Asianet Suvarna News Asianet Suvarna News

ರಾಜ್ಯದಲ್ಲಿ 6 ತಿಂಗಳಲ್ಲಿ 199 ರೈತರ ಆತ್ಮಹತ್ಯೆ

2019-20ನೇ ಸಾಲಿನಲ್ಲಿ ರಾಜ್ಯದಲ್ಲಿ 908 ರೈತರ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಬೆಳಗಾವಿಯಲ್ಲಿ ಅತಿ ಹೆಚ್ಚು (94) ಪ್ರಕರಣ ಮತ್ತು ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಉಡುಪಿಯಲ್ಲಿ ಅತಿ ಕಡಿಮೆ (1) ಪ್ರಕರಣ ದಾಖಲಾಗಿತ್ತು. 

More than 199 Farmers commit Suicide within 6 months in Karnataka
Author
Bengaluru, First Published Sep 29, 2020, 2:54 PM IST

ಬೆಂಗಳೂರು (ಸೆ. 29): ರಾಜ್ಯದಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಭಾನುವಾರವಷ್ಟೇ ಆತ್ಮಹತ್ಯೆ ಮಾಡಿಕೊಂಡ ಮೂವರು ರೈತರು ಸೇರಿದಂತೆ ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ ಇದುವರೆಗೂ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ 199ಕ್ಕೆ ಏರಿಕೆಯಾಗಿದೆ.

ವಿಜಯಪುರದ ಸಿಂದಗಿ ತಾಲೂಕಿನ ಯರಗಲ್‌ ಬಿ.ಕೆ.ಗ್ರಾಮದ ಮಲಕಪ್ಪೆ ಜೆಟ್ಟೆಪ್ಪ ಬಾಲಪ್ಪಗೋಳ (4 ಲಕ್ಷ ರು. ಸಾಲ), ಹಾವೇರಿಯ ರಾಣೆಬೆನ್ನೂರಿನ ನದಿಹರಳಹಳ್ಳಿಯ ಮಹಾಂತೇಶಪ್ಪ ಹನುಮಂತಪ್ಪ ಬಜಾರಿ (3 ಲಕ್ಷ ರು. ಸಾಲ) ಮತ್ತು ಬಾಗಲಕೋಟೆ ಮುಧೋಳ ತಾಲೂಕಿನ ಕಿಲ್ಲಾ ಹೊಸಕೋಟೆಯ ಪಾಂಡುರಂಗ ಬಸಪ್ಪ ಕಿಲಬನೂರ (9 ಲಕ್ಷ ರು. ಸಾಲ) ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ (ಏಪ್ರಿಲ್‌ನಿಂದ ಇದುವರೆಗೆ) ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಮತ್ತು ಸಾಲ ಬಾಧೆಯಿಂದ 196 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಬರಕ್ಕಿಂತ ಭಾರೀ ಮಳೆಗೆ ಹೆಚ್ಚಿನ ರೈತರ ಆತ್ಮಹತ್ಯೆ!

ರೈತರ ಆತ್ಮಹತ್ಯೆ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ರೈತರ ಆತ್ಮಹತ್ಯೆ ನಿಲ್ಲುತ್ತಿಲ್ಲ. ಸಾಲ ಮನ್ನಾ, ಬೆಳೆ ವಿಮೆ, ಪ್ರೋತ್ಸಾಹ ಧನ ಯೋಜನೆಗಳು ಅನ್ನದಾತನ ಸಮಸ್ಯೆ ಕಡಿಮೆ ಮಾಡುತ್ತಿಲ್ಲ. ಕೃಷಿ ನಂಬಿಕೊಂಡು ರೈತರು ಜೀವನ ನಡೆಸುವುದೇ ಕಷ್ಟಎನ್ನುವಂತಹ ಪರಿಸ್ಥಿತಿಯಿಂದ ರೈತರು ಕಂಗಾಲಾಗಿದ್ದು, ಆತ್ಮಹತ್ಯೆ ಪ್ರಕರಣ ಹೆಚ್ಚಲು ಕಾರಣ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು:

ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ಈವರೆಗೆ ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಮತ್ತು ಸಾಲ ಬಾಧೆಯಿಂದ 196 ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ದಾಖಲಾಗಿವೆ. ಚಿಕ್ಕಮಗಳೂರು-15, ಚಿತ್ರದುರ್ಗ- 14, ಬೆಳಗಾವಿ ಮತ್ತು ಕಲಬುರಗಿ-ತಲಾ 13, ಮೈಸೂರು-12, ಹಾಸನ ಮತ್ತು ತುಮಕೂರು-11, ಬಾಗಲಕೋಟೆ, ರಾಯಚೂರು ಹಾಗೂ ವಿಜಯಪುರ- ತಲಾ 9, ಮಂಡ್ಯ, ಶಿವಮೊಗ್ಗ, ಉತ್ತರ ಕನ್ನಡ- ತಲಾ 8, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ಧಾರವಾಡದಲ್ಲಿ ತಲಾ 7, ಗದಗ, ಹಾವೇರಿಯಲ್ಲಿ ತಲಾ 5 ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಕೊಪ್ಪಳದಲ್ಲಿ ತಲಾ 4 ಹೀಗೆ 27 ಜಿಲ್ಲೆಗಳಲ್ಲಿ ಒಟ್ಟು ಸೇರಿ 196 ಆತ್ಮಹತ್ಯೆ ಪ್ರಕರಣ ದಾಖಲಾಗಿವೆ. ಚಾಮರಾಜನಗರ, ದಕ್ಷಿಣ ಕನ್ನಡ, ರಾಮನಗರ ಜಿಲ್ಲೆಗಳಲ್ಲಿ ಯಾವುದೇ ರೈತರ ಆತ್ಮಹತ್ಯೆ ಪ್ರಕರಣ ದಾಖಲಾಗಿಲ್ಲ ಎಂದು ಕೃಷಿ ಇಲಾಖೆ ತಿಳಿಸಿದೆ.

ಪ್ರಸ್ತುತ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಸರ್ಕಾರದಿಂದ ಪರಿಹಾರ ನೀಡಲು 68 ಪ್ರಕರಣಗಳು ಮಾತ್ರ ಅರ್ಹ ಪ್ರಕರಣವೆಂದು ಪರಿಗಣಿಸಲ್ಪಟ್ಟಿದ್ದು, 9 ಪ್ರಕರಣಗಳು ತಿರಸ್ಕೃತಗೊಂಡಿವೆ (ಅನ್ಯ ಕಾರಣದಿಂದ ಆತ್ಮಹತ್ಯೆ). ಅರ್ಹ ಪ್ರಕರಣಗಳಲ್ಲಿ ಪರಿಹಾರ ನೀಡಬೇಕಾಗಿರುವ ಪ್ರಕರಣ 35 ಬಾಕಿ ಇದೆ. ಬಾಕಿ ಉಳಿದ 119 ಪ್ರಕರಣಗಳಲ್ಲಿ 18 ಪ್ರಕರಣಗಳನ್ನು ಎಫ್‌ಎಸ್‌ಎಲ್‌ ವರದಿಗೆ ಕಳುಹಿಸಿಕೊಡಲಾಗಿದ್ದು, ಉಳಿದ 101 ಪ್ರಕರಣಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬದವರು ದಾಖಲೆಗಳನ್ನು ಕೊಡುವುದು ಬಾಕಿಯಿದೆ ಎಂದು ಕೃಷಿ ಇಲಾಖೆ ವರದಿ ಸ್ಪಷ್ಟಪಡಿಸಿದೆ.

ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶಕ್ಕೆ ನಂಬರ್ 2!

