Asianet Suvarna News Asianet Suvarna News

Covid-19 Crisis: ಸತತ 2ನೇ ದಿನವೂ ರಾಜ್ಯದಲ್ಲಿ ಕೊರೋನಾ ಸ್ಫೋಟ: 40000 ಕೇಸು

ರಾಜ್ಯದಲ್ಲಿ ಸತತ ಎರಡನೇ ದಿನವೂ 40000ಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣ ಮತ್ತು 20ರ ಆಸುಪಾಸಿನಲ್ಲಿ ಸಾವು ದಾಖಲಾಗಿದೆ. ಆದರೆ ಇದರ ಜೊತೆಗೆ ಒಂದೇ ದಿನ 23 ಸಾವಿರ ಸೋಂಕಿತರು ಗುಣಮುಖರಾಗಿರುವುದು ವಿಶೇಷವಾಗಿದೆ. ಜೊತೆಗೆ ಪಾಸಿಟಿವಿಟಿ ಕೂಡಾ ಶೇ.21ರಿಂದ ಶೇ.18.8ಕ್ಕೆ ಇಳಿದಿದೆ.

More Than 40000 Covid Cases on jan 20th in Karnataka gvd
Author
Bangalore, First Published Jan 20, 2022, 3:15 AM IST

ಬೆಂಗಳೂರು (ಜ.20): ರಾಜ್ಯದಲ್ಲಿ ಸತತ ಎರಡನೇ ದಿನವೂ 40000ಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣ (Covid Cases) ಮತ್ತು 20ರ ಆಸುಪಾಸಿನಲ್ಲಿ ಸಾವು ದಾಖಲಾಗಿದೆ. ಆದರೆ ಇದರ ಜೊತೆಗೆ ಒಂದೇ ದಿನ 23 ಸಾವಿರ ಸೋಂಕಿತರು ಗುಣಮುಖರಾಗಿರುವುದು ವಿಶೇಷವಾಗಿದೆ. ಜೊತೆಗೆ ಪಾಸಿಟಿವಿಟಿ ಕೂಡಾ ಶೇ.21ರಿಂದ ಶೇ.18.8ಕ್ಕೆ ಇಳಿದಿದೆ.

ರಾಜ್ಯದಲ್ಲಿ ಬುಧವಾರ 40,499 ಮಂದಿ ಸೋಂಕಿತರಾಗಿದ್ದು, 21 ಸೋಂಕಿತರು ಸಾವಿಗೀಡಾಗಿದ್ದಾರೆ (Death). 23,209 ಮಂದಿ ಗುಣಮುಖರಾಗಿದ್ದು, ಸದ್ಯ 2,67,650 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಬುಧವಾರ ಕೂಡಾ ಮಂಗಳವಾರದಷ್ಟೇ 2.1 ಲಕ್ಷ ಸೋಂಕು ಪರೀಕ್ಷೆಗಳು ನಡೆದಿವೆ. ಆದರೆ, ಸೋಂಕಿತರ ಸಂಖ್ಯೆಮಾತ್ರ 958 ಇಳಿಕೆಯಾಗಿವೆ (ಮಂಗಳವಾರ 41,457 ಪ್ರಕರಣ). ರಾಜಧಾನಿ ಬೆಂಗಳೂರಿನಲ್ಲಿ 24,135 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1,460 ಪ್ರಕರಣಗಳು ಕುಸಿದಿವೆ (ಮಂಗಳವಾರ 25,595).

ದಾಖಲೆಯ ಗುಣಮುಖ: ಏಳು ತಿಂಗಳ ಬಳಿಕ ಅತಿ ಹೆಚ್ಚು ಸೋಂಕಿತರ ಒಂದೇ ದಿನ ಗುಣಮುಖರಾಗಿದ್ದಾರೆ. ಒಂದೇ ದಿನಕ್ಕೆ ಮೂರು ಪಟ್ಟು ಹೆಚ್ಚಳವಾಗಿದೆ. ಕಳೆದ ವಾರ ಪತ್ತೆಯಾದ 20 ಸಾವಿರ ಪ್ರಕರಣಗಳ ಪೈಕಿ ಪೈಕಿ ಶೇ.99.5ರಷ್ಟುಮಂದಿ ಗುಣಮುಖರಾಗಿದ್ದು, ಹೀಗಾಗಿಯೇ ಗುಣಮುಖರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ಗುಣಮುಖರ ಸಂಖ್ಯೆ 30 ಲಕ್ಷ ಗಡಿದಾಟಿವೆ. ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 33.29 ಲಕ್ಷಕ್ಕೆ, ಗುಣಮುಖರ ಸಂಖ್ಯೆ 30.02 ಲಕ್ಷಕ್ಕೆ, ಸೋಂಕಿತರ ಸಾವಿನ ಸಂಖ್ಯೆ 38486ಕ್ಕೆ ಏರಿಕೆಯಾಗಿದೆ.

