ಬೆಂಗಳೂರು(ಜ.15): ಡಿಸೆಂಬರ್‌ ವೇತನ ಪಾವತಿ ವಿಳಂಬ ಮಾಡುತ್ತಿರುವ ಬಗ್ಗೆ ಸಾರಿಗೆ ನೌಕರರು ತೀವ್ರ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ನಾಲ್ಕೂ ಸಾರಿಗೆ ನಿಗಮಗಳು ಅರ್ಧ ವೇತನವನ್ನು ನೌಕರರ ಖಾತೆಗೆ ಜಮೆ ಮಾಡಿವೆ.

ಕೊರೋನಾದಿಂದ ಪ್ರಯಾಣಿಕರ ಕೊರತೆಯಾಗಿ ಸಾರಿಗೆ ಆದಾಯ ಕುಸಿದಿರುವ ಹಿನ್ನೆಲೆಯಲ್ಲಿ ನೌಕರರ ವೇತನ ಪಾವತಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಳೆದ ಎಂಟು ತಿಂಗಳಿಂದ ರಾಜ್ಯ ಸರ್ಕಾರವೇ ನಾಲ್ಕು ನಿಗಮದ ಸುಮಾರು 1.30 ಲಕ್ಷ ನೌಕರರಿಗೆ ವೇತನ ಪಾವತಿಗೆ ಅನುದಾನ ನೀಡಿದೆ. ಜನವರಿ ಬಂದರೂ ಪ್ರಯಾಣಿಕರ ಸಂಖ್ಯೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗದ ಪರಿಣಾಮ ನಿಗಮಗಳ ಆರ್ಥಿಕ ಸ್ಥಿತಿ ಅಧೋಗತಿ ತಲುಪಿದೆ. ಹೀಗಾಗಿ ಜನವರಿ 10 ದಾಟಿದರೂ ನೌಕರರ ಡಿಸೆಂಬರ್‌ ತಿಂಗಳ ವೇತನ ಪಾವತಿಸಲು ಸಾಧ್ಯವಾಗಿರಲಿಲ್ಲ.

KSRTC ಡ್ರೈವರ್‌