ಬೆಳಗಾವಿಯಲ್ಲಿ ಅತಿಹೆಚ್ಚು ಆತ್ಮಹತ್ಯೆ:

2019-20ನೇ ಸಾಲಿನಲ್ಲಿ ರಾಜ್ಯದಲ್ಲಿ 908 ರೈತರ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಬೆಳಗಾವಿಯಲ್ಲಿ ಅತಿ ಹೆಚ್ಚು (94) ಪ್ರಕರಣ ಮತ್ತು ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಉಡುಪಿಯಲ್ಲಿ ಅತಿ ಕಡಿಮೆ (1) ಪ್ರಕರಣ ದಾಖಲಾಗಿತ್ತು. ಇದರಲ್ಲಿ 660 ಪ್ರಕರಣಗಳು ಮಾತ್ರ ಅರ್ಹವೆಂದು ಪರಿಗಣಿಸಲಾಗಿದ್ದು, 122 ಪ್ರಕರಣಗಳನ್ನು ತಿರಸ್ಕರಿಸಲಾಗಿತ್ತು. 571 ಪ್ರಕರಣಗಳಿಗೆ ಪರಿಹಾರ ಧನ ನೀಡಲಾಗಿದ್ದು, 89 ಪ್ರಕರಣಗಳಿಗೆ ಪರಿಹಾರ ನೀಡಲು ಬಾಕಿ ಉಳಿದಿತ್ತು ಎಂದು ಕೃಷಿ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಸರ್ಕಾರ ರೈತರ ಪರ ನಿಲ್ಲಲಿ

ಅತಿವೃಷ್ಟಿ, ಅನಾವೃಷ್ಟಿಯಿಂದ ಸಾಲಸೋಲ ಮಾಡಿ ಜಮೀನಿನಲ್ಲಿ ಬೆಳೆದ ಬೆಳೆ ಕೈಸೇರುತ್ತಿಲ್ಲ. ಇದರಿಂದ ಬ್ಯಾಂಕುಗಳು, ಖಾಸಗಿ ಲೇವಾದೇವಿ, ಫೈನಾನ್ಸ್‌ ಸಂಸ್ಥೆಗಳಿಂದ ನಿರಂತರ ಕಿರುಕುಳ ಅನುಭವಿಸುತ್ತಿರುವ ಬಡ ರೈತರು ಅಪರಾಧ ಭಾವನೆಯಿಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರ ಆತ್ಮಹತ್ಯೆ ಕಡಿಮೆಯಾಗಲು ಸರ್ಕಾರದ ನೀತಿಗಳು ಮೊದಲು ಬದಲಾಗಬೇಕು.

- ಕೋಡಿಹಳ್ಳಿ ಚಂದ್ರಶೇಖರ್‌, ರಾಜ್ಯಾಧ್ಯಕ್ಷ, ರಾಜ್ಯ ರೈತ ಸಂಘ, ಹಸಿರು ಸೇನೆ

ಕಳೆದೊಂದು ತಿಂಗಳಿನಿಂದ ರೈತರ ಆತ್ಮಹತ್ಯೆ ಪ್ರಕರಣದ ನಿರ್ವಹಣೆಯನ್ನು ಕೃಷಿ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಲಾಗಿದೆ. ಪ್ರಕರಣಗಳ ಸತ್ಯಾಸತ್ಯ ಮತ್ತು ಪರಿಹಾರ ಇತ್ಯಾದಿ ಎಲ್ಲ ವಿಷಯವನ್ನೂ ಕಂದಾಯ ಇಲಾಖೆ ನೋಡಿಕೊಳ್ಳಲಿದೆ. ಕೃಷಿಕರು ಯಾವುದೇ ಸಂದರ್ಭದಲ್ಲೂ ದುಡುಕಿನ ನಿರ್ಧಾರ ಕೈಗೊಳ್ಳಬಾರದು.

- ಬ್ರಿಜೇಶ್‌ಕುಮಾರ್‌ ದೀಕ್ಷಿತ್‌, ಆಯುಕ್ತ, ಕೃಷಿ ಇಲಾಖೆ

- ಸಂಪತ್ ತರಿಕೆರೆ 

Follow Us:
Download App:
  • android
  • ios