ಗೃಹಜ್ಯೋತಿ ಯೋಜನೆಗೆ ಸರ್ವರ್‌ ಸಮಸ್ಯೆ ನಡುವೆಯೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು,  ಗುರುವಾರ  5 ಲಕ್ಷಕ್ಕೂ ಹೆಚ್ಚು ನೋಂದಣಿ ಮಾಡಿಕೊಳ್ಳುವ ಮೂಲಕ ಈವರೆಗೆ ಒಟ್ಟು 20.10 ಲಕ್ಷ ಮಂದಿ ನೋಂದಣಿ ಮಾಡಿಕೊಂಡಂತಾಗಿದೆ. 

ಬೆಂಗಳೂರು (ಜೂ.23): ಗೃಹಜ್ಯೋತಿ ಯೋಜನೆಗೆ ಸರ್ವರ್‌ ಸಮಸ್ಯೆ ನಡುವೆಯೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಗುರುವಾರ 5 ಲಕ್ಷಕ್ಕೂ ಹೆಚ್ಚು ನೋಂದಣಿ ಮಾಡಿಕೊಳ್ಳುವ ಮೂಲಕ ಈವರೆಗೆ ಒಟ್ಟು 20.10 ಲಕ್ಷ ಮಂದಿ ನೋಂದಣಿ ಮಾಡಿಕೊಂಡಂತಾಗಿದೆ. ನಿನ್ನೆ (ಗುರುವಾರ) ಒಂದೇ ದಿನ ರಾಜ್ಯದಾದ್ಯಂತ 5,89,158 ಗ್ರಾಹಕರಿಂದ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ಐದು ದಿನಗಳಿಗಿಂತ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ನಿನ್ನೆ ಅತೀ ಹೆಚ್ಚು ನೋಂದಣಿಯಾಗಿದ್ದು, ಪ್ರತಿದಿನ 2.50-5 ಲಕ್ಷ ಅರ್ಜಿ ಸ್ವೀಕಾರದ ಟಾರ್ಗೆಟ್ ಅನ್ನು ಕಾಂಗ್ರೆಸ್ ಹೊಂದಿತ್ತು. 

ಅಲ್ಲದೇ ತಾಂತ್ರಿಕ ‌ಸಮಸ್ಯೆಯಿಂದ‌ ಪ್ರತಿದಿನ 2.50-5 ಲಕ್ಷ ಅರ್ಜಿ ಸ್ವೀಕಾರದ ಟಾರ್ಗೆಟ್ ಕನಸಾಗಿಯೇ ಉಳಿದಿತ್ತು. ನಿನ್ನೆ ಸರ್ವರ್ ಡೌನ್ ಮಧ್ಯೆಯು 5 ಲಕ್ಷ ಅರ್ಜಿ ನೋಂದಣಿ ಗಡಿಯನ್ನು ಕಾಂಗ್ರೆಸ್ ದಾಟಿತ್ತು. ಸದ್ಯ ರಾಜ್ಯದಲ್ಲಿ ಈವರೆಗೂ ಒಟ್ಟು 20,10,486 ಜನರಿಂದ ಅರ್ಜಿ ಸಲ್ಲಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅರ್ಜಿ ಸಲ್ಲಿಕೆ ಆಗುವ ನಿರೀಕ್ಷೆಯಿದೆ. ಜೂ.18 ರಿಂದ ಚಾಲನೆಗೊಂಡ ನೋಂದಣಿಯಲ್ಲಿ ಮೊದಲ ದಿನ 96,305, 2ನೇ ದಿನ 3.34 ಲಕ್ಷ, 3ನೇ ದಿನ 4.64 ಲಕ್ಷ, 4ನೇ ದಿನವಾದ ಗುರುವಾರ ಸಂಜೆ 7 ಗಂಟೆ ವೇಳೆಗೆ 5.25 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಇಂಧನ ಇಲಾಖೆ ಪ್ರಕಟಣೆ ತಿಳಿಸಿದೆ.

ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಭಾರಿ ಮಳೆ: ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಸರ್ವರ್‌ ಸಮಸ್ಯೆ: ‘ಗೃಹ ಜ್ಯೋತಿ’ ನೋಂದಣಿ ವೇಳೆ ಸರ್ವರ್‌ ಮೇಲೆ ಉಂಟಾಗುತ್ತಿದ್ದ ಒತ್ತಡ ತಡೆಯಲು ಗುರುವಾರದಿಂದ ಎರಡು ಲಿಂಕ್‌ ಒದಗಿಸಿದ್ದರೂ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸರ್ವರ್‌ ಸಮಸ್ಯೆ ಮುಂದುವರೆದಿದೆ. ಪರಿಣಾಮ 5ನೇ ದಿನವೂ ಸಾರ್ವಜನಿಕರು ನೋಂದಣಿಗೆ ಪರದಾಡುವಂತಾಗಿದ್ದು, ಅಂತಿಮವಾಗಿ 5.25 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಗುರುವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಿದ್ದ https://sevasindhugs.karnataka.gov.in ಲಿಂಕ್‌ ಜತೆಗೆ ಒಟ್ಟು 2 ಸಾವಿರ ನೋಂದಣಿ ಕೇಂದ್ರಗಳಲ್ಲಿ ಹೆಚ್ಚುವರಿ ಲಿಂಕ್‌ ಮೂಲಕ ನೋಂದಣಿಗೆ ಅವಕಾಶ ನೀಡಿರುವುದಾಗಿ ಇಂಧನ ಇಲಾಖೆ ತಿಳಿಸಿತ್ತು.