Covid-19 Crisis: ಭಾರತದಲ್ಲೀಗ ಕೋವಿಡ್‌ ಕೇಸ್‌ ಇಳಿಕೆ, ಪಾಸಿಟಿವಿಟಿ ದರ ಏರಿಕೆ

ಎಲ್ಲಿ ಎಷ್ಟು ಮಂದಿಗೆ ಸೋಂಕು: ಬುಧವಾರ ಬೆಂಗಳೂರು ಹೊರತು ಪಡಿಸಿದರೆ ತುಮಕೂರು 1804, ಹಾಸನ 1,785, ಮೈಸೂರು 1341, ಮಂಡ್ಯ1340, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಬಳ್ಳಾರಿ, ಧಾರವಾಡ, ಕಲಬುರಗಿ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ 500ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬಾಗಲಕೋಟೆ, ಹಾವೇರಿ ಹಾಗೂ ಯಾದಗಿರಿಯಲ್ಲಿ 100ಕ್ಕಿಂತ ಕಡಿಮೆ ಮಂದಿಗೆ ಸೋಂಕು ತಗುಲಿದೆ.

21 ಸಾವು: ಬೆಂಗಳೂರು ಐದು, ಮೈಸೂರು ನಾಲ್ಕು, ದಕ್ಷಿಣ ಕನ್ನಡ ಮೂರು, ವಿಜಯಪುರ, ತುಮಕೂರು, ಶಿವಮೊಗ್ಗ, ರಾಯಚೂರು, ಹಾಸನ, ಗದಗ, ಚಿಕ್ಕಬಳ್ಳಾಪುರ, ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ. ಸೋಂಕಿತರ ಪೈಕಿ ಆರು ಮಂದಿ 45 ರಿಂದ 59 ವರ್ಷದವರಿದ್ದು, ಬಾಕಿ 15 ಸೋಂಕಿತರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ.

ಸೋಂಕಿಗೆ ಇಬ್ಬರು ಮಕ್ಕಳು ಬಲಿ: ರಾಜ್ಯದಲ್ಲಿ ಮಂಗಳವಾರ ಕೊರೋನಾ ಸೋಂಕಿಗೆ 13 ಮತ್ತು 16 ವರ್ಷದ ಇಬ್ಬರು ಬಾಲಕಿಯರು ಬಲಿಯಾಗಿದ್ದಾರೆ. 3ನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಹೇಳಿಕೆಗಳ ಬೆನ್ನಲ್ಲೇ ಈ ಸಾವು ಸಂಭವಿಸಿರುವುದು ಆತಂಕ ಮೂಡಿಸಿದೆ. ಚಿತ್ರದುರ್ಗದಲ್ಲಿ ಜ್ವರ ಮತ್ತು ಕೆಮ್ಮಿನ ಲಕ್ಷಣ ಹೊಂದಿದ್ದ ವರ್ಷದ ಬಾಲಕಿ ಜ.12 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜ.17 ರಂದು ಸಾವಿಗೀಡಾಗಿದ್ದಾಳೆ. ಮೈಸೂರಿನಲ್ಲಿ 16 ವರ್ಷದ ಬಾಲಕಿ ಕೆಮ್ಮು ಮತ್ತು ಶೀತ ಲಕ್ಷಣದೊಂದಿಗೆ ಜ.13 ರಂದು ಆಸ್ಪತ್ರೆ ದಾಖಲಾಗಿ ಜ.15ರಂದು ಮೃತಪಟ್ಟಿದ್ದಾಳೆ. 

Coronavirus: ಬೆಂಗ್ಳೂರಲ್ಲಿ ತುಸು ಇಳಿದ ಸೋಂಕಿತರ ಸಂಖ್ಯೆ

ಆರೋಗ್ಯ ಇಲಾಖೆಯ ಕೊರೋನಾ ಬುಲೆಟಿನ್‌ನಲ್ಲಿ ಈ ಇಬ್ಬರು ಕೊರೋನಾದಿಂದಲೇ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಕೊರೋನಾ ವಾರ್‌ ರೂಂ ಮಾಹಿತಿ ಪ್ರಕಾರ, ಕೊರೋನಾ ಎರಡನೇ ಅಲೆಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದೆ. ಎರಡನೇ ಅಲೆಯ ಏಪ್ರಿಲ್‌ನಲ್ಲಿ ಮಕ್ಕಳಲ್ಲಿ ಕೊರೋನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.8.8 ರಷ್ಟಿತ್ತು. ಸದ್ಯ ಜನವರಿಯಲ್ಲಿ ಶೇ.5.7ರಷ್ಟಿದೆ. ಸದ್ಯ ವಯಸ್ಕರಲ್ಲಿ ಪಾಸಿಟಿವಿಟಿ ದರ ಶೇ.13ರಷ್ಟಿದೆ. ಇನ್ನು ಎರಡನೇ ಅಲೆಯ ಉಚ್ಛ್ರಯಾ ಸ್ಥಿತಿ ಇದ್ದ ಮೇನಲ್ಲಿ ಮಕ್ಕಳಲ್ಲಿ ಪಾಸಿಟಿವಿಟಿ ದರ ಶೇ.24ಕ್ಕೆ ಹೆಚ್ಚಿತ್ತು ಎಂದು ವಾರ್‌ ರೂಂ ತಿಳಿಸಿದೆ.

Follow Us:
Download App:
  • android
  • ios