ಶೇಷಮೂರ್ತಿ ಅವಧಾನಿ

ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಗೆ ಕೊನೆಗೂ ಪ್ರಯಾಣಿಕ ವಿಮಾನಯಾನ ಸಂಪರ್ಕ ಲಭಿಸುತ್ತಿದೆ. ನ.22ರಂದು ಉದ್ಘಾಟನೆಯಾಗುತ್ತಿರುವ ಕಲಬುರಗಿ ವಿಮಾನ ನಿಲ್ದಾಣಕ್ಕೆ ಈ ಶುಕ್ರವಾರ ಬೆಂಗಳೂರಿನಿಂದ ಮೊದಲ ವಿಮಾನ ಬಂದಿಳಿಯಲಿದೆ. ಅದರೊಂದಿಗೆ ವಿಮಾನಯಾನ ಹಾಗೂ ಪ್ರಗತಿಯಾನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಕಲ್ಯಾಣ ಕರ್ನಾಟಕದ ಜನರ ಆಸೆ ಈಡೇರಿದಂತಾಗಲಿದೆ. ಲೋಹದ ಹಕ್ಕಿ ಹತ್ತಿ ತಾವು ಹಾರಾಡಬೇಕು, ಅದೇ ಹಕ್ಕಿ ಬೆನ್ನೇರಿ ಉದ್ದಿಮೆ ರಂಗದ ದಿಗ್ಗಜರು ತಮ್ಮೂರುಗಳತ್ತ ಬರಬೇಕೆಂಬ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜನಸಾಮಾನ್ಯರ ದಶಕಗಳ ಕನಸು ನನಸಾಗುತ್ತಿದೆ. ಇದು ಕಲ್ಯಾಣ ಕರ್ನಾಟಕದ ಮೊದಲ ವಾಣಿಜ್ಯ ವಿಮಾನ ನಿಲ್ದಾಣ. ಬೀದರ್‌ನಲ್ಲಿ ವಾಯುಪಡೆಯ ವಿಮಾನ ನಿಲ್ದಾಣವಿದ್ದು, ಅದು ಜನಸಾಮಾನ್ಯರ ಬಳಕೆಗೆ ಲಭ್ಯವಿಲ್ಲ. ಹಾಗೆಯೇ ಬಳ್ಳಾರಿಯ ಜಿಂದಾಲ್‌ನಲ್ಲಿ ಖಾಸಗಿ ವಿಮಾನ ನಿಲ್ದಾಣವಿದ್ದು, ಅಲ್ಲಿಗೆ ಚಾರ್ಟರ್ಡ್‌ ವಿಮಾನಗಳಷ್ಟೇ ಸಂಚರಿಸುತ್ತವೆ.

742 ಎಕರೆ ವಿಶಾಲ ಭೂಪ್ರದೇಶದಲ್ಲಿ 230 ಕೋಟಿ ಖರ್ಚಲ್ಲಿ ನಿರ್ಮಾಣ

ನಡೆದಾಡಿಕೊಂಡು ಹೋಗಲು ಸರ್ವಋುತು ರಸ್ತೆಗಳಿಗೂ ಇಲ್ಲಿ ‘ಬರ’ ಎಂಬ ದೂರುಗಳ ನಡುವೆಯೇ 742 ಎಕರೆ ವಿಶಾಲ ಭೂಪ್ರದೇಶದಲ್ಲಿ 230 ಕೋಟಿ ರು. ವೆಚ್ಚದಲ್ಲಿ ವಿಮಾನ ನಿಲ್ದಾಣ ಮೈಕೊಡವಿ ಮೇಲೆದ್ದಿದೆ. ಕೇಂದ್ರ ಸರ್ಕಾರದ ‘ಉಡಾನ್‌’ ಯೋಜನೆಯಲ್ಲಿ ಸೇರ್ಪಡೆಯಾಗಿರುವ ಕಲಬುರಗಿ ವಿಮಾನ ನಿಲ್ದಾಣದಿಂದ ಬೆಂಗಳೂರು, ದೆಹಲಿ, ತಿರುಪತಿ, ಮುಂಬೈ ಜನರಿಗೆ ಅಗ್ಗದ ದರದಲ್ಲಿ ವಾಯುಯಾನ ಲಭ್ಯವಾಗೋದಂತೂ ನಿಶ್ಚಿತ. ಕಲಬುರಗಿ ಏರ್ಪೋರ್ಟ್‌ ಯೋಜನೆಗೆ ರಾಜ್ಯ ಸರ್ಕಾರ 27 ಮಾಚ್‌ರ್‍ 2007ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಕಲಬುರಗಿ ವಿಮಾನ ನಿಲ್ದಾಣದ ಅಭಿವೃದ್ಧಿ, ನಿರ್ಮಾಣಕ್ಕಾಗಿ ಒಟ್ಟಾರೆ 230 ಕೋಟಿ ರು. ವೆಚ್ಚ ಮಾಡಲಾಗಿದೆ. ವಿಮಾನ ನಿಲ್ದಾಣ ಕಾಮಗಾರಿಗೆ 2008 ಜೂನ್‌ 14ರಂದು ಆಗಿನ ಸಿಎಂ ಯಡಿಯೂರಪ್ಪ ಅಡಿಗಲ್ಲು ಹಾಕಿದ್ದರು. ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಯನ್ನು ಲೋಕæೂೕಪಯೋಗಿ ಇಲಾಖೆಗೆ ವಹಿಸಿ ಮೆ. ರೈಟ್ಸ್‌ ಪ್ರೈ. ಲಿಮಿಟೆಡನ್ನು ತಾಂತ್ರಿಕ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು.

