ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಮೇಲಿನ ಲೈಂಗಿಕ ಕಿರುಕುಳ ಆರೋಪವು ಸುಳ್ಳು ಮತ್ತು ಪ್ರಚೋದಿತ ಎಂದು ಪೊಲೀಸ್ ಪ್ರಾಥಮಿಕ ತನಿಖೆ ಹೇಳಿದೆ. ಆದರೆ, ಈ ವರದಿಯನ್ನು ತಿರಸ್ಕರಿಸಿರುವ ದೂರುದಾರ ಮಹಿಳೆ, ಇದು ಹಿರಿಯ ಅಧಿಕಾರಿಗಳ ಶಾಮೀಲಿನಿಂದ ಕೂಡಿದ ವರದಿ ಎಂದು ಆರೋಪಿಸಿದ್ದಾರೆ.

ಮಂಗಳೂರು (ಮಾ.21): ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರ ವಿರುದ್ಧ ಕೇಳಿಬಂದಿದ್ದ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಆರೋಪದ ತನಿಖೆಯಲ್ಲಿ ಸ್ಫೋಟಕ ಸತ್ಯಾಂಶವೊಂದು ಹೊರಬಿದ್ದಿದೆ. ಮಹಿಳೆಯರು ಮಾಡಿದ್ದ ಆರೋಪಗಳು ಸುಳ್ಳು ಮತ್ತು ಪ್ರಚೋದಿತ ಎಂದು ಪೊಲೀಸ್ ಇಲಾಖೆಯ ಪ್ರಾಥಮಿಕ ತನಿಖಾ ವರದಿ ತಿಳಿಸಿದೆ. ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಈ ಕುರಿತು ಮಾಹಿತಿ ನೀಡಿದ್ದು, ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ ಎಂದಿದ್ದಾರೆ. ದೂರು ನೀಡಿದ್ದ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಅವರು ಯಾರೋ ಒಬ್ಬರ ಪ್ರಚೋದನೆಗೆ ಒಳಗಾಗಿ ಈ ಸುಳ್ಳು ಆರೋಪ ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೈರಲ್ ಆಗಿದ್ದ ಆಡಿಯೋ ಮತ್ತು ವಿಡಿಯೋಗಳಲ್ಲಿರುವ ಮಹಿಳೆಯರು ಅದು ತಮ್ಮದೇ ಎಂದು ಒಪ್ಪಿಕೊಂಡಿದ್ದಾರಾದರೂ, ದೂರು ನೀಡಲು ಇಷ್ಟವಿಲ್ಲ ಎಂದು ಹೇಳಿದ್ದಾರೆ. ಮಂಗಳೂರು ಉತ್ತರ ಎಸಿಪಿ ಶ್ರೀಕಾಂತ್ ನೇತೃತ್ವದಲ್ಲಿ ನಡೆದ ಈ ತನಿಖೆಯ ವರದಿಯನ್ವಯ, ಹಲ್ಲೆ ಅಥವಾ ಲೈಂಗಿಕ ಕಿರುಕುಳ ನಡೆದಿದೆ ಎನ್ನಲು ಯಾವುದೇ ಪುರಾವೆಗಳಿಲ್ಲ.

ವರದಿಯಲ್ಲಿದೆ ಅಸಭ್ಯ ವರ್ತನೆಯ ಉಲ್ಲೇಖ

ಆರೋಪಗಳು ಸುಳ್ಳು ಎಂದು ವರದಿ ಹೇಳಿದರೂ, ವೈರಲ್ ಆದ ಆಡಿಯೋ ಮತ್ತು ವಿಡಿಯೋಗಳು ಹಳೆಯದಾಗಿದ್ದು, ಅದರಲ್ಲಿ ಇನ್ಸ್‌ಪೆಕ್ಟರ್ ಸಂದೇಶ್ ಅವರ ವರ್ತನೆ ಅಸಭ್ಯವಾಗಿರುವುದು ಸ್ಪಷ್ಟವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಕಾರಣಕ್ಕೆ ಅವರನ್ನು ಅಮಾನತುಗೊಳಿಸಿ ತನಿಖೆ ನಡೆಸಲಾಗಿತ್ತು. ಆದರೆ, ದೂರುದಾರ ಮಹಿಳೆಯರು ಕಾನೂನುಬದ್ಧವಾಗಿ ದೂರು ನೀಡಲು ನಿರಾಕರಿಸುತ್ತಿರುವುದು ಪ್ರಕರಣದ ದಿಕ್ಕನ್ನೇ ಬದಲಿಸಿದೆ.

ತನಿಖೆ ನಂಬಲ್ಲ; ಉನ್ನತ ಮಟ್ಟದ ತನಿಖೆಗೆ ಆಗ್ರಹ

ಇತ್ತ ಪೊಲೀಸ್ ವರದಿಯನ್ನು ದೂರುದಾರೆ ಸುಮತಿ ನಾಯಕ್ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ತನಿಖೆ ನಡೆಸಿದ ಎಸಿಪಿ ಶ್ರೀಕಾಂತ್ ಅವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. "ಎಸಿಪಿ ಶ್ರೀಕಾಂತ್ ಮತ್ತು ಕಮಿಷನರ್ ಸುಧೀರ್ ಕುಮಾರ್ ಅವರ ನಡುವೆ ಚೈನ್ ಲಿಂಕ್ ಇದೆ. ಎಸಿಪಿ ಶ್ರೀಕಾಂತ್ ಅವರನ್ನು ಮೊದಲು ಸಸ್ಪೆಂಡ್ ಮಾಡಬೇಕು. ಮಂಗಳೂರು ಅಧಿಕಾರಿಗಳ ಮೇಲೆ ನಮಗೆ ನಂಬಿಕೆ ಇಲ್ಲ. ಬೆಂಗಳೂರು ಮಟ್ಟದ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಿದರೆ ಮಾತ್ರ ಇನ್ಸ್‌ಪೆಕ್ಟರ್ ಸಂದೇಶ್ ಅವರ ಕಾಮಕಾಂಡದ ಅಸಲಿ ಸತ್ಯ ಹೊರಬರಲು ಸಾಧ್ಯ," ಎಂದು ಸುಮತಿ ನಾಯಕ್ ಒತ್ತಾಯಿಸಿದ್ದಾರೆ. ಸದ್ಯ ಈ ಪ್ರಕರಣವು ಪೊಲೀಸ್ ಇಲಾಖೆಯ ವರದಿ ಮತ್ತು ದೂರುದಾರ ಮಹಿಳೆಯರ ಹಠದ ನಡುವೆ ದೊಡ್ಡ ಮಟ್ಟದ ತಿಕ್ಕಾಟಕ್ಕೆ ಕಾರಣವಾಗಿದೆ.