ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ಅವರ ಮೇಲಿನ ಗಂಭೀರ ಆರೋಪಕ್ಕೆ ಸಂಬಂಧಿಸಿ ಅವರನ್ನು ಅಮಾನತುಗೊಳಿಸಲಾಗಿದೆ. ಆದರೆ, ಅಮಾನತು ಶಿಕ್ಷೆಯಲ್ಲ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ದೂರುದಾರೆ ಸುಮತಿ ನಾಯಕ್ ಆಗ್ರಹಿಸಿದ್ದಾರೆ.  ತಮ್ಮ ಚಾರಿತ್ರ್ಯ ವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ದಕ್ಷಿಣ ಕನ್ನಡ (ಮಾ.20): ಮೂಡಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು ಕರಾವಳಿ ಭಾಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಸಂದೇಶ್ ಅವರನ್ನು ಅಮಾನತ್ತುಗೊಳಿಸಲಾಗಿದ್ದರೂ, ಇದು ಸಮಾಧಾನಕರವಲ್ಲ ಎಂದು ಪ್ರಕರಣದ ಪ್ರಮುಖ ಸೂತ್ರಧಾರೆ ಎನ್ನಲಾದ ಸುಮತಿ ನಾಯಕ್ ಗುಡುಗಿದ್ದಾರೆ. ಕೇವಲ ಅಮಾನತ್ತು ಶಿಕ್ಷೆಯಲ್ಲ, ಅವರ ವಿರುದ್ಧ ಕೂಡಲೇ ಎಫ್‌ಐಆರ್ (FIR) ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪೊಲೀಸ್ ಕಮಿಷನರ್ ಮೇಲೆ ನಂಬಿಕೆ ಇಲ್ಲ:

ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಸುಮತಿ ನಾಯಕ್, ಮಂಗಳೂರು ಪೊಲೀಸ್ ಕಮಿಷನರ್ ಮೇಲೆ ತಮಗೆ ನಂಬಿಕೆ ಇಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. 'ಈ ಪ್ರಕರಣದಲ್ಲಿ ಎಸಿಪಿ ಶ್ರೀಕಾಂತ್ ಅವರ ಪಾತ್ರವೂ ಇದೆ. ಅವರನ್ನೂ ಕೂಡಲೇ ಅಮಾನತ್ತು ಮಾಡಬೇಕು. ಇನ್ಸ್ಪೆಕ್ಟರ್ ಸಂದೇಶ್, ಎಸಿಪಿ ಶ್ರೀಕಾಂತ್ ಸೇರಿದಂತೆ ಮೂವರು ಅಧಿಕಾರಿಗಳ ನಡುವೆ ಒಂದು ದೊಡ್ಡ 'ಚೈನ್ ಲಿಂಕ್' ಇದೆ. ಒಬ್ಬರು ಇನ್ನೊಬ್ಬರನ್ನು ರಕ್ಷಿಸುತ್ತಿದ್ದಾರೆ. ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಐಜಿಪಿ ಅಮಿತ್ ಸಿಂಗ್ ಅಥವಾ ದಕ್ಷಿಣ ಕನ್ನಡ ಎಸ್ಪಿ ಡಾ. ಅರುಣ್ ಅವರ ನೇತೃತ್ವದಲ್ಲಿ ನಡೆಸಬೇಕು' ಎಂದು ಡಿಜಿ ಸಲೀಂ ಅವರಿಗೆ ಮನವಿ ಮಾಡಿದ್ದಾರೆ.

ಸಾಕ್ಷಿಗಳಿದ್ದರೂ ಮುಚ್ಚಿ ಹಾಕುವ ಯತ್ನ?