ಸ್ಟಾರ್‌ ಏರ್‌ಲೈನ್ಸ್‌ ಕಲಬುರಗಿಗೆ ಬಂದಿಳಿವ ಚೊಚ್ಚಲ ವಿಮಾನ

ಸ್ಟಾರ್‌ ಏರ್‌ಲೈನ್ಸ್‌ ನ.22ರಂದು ಮ.12.20ಕ್ಕೆ ಬೆಂಗಳೂರಿನಿಂದ ಕಲಬುರಗಿಗೆ ಚೊಚ್ಚಲ ಪ್ರಯಾಣಿಕರ ವಿಮಾನ ಹಾರಿಸುತ್ತಿದೆ. ಮತ್ತೆ ಅಂದೇ ಕಲಬುರಗಿಯಿಂದ ಮಧ್ಯಾಹ್ನ 1:55ಕ್ಕೆ ಹೊರಟು 3 ಗಂಟೆಗೆ ಬೆಂಗಳೂರು ತಲುಪಲಿದೆ. ಇದಕ್ಕಾಗಿ 52 ಸೀಟರ್‌ನ ವಿಶೇಷ ವಿಮಾನವನ್ನೇ ಸಂಸ್ಥೆ ಸಿದ್ಧಪಡಿಸಿ ತಂದಿದೆ. ಸ್ಟಾರ್‌ ಏರ್‌ಲೈನ್ಸ್‌ ಸದ್ಯ ವಾರದಲ್ಲಿ ಮೂರು ದಿನ (ಶುಕ್ರವಾರ, ಭಾನುವಾರ ಹಾಗೂ ಸೋಮವಾರ) ವಿಮಾನ ಸೇವೆ ನೀಡಲಿದೆ.

ಬೆಂಗಳೂರು, ತಿರುಪತಿ, ದೆಹಲಿಗೆ ವಿಮಾನ ಸೇವೆ

2018ರ ಆಗಸ್ಟ್‌ ನಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ನಡೆದಿರುವ ಕಲಬುರಗಿ ವಿಮಾನ ನಿಲ್ದಾಣ ಕೇಂದ್ರ ಸರ್ಕಾರದ ‘ಉಡಾನ್‌’ ಅಡಿಯಲ್ಲಿ ಪ್ರಾದೇಶಿಕ ವಿಮಾನಯಾನ ಕಾರ್ಯಾಚರಣೆಗೆ ಆಯ್ಕೆಯಾಗಿತ್ತು. ಅಲಯನ್ಸ್‌ ಏರ್‌ ಮತ್ತು ಗೋಡಾವತ್‌ ಏರ್‌ ಪ್ರೈ. ಲಿಮಿಟೆಡ್‌ ಇವರು ವಿಮಾನಯಾನ ಕಾರ್ಯಾಚರಣೆ ಒದಗಿಸಲು ಆಯ್ಕೆಯಾಗಿದ್ದು, ಬೆಂಗಳೂರು -ಕಲಬುರಗಿ -ಬೆಂಗಳೂರು, ಕಲಬುರಗಿ-ಹಿಂಡನ್‌-ಕಲಬುರಗಿ, ಕಲಬುರಗಿ- ತಿರುಪತಿ- ಕಲಬುರಗಿ ಮಾರ್ಗಗಳಲ್ಲಿ ವಿಮಾನ ಹಾರಿಸಲಿವೆ.

