ಬೆಂಗಳೂರು(ಮೇ.18): ಲಾಕ್‌ಡೌನ್‌ ವೇಳೆ ನೆರೆಯ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುತ್ತಿರುವವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಸೋಂಕು ಪತ್ತೆಯಾಗುತ್ತಿರುವುದು ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ಕಲಬುರಗಿ, ಅವಿಭಜಿತ ದಕ್ಷಿಣ ಕನ್ನಡ, ಮಂಡ್ಯ ಜಿಲ್ಲೆಗಳಿಗೇ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುವ ಸಾಧ್ಯತೆ ಇದೆ ಎಂಬ ಆಘಾತಕಾರಿ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಹೀಗೆ ಒಮ್ಮಿಂದೊಮ್ಮೆಲೆ ಪ್ರವಾಹದಂತೆ ಜನ ಹರಿದುಬಂದರೆ ಸೂಕ್ತ ಭದ್ರತೆಯೊಂದಿಗೆ ಕ್ವಾರಂಟೈನ್‌ ಮಾಡುವುದೇ ಜಿಲ್ಲಾಡಳಿತಗಳ ಪಾಲಿಗೆ ದೊಡ್ಡ ಸವಾಲಿನ ಕಾರ್ಯವಾಗಲಿದೆ.

ಮುಂಬೈನ ಹೊಟೇಲ್‌ ಉದ್ಯಮದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗದಲ್ಲಿದ್ದು, ಇದೀಗ ಮರಳಿ ತವರು ಜಿಲ್ಲೆಗೆ ಬರಲು ಉತ್ಸುಕರಾಗಿದ್ದಾರೆ. ಆದರೆ ಅವರನ್ನು ಕರೆಸಲು ದಕ್ಷಿಣ ಕನ್ನಡ ಆಡಳಿತ ವಿಳಂಬ ಧೋರಣೆ ತಾಳುತ್ತಿದ್ದು, ಮಧ್ಯಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸ್ಥಳೀಯರು ಮನವಿ ಪತ್ರ ಸಲ್ಲಿಸಿದ್ದಾರೆ.

ಕರ್ನಾಟಕಕ್ಕೆ ‘ಮಹಾ’ ಕೊರೋನಾಘಾತ!

ಇದೇವೇಳೆ ಸೇವಾ ಸಿಂಧು ಪೋರ್ಟ್‌ನಲ್ಲಿ 5 ಸಾವಿರ ಮಂದಿ ಮಂಡ್ಯಕ್ಕೆ ಬರಲು ಹೆಸರು ನೋಂದಣಿ ಮಾಡಿಕೊಂಡಿದ್ದಾರಂತೆ. ಈ ಪೈಕಿ ಜಿಲ್ಲಾಡಳಿತದಿಂದ 3 ಸಾವಿರ ಜನರಿಗೆ ಅನುಮತಿ ನೀಡಿದೆ ಎಂದು ವರದಿಗಳು ಬಂದಿವೆ. ಇದೇವೇಳೆ ಈಗಾಗಲೇ 13 ಸಾವಿರ ಮಂದಿ ವಲಸಿಗ ಕಾರ್ಮಿಕರನ್ನು ಕ್ವಾರಂಟೈನ್‌ ಮಾಡಲಾಗಿರುವ ಕಲಬುರಗಿ ಜಿಲ್ಲೆಗೆ ಮುಂಬೈ ಮತ್ತು ಪುಣೆಗಳಿಂದ ಇನ್ನೂ 20ರಿಂದ 30 ಸಾವಿರ ಮಂದಿ ವಲಸಿಗರು ಬರಲು ಬಾಕಿಯಿದ್ದು ಅವರನ್ನೆಲ್ಲ ಕ್ವಾರಂಟೈನ್‌ ಮಾಡುವುದೇ ಜಿಲ್ಲಾಡಳಿತದ ಮುಂದಿರುವ ಬಹು ದೊಡ್ಡ ಸವಾಲಾಗಿದೆ.