ಪೊಲೀಸ್ ಇಲಾಖೆಯ ತನಿಖಾ ವೈಖರಿಯನ್ನು ಸುಮತಿ ನಾಯಕ್ ಪ್ರಶ್ನಿಸಿದ್ದಾರೆ. 'ನನ್ನ ಬಳಿ ಸಾಕಷ್ಟು ಸಾಕ್ಷಿಗಳಿವೆ. ಪೊಲೀಸ್ ಕಮಿಷನರ್ ಅವರಿಗೆ ಲ್ಯಾಪ್ಟಾಪ್‌ನಲ್ಲಿ ಎಲ್ಲಾ ವಿಡಿಯೋ ಮತ್ತು ಪುರಾವೆಗಳನ್ನು ತೋರಿಸಿದ್ದೇನೆ. ಅದನ್ನು ಅವರು ಕಣ್ಣಾರೆ ಕಂಡಿದ್ದಾರೆ. ಮೂಡಬಿದ್ರೆ ಠಾಣೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಸತ್ಯ ಹೊರಬರುತ್ತದೆ. ಇನ್ಸ್ಪೆಕ್ಟರ್ ಸಂದೇಶ್ ಪೊಲೀಸ್ ಸಮವಸ್ತ್ರದಲ್ಲಿಯೇ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಇದ್ದರೂ ಕೂಡ ಯಾಕೆ ಅವರ ಮೇಲೆ ಎಫ್‌ಐಆರ್ ದಾಖಲಿಸಿಲ್ಲ?' ಎಂದು ಅವರು ಪ್ರಶ್ನಿಸಿದ್ದಾರೆ.

'ವೇಶ್ಯೆ' ಆರೋಪಕ್ಕೆ ತಿರುಗೇಟು:

ತಮ್ಮ ಚಾರಿತ್ರ್ಯ ಹರಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸುಮತಿ, 'ಇನ್ಸ್ಪೆಕ್ಟರ್ ಸಂದೇಶ್ ಮತ್ತು ನನ್ನ ಸ್ವಂತ ಸಹೋದರಿ ಪ್ರಫುಲ್ಲಾ ನಾಯಕ್ ಸೇರಿಕೊಂಡು ನನ್ನ ವಿರುದ್ಧ ವೇಶ್ಯೆ ಎಂಬ ಹಣೆಪಟ್ಟಿ ಹಚ್ಚಲು ಯತ್ನಿಸುತ್ತಿದ್ದಾರೆ. ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ನನ್ನ ವಿರುದ್ಧ ಎಫ್‌ಐಆರ್ ಇದೆ ಎಂದು ಅವರು ಸುಳ್ಳು ಹಬ್ಬಿಸುತ್ತಿದ್ದಾರೆ. ಆದರೆ, 2012ರ ಆ ಪ್ರಕರಣದಲ್ಲಿರುವ ಸುಮತಿ ಎಂಬ ಹೆಸರು ನನಗಲ್ಲ. ಆ ಠಾಣೆಯಿಂದಲೇ ನನಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ ಎಂದು ಕ್ಲೀನ್ ಚಿಟ್ ಸಿಕ್ಕಿದೆ. ನನ್ನ ಅಕ್ಕ ಪ್ರಫುಲ್ಲಾ ಇಂದು ಇನ್ಸ್ಪೆಕ್ಟರ್ ಸಂದೇಶ್ ಅವರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ' ಎಂದು ಆರೋಪಿಸಿದರು.

ಮಾನನಷ್ಟ ಮೊಕದ್ದಮೆಯ ಎಚ್ಚರಿಕೆ:

ತನ್ನ ಮೇಲೆ ಮಾಡಲಾಗಿರುವ ಸುಳ್ಳು ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಮತಿ ನಾಯಕ್, ತಮ್ಮ ಘನತೆಗೆ ಧಕ್ಕೆ ತಂದಿರುವ ಇನ್ಸ್ಪೆಕ್ಟರ್ ಸಂದೇಶ್ ಮತ್ತು ಸಹೋದರಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಈ ಕೂಡಲೇ ಮಧ್ಯಪ್ರವೇಶಿಸಿ ತಮಗೆ ನ್ಯಾಯ ಒದಗಿಸಬೇಕು ಮತ್ತು ಭ್ರಷ್ಟ ಹಾಗೂ ಅಸಭ್ಯ ವರ್ತನೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.