2850 ರು.ನಿಂದ ಟಿಕೆಟ್‌ ದರ ಆರಂಭ

ಕಲಬುರಗಿ ವಿಮಾನ ನಿಲ್ದಾಣ ಕೇಂದ್ರ ಸರ್ಕಾರದ ವಿಮಾನಯಾನ ಇಲಾಖೆಯ ಉಡಾನ್‌-3 ( ಉಡೇ ದೇಶ್‌ ಕಾ ಆಮ್‌ ಆದಮಿ) ಯೋಜನೆಯಡಿ ಆಯ್ಕೆಯಾಗಿದ್ದರಿಂದ ಸದರಿ ಯೋಜನೆಯಲ್ಲಿ ಕಲಬುರಗಿ- ಬೆಂಗಳೂರು ಟಿಕೆಟ್‌ ದರ 2, 850 ರು ನಿಂದ ಆರಂಭವಾಗಲಿದೆ. ಡೈನಾಮಿಕ್‌ ಫೇರ್‌ ಸಿಸ್ಟಂ ಇಲ್ಲಿಯೂ ಅನ್ವಯವಾಗುವುದರಿಂದ ‘ಉಡಾನ್‌ ಕೋಟಾ’ ಟಿಕೆಟ್‌ ಬುಕ್‌ ಆದ ನಂತರ ಉಳಿದೆಲ್ಲಾ ಟಿಕೆಟ್‌ಗಳಿಗೆ ಡೈನಾಮಿಕ್‌ ಫೇರ್‌ ಅನ್ವಯಿಸಲಿದೆ. ಬೆಂಗಳೂರಿನಿಂದ ಕಲಬುರಗಿಗೆ ಹಾರಿ ಬರುತ್ತಿರುವ ನ. 22ರ ದಿನದ ಮೊದಲ ವಿಮಾನದ ಟಿಕೆಟ್‌ ದರ 2,850 ರು. ನಿಂದ 14, 999 ರು. ವರೆಗೂ ತಲುಪಿದ್ದು ವಿಶೇಷ.

ಏರ್‌ಪೋರ್ಟ್‌ ಭದ್ರತೆಗಾಗಿ ಸ್ಥಳೀಯ, ಪೊಲಿಸರಿಗೇ ವಿಶೇಷ ತರಬೇತಿ

ವಿಮಾನ ನಿಲ್ದಾಣ ನಿರ್ವಹಣೆ ಹೊಣೆ ಭಾರತೀಯ ವಿಮಾನಯಾನ ಪ್ರಾಧಿಕಾರ ಅಡಿಯಲ್ಲಿದೆ. ನಿಲ್ದಾಣವನ್ನು ಆ. 26ರಂದೇ ಪ್ರಾಧಿಕಾರಕ್ಕೆ ವಹಿಸಿಕೊಡಲಾಗಿದ್ದಿರಂದ ಸಂಪೂರ್ಣ ನಿರ್ವಹಣೆ ಹೊಣೆಗಾರಿಕೆ ಅದಕ್ಕೇ ಸೇರಿದ್ದು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಭದ್ರತೆಗಾಗಿ ಸ್ಥಳೀಯ ಪೊಲೀಸರಿಗೇ ವಿಶೇಷ ತರಬೇತಿ ನೀಡಲಾಗಿದೆ. 67 ಭದ್ರತಾ ಸಿಬ್ಬಂದಿ ತರಬೇತಾಗಿದ್ದು ಇವರನ್ನೆಲ್ಲ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗುತ್ತಿದೆ. ಇದಲ್ಲದೆ ಕೈಗಾರಿಕಾ ಭದ್ರತಾ ಪಡೆಯ ಹೆಚ್ಚುವರಿ ಸಿಬ್ಬಂದಿಯನ್ನು ಇಲ್ಲಿ ಭದ್ರತೆಗೆ ನಿಯೋಜಿಸಲಾಗುತ್ತಿದೆ.

ರಾಜ್ಯದ 2ನೇ ಅತಿ ಉದ್ದದ ರನ್‌ ವೇ

ಕಲಬುರಗಿ-ಸೇಡಂ ರಸ್ತೆಯಲ್ಲಿ ನಗರದಿಂದ 15 ಕಿ.ಮೀ ದೂರ ಶ್ರೀನಿವಾಸ ಸರಡಗಿ ಬಳಿ ಏರ್ಪೋರ್ಟ್‌ ಇದೆ. ರನ್‌ ವೇ 3.75 ಕಿಮೀ ಉದ್ದವಿದೆ. ಕಲಬುರಗಿ ಏರ್ಪೋರ್ಟ್‌ ರನ್‌ ವೇ ದೇಶದ 10ನೇ ಅತಿ ಉದ್ದದ ಹಾಗೂ ರಾಜ್ಯದ 2ನೇ ಅತಿ ಉದ್ದದ ರನ್‌ ವೇ ಎಂಬ ಖ್ಯಾತಿ ಗಳಿಸಿದೆ. ಬೆಂಗಳೂರು, ಮುಂಬೈ, ಹೈದ್ರಾಬಾದ್‌ ಮೆಟ್ರೋ ನಗರಗಳನ್ನು ತನ್ನಸುತ್ತ ಆವರಿಸಿಕೊಂಡಿರುವ ಕಲಬುರಗಿ ವಿಮಾನ ನಿಲ್ದಾಣಕ್ಕೆ ಭವಿಷ್ಯದ ಮುಂದಾಲೋಚನೆ ಇಟ್ಟುಕೊಂಡು ಜೆಟ್‌ ಸೇರಿದಂತೆ ಏರ್‌ಬಸ್‌ನಂತಹ ಬೃಹತ್‌ ವಿಮಾನಗಳೂ ಸಹ ಇಲ್ಲಿ ಬಂದಿಳಿಯಲು ಅನುವಾಗುವಂತೆ 3.75 ಕಿ.ಮೀ ಉದ್ದದ ರನ್‌ ವೇಯನ್ನೇ ಸಿದ್ಧಪಡಿಸಲಾಗಿದೆ.

ಸಂಪೂರ್ಣ ರಾಜ್ಯದ ಅನುದಾನ ಬಳಕೆ

ರಾಜ್ಯದ ವಿವಿದೆಡೆ ವಿಮಾನ ನಿಲ್ದಾಣಗಳ ಕಾಮಗಾರಿಗಳನ್ನು ಪಿಪಿಪಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದ್ದರೂ, ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿ ಮಾತ್ರ ಕರ್ನಾಟಕ ಸರ್ಕಾರ ವಿಶೇಷ ಮುತುವರ್ಜಿಯಿಂದ ಸಂಪೂರ್ಣವಾಗಿ 175.57 ಕೋಟಿ ರು. ಹಣವನ್ನು ರಾಜ್ಯ ಸರ್ಕಾರವೇ ವೆಚ್ಚ ಮಾಡಿ ಅಭಿವೃದ್ಧಿಪಡಿಸಿದೆ. ಈ ಪೈಕಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ 58.52 ಕೋಟಿ ರು ಅನುದಾನ ನೀಡುವುದರ ಮೂಲಕ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಟೊಂಕ ಕಟ್ಟಿನಿಂತಿದೆ.

ಪ್ರಗತಿಯ ವೇಗ ವರ್ಧಕ?

ರಸ್ತೆ ಸಾರಿಗೆ ಮತ್ತು ವಿಮಾನಯಾನ ಸಂಪರ್ಕ ನೆಪವೊಡ್ಡಿ ರಾಜಧಾನಿ ಬೆಂಗಳೂರಿನಿಂದ ಈಶಾನ್ಯದ ಜಿಲ್ಲೆಗಳಲ್ಲಿ ಬಂಡವಾಳ ಹೂಡಲು ಕೈಗಾರಿಕೋದ್ಯಮಿಗಳು ಹಿಂದೇಟು ಹಾಕುತಿದ್ದರು. ಆದರೀಗ ವಿಮಾನಯಾನ ಸೇವೆ ಕಲಬುರಗಿಗೆ ಬಂದಿದೆ. ಜೊತೆಗೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಕಲಬುರಗಿ ಸುತ್ತಿಕೊಂಡಿವೆ. ಹಾಗಾಗಿ ಕಲಬುರಗಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಹೂಡಿಕೆದಾರರಿಗೆ ವಿಫುಲ ಅವಕಾಶಗಳು ದೊರೆತಂತಾಗಿದೆ. ಈ ‘ಗಗನ ಸಂಪರ್ಕ’ ಕಲ್ಯಾಣ ಕರ್ನಾಟಕದಲ್ಲಿ ಪ್ರಗತಿಯ ವೇಗವರ್ಧಕವಾಗಿ ಪರಿಣಮಿಸಲಿದೆ. ಕಲಬುರಗಿ ವಿಮಾನ ಸೇವೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಐಟಿಬಿಟಿ ಸಂಬಂಧಿ ಎರಡು ಕಂಪನಿಗಳ ಹಿರಿಯ ಅಧಿಕಾರಿಗಳು ಕಲಬುರಗಿ ಎಚ್ಕೆಸಿಸಿಸಿಐ ಕಚೇರಿಗೆ ಕರೆ ಮಾಡಿ ಶುಭಾಶಯ ತಿಳಿಸಿ ತಾವು ಶೀಘ್ರದಲ್ಲೇ ಕಲಬುರಗಿದೆ ಕಾಲಿಡುವುದಾಗಿ ಹೇಳಿದ್ದಾರಂತೆ!

ದಾಲ್‌ ಮಿಲ್‌ಗಳಿಗೆ ಜೀವ?

ಕಲಬುರಗಿ ತೊಗರಿ ಕಣಜ. ವಾರ್ಷಿಕ 6 ಲಕ್ಷ ಹೆಕ್ಟರ್‌ ತೊಗರಿ ಉಳುಮೆ, 50 ಲಕ್ಷ ಟನ್‌ ಇಳುವರಿ ನಿಶ್ಚಿತ. ದಾಲ್‌ ಮಿಲ್‌ಗಳು ಇಲ್ಲಿನ ಜನರ ಬದುಕು. ಆದರೆ ಬ್ಯಾಂಕುಗಳ ಸಾಲನೀತಿ, ಬದಲಾದ ಮಾರುಕಟ್ಟೆಧೋರಣೆಯಿಂದಾಗಿ ದಾಲ್‌ಮಿಲ್‌ಗಳು ಸಂಕಷ್ಟದಲ್ಲಿವೆ. ತೊಗರಿ ಬೇಳೆಗೆ ಸೂಕ್ತ ಮಾರುಕಟ್ಟೆಕಾಣದೆ ದಾಲ್‌ ಮಿಲ್‌ಗಳೆಲ್ಲ ಮೂಲೆಗುಂಪಾಗಿರುವ ಸಂದರ್ಭದಲ್ಲೇ ವಿಮಾನಯಾನ ಜಾಲದಡಿ ಕಲಬುರಗಿ ಗುರುತಿಸಿಕೊಂಡಿದೆ. ಇದೇ ಸಮಯಕ್ಕೆ ಕಲಬುರಗಿ ತೊಗರಿಗೆ ಭೌಗೋಳಿಕ ಸೂಚ್ಯಂಕ (ಜಿಐ ಟ್ಯಾಗ್‌) ಕೂಡ ದೊರಕಿದೆ. ಈ ಬೆಳವಣಿಗೆಗಳು ದಾಲ್‌ಮಿಲ್‌ ಚೇತರಿಕೆಗೆ ನೀರೆರೆಯುವವೆ? ಬರುವ ದಿನಗಳಲ್ಲಿ ತೊಗರಿ ಕಣಜದ ಬೇಳೆ- ಜೋಳ ದೇಶದುದ್ದಗಲಕ್ಕೂ ಮಾರುಕಟ್ಟೆವಿಸ್ತರಿಸಿಕೊಳ್ಳಲು ವಿಮಾನ ಸೇವೆಯಿಂದ ಅನುಕೂಲವಾಗುವುದೇ ಎಂಬುದನ್ನು ಜನ ಕಾತರದಿಂದ ಇದಿರು ನೋಡುತ್ತಿದ್ದಾರೆ.

ಪ್ರವಾಸೋದ್ಯಮಕ್ಕೆ ಟಾನಿಕ್‌

ಕಲ್ಯಾಣ ಕರ್ನಾಟಕ ಐತಿಹಾಸಿಕ ನೆಲ. ರಾಷ್ಟ್ರಕೂಟರು (ಮಾನ್ಯಖೇಟ), ಚಾಲುಕ್ಯರು (ಬಸವ ಕಲ್ಯಾಣ), ಬಹಮನಿ (ಕಲಬುರಗಿ) ಅರಸರು, ಸನ್ನತಿ ಬೌದ್ಧನೆಲೆ, ಕಲ್ಯಾಣದ ಶರಣರು, ರಾಯಚೂರು- ಸುರಪುರ, ಕಲಬುರಗಿ ದಾಸರ ನೆಲೆವೀಡು. ತತ್ವಪದಕಾರರು- ಸೂಫಿಸಂತರ ಸಾಮರಸ್ಯದ ಬೀಡು. ವಾಯುಯಾನ ದೇಶ-ವಿದೇಶಗಳ ಪ್ರವಾಸಿಗರನ್ನು ಈ ನೆಲದೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಜೋಡಿಸಲಿದೆ. ಕಲಬುರಗಿಯ ಬಹಮನಿ ಕೋಟೆಯೊಳಗಿನ ಜಾಮಾ ಮಸೀದಿ ಸ್ಪೇನ್‌ನ ಕಾರ್ಡೋವಾದಲ್ಲಿನ ವಿಶಿಷ್ಟವಾಸ್ತುಶಿಲ್ಪದ ಮಸೀದಿ ಹೋಲುತ್ತದೆ. ಜಾಗತಿಕವಾಗಿ ಖ್ಯಾತಿ ಪಡೆದ ಜಾಮಾ ಮಸೀದಿ, ಅತೀ ಉದ್ದದ ತೋಪು ಕಾಣಲು ಪ್ರವಾಸಿಗರನ್ನು ವಿಮಾನ ಹೊತ್ತು ತರುವ ದಿನಗಳು ದೂರವೇನಿಲ್ಲ. ಇದರಿಂದಾಗಿ ಪ್ರವಾಸೋದ್ಯಮ ಕ- ಕ ಪ್ರದೇಶದಲ್ಲಿ ಹಸಿರು ಚಿಗೋರೋದರಲ್ಲಿ ಅನುಮಾನವೇ ಇಲ್ಲ. ಪ್ರದೇಶ ಒಂದರ ಐತಿಹಾಸಿಕ ಅಭಿವೃದ್ಧಿ ಗ್ರಹಣ ಮೋಕ್ಷಕ್ಕೆ ಇದು ಸಕಾಲ.

ಫ್ಲೈಟ್‌ ಟ್ರೇನಿಂಗ್‌ ಸ್ಕೂಲ್‌ ಸ್ಥಾಪನೆ

742 ಎಕರೆ ವಿಮಾನ ನಿಲ್ದಾಣವನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ನಿಲ್ದಾಣದ ನಿರ್ವಹಣೆಗೆ ನೆರವಾಗುವ ಏಶಿಯಾ ಪೆಸಿಫಿಕ್‌ ಫ್ಲೈಟ್‌ ಟ್ರೇನಿಂಗ್‌ ಸ್ಕೂಲ್‌ ಮತ್ತು ಇವಿಕಾನ್‌ ಟ್ರೇನಿಂಗ್‌ ಇನ್ಸ್‌ಟಿಟ್ಯೂಟ್‌ನಿಂದ ಫ್ಲೈಯಿಂಗ್‌ ಸ್ಕೂಲ್‌ ಆರಂಭಿಸಲು ಪ್ರಸ್ತಾವನೆಗಳು ಸರ್ಕಾರಕ್ಕೆ ಬಂದಿವೆ. ಡಿಜಿಸಿಎ ಅನುಮತಿ ನೀಡಿದಲ್ಲಿ ತರಬೇತಿ ಶಾಲೆ ಪ್ರಾರಂಭಿಸಲು ಸರ್ಕಾರ ಉತ್ಸುಕವಾಗಿದೆ. ಇದಲ್ಲದೆ ಫ್ಲೈಟ್‌ ಅಟೆಂಡರ್‌ಗಳಿಗೆ ತರಬೇತಿ ನೀಡಲು ಮತ್ತು ಕೌಶಲ್ಯ ತರಬೇತಿಗಾಗಿ ಏವಿಯೇಷನ್‌ ಸ್ಕಿಲ್‌ ಟ್ರೇನಿಂಗ್‌ ಸಂಸ್ಥೆಯಿಂದ ಶಾಲೆ ಪ್ರಾರಂಭಿಸುವ ಬಗ್ಗೆಯೂ ಚಿಂತನೆ ನಡೆದಿದೆ.