಾರಿ ಕಚೇರಿಗಳು ಸೇರಿದಂತೆ ಮಾಲ್‌, ಸಿನಿಮಾ ಥಿಯೇಟರ್‌ಗಳಿಗೆ ಪ್ರವೇಶ ಪಡೆಯಲು ಲಸಿಕೆ ಪಡೆಯುವುದು ಅನಿವಾರ್ಯವಾಗಿರುವುದರಿಂದ ಎಲ್ಲರೂ ಲಸಿಕೆ ಪಡೆಯುತ್ತಾರೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ.

ರಾಜ್ಯದ ಲಸಿಕಾ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್‌ ಅವರ ಪ್ರಕಾರ, ಆರೋಗ್ಯ ಕಾರ್ಯಕರ್ತರಲ್ಲಿ ನರ್ಸಿಂಗ್‌, ಪಾರಾಮೆಡಿಕಲ್‌ ವಿದ್ಯಾರ್ಥಿಗಳು ಕೂಡ ಇರುವುದರಿಂದ ಅವರು ತಮ್ಮ ಶಿಕ್ಷಣ ಮುಗಿಸಿಕೊಂಡು ವಾಪಾಸ್‌ ತಮ್ಮ ತಮ್ಮ ರಾಜ್ಯಗಳಿಗೆ ಹಿಂತಿರುಗಿರಬಹುದು. ಉಳಿದಂತೆ ಅವಧಿ ಮೀರಿದ್ದರೂ ಇನ್ನೂ ಎರಡನೇ ಡೋಸ್‌ ಲಸಿಕೆ ಪಡೆಯದವರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Omicron ಭೀತಿ: ರಾಜ್ಯದಲ್ಲಿ ಸೋಂಕು ಮತ್ತಷ್ಟು ಏರಿಕೆ: ಎಚ್ಚರ ತಪ್ಪಿದ್ರೆ ಅಪಾಯ ಫಿಕ್ಸ್‌..!

* ಆರೋಗ್ಯ ಕಾರ್ಯಕರ್ತರ ಲಸಿಕೆ ಪಡೆದ ವಿವರ

ದಿನಾಂಕ ಮೊದಲ ಡೋಸ್‌ ಎರಡನೇ ಡೋಸ್‌

ನ.30 13 986
ಡಿ. 1 4 1,273
ಡಿ.2 5 1,135
ಡಿ.3 4 1,24
ಡಿ.4 10 476
ಒಟ್ಟು 7,64,724 7,06,978

* ಮುಂಚೂಣಿ ಕಾರ್ಯಕರ್ತರು

ದಿನಾಂಕ ಮೊದಲ ಡೋಸ್‌ ಎರಡನೇ ಡೋಸ್‌

ನ.30 62 2,114
ಡಿ.1 32 2,463
ಡಿ.2 24 1,620
ಡಿ.3 21 1,500
ಡಿ.4 9 1,636
ಒಟ್ಟು 9,43,188 8,68,287