ಇದರಿಂದ ಸರ್ವರ್‌ ಸಮಸ್ಯೆ ಬಗೆಹರಿದು ಸಲೀಸಾಗಿ ನೋಂದಣಿ ಆಗಲಿದೆ ಎಂಬ ವಿಶ್ವಾಸದಿಂದ ಬೆಂಗಳೂರಿನ ಹಲವು ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ, ಹೊಸ ಲಿಂಕ್‌ನಲ್ಲೂ ಸರ್ವರ್‌ ಸಮಸ್ಯೆ ಕಾಣಿಸಿಕೊಂಡಿದೆ. ಪರಿಣಾಮ ಹಲವು ಕಡೆ ಗಂಟೆಗಟ್ಟಲೇ ನೋಂದಣಿ ವಿಳಂಬವಾಗಿದ್ದು ಸಾರ್ವಜನಿಕರು ಎಂದಿನಂತೆ ಪರದಾಡಿದ್ದಾರೆ.

ಏನಿದು ಸಮಸ್ಯೆ?: ಮೊಬೈಲ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌ಗಳ ಮೂಲಕ ನೇರವಾಗಿ ನೋಂದಣಿ ಮಾಡಿಕೊಳ್ಳಲು ಯತ್ನಿಸಿದ ಸಾರ್ವಜನಿಕರಿಗೆ ಸರ್ವರ್‌ ಹ್ಯಾಂಗ್‌ ಆಗುವ ಮೂಲಕ ಸಮಸ್ಯೆ ಉಂಟಾಗುತ್ತಿತ್ತು. ಗ್ರಾಹಕರ ಐಡಿ ಸಂಖ್ಯೆ ನಮೂದಿಸಿದ ಬಳಿಕ ಹೆಸರು ಹಾಗೂ ವಿಳಾಸ ಮೂಡಲು ಸುದೀರ್ಘ ಸಮಯ ತೆಗೆದುಕೊಳ್ಳುತ್ತಿತ್ತು. ಕಡ್ಡಾಯವಾಗಿರುವ ಆ ಆಯ್ಕೆಗಳನ್ನು ತುಂಬದೆ ಮುಂದುವರೆದು ಆಧಾರ್‌ ಧೃಡೀಕರಣ ನೀಡಿದರೆ ಅಥೆಂಟಿಕೇಷನ್‌ ಫೇಲ್‌ ಎಂದು ತೋರುತ್ತಿತ್ತು. ಬಹುತೇಕ ಬಾರಿ 404 ಸರ್ವರ್‌ ಫೇಲ್‌ ಎಂದು ಬರುತ್ತಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು.

ಇನ್ನೊಂದು ವಾರದಲ್ಲಿ 3500 ಪೊಲೀಸ್‌ ಕಾನ್‌ಸ್ಟೇಬಲ್‌ ನೇಮಕ: ಸಚಿವ ಪರಮೇಶ್ವರ್‌

ಇದೇ ರೀತಿ ಬೆಂಗಳೂರು ಒನ್‌, ಕರ್ನಾಟಕ ಒನ್‌ ಹಾಗೂ ಗ್ರಾಮ ಒನ್‌, ವಿದ್ಯುತ್‌ ಕಚೇರಿಗಳಲ್ಲೂ ಸರ್ವರ್‌ ಸಮಸ್ಯೆ ಮುಂದುವರೆದಿದೆ. ಹಲವರಿಗೆ ಅರ್ಜಿ ತುಂಬಿದರೂ ಓಟಿಪಿ ಬಾರದ ಹಿನ್ನೆಲೆಯಲ್ಲಿ ಸಾರ್ವಜನಿಕರು ಗಂಟೆಗಟ್ಟಲೇ ಕೇಂದ್ರಗಳ ಬಳಿಯೇ ಇರುವಂತಾಯಿತು. ಇನ್ನು ಕೆಲವರಿಗೆ ಸರ್ವರ್‌ ಡೌನ್‌ ಹಿನ್ನೆಲೆಯಲ್ಲಿ ಕೆಲ ಕೇಂದ್ರಗಳ ಬಳಿ ಟೋಕನ್‌ ವ್ಯವಸ್ಥೆ ಮಾಡಲಾಗಿತ್ತು. ಟೋಕನ್‌ ಪಡೆದು ಹೋದವರಿಗೆ ಪುನಃ ಸರ್ವರ್‌ ಸಮಸ್ಯೆ ಬಗೆಹರಿದಾಗ ಮೊದಲ ಆದ್ಯತೆ ನೀಡುವ ವ್ಯವಸ್ಥೆ ಮಾಡಲಾಗಿತ್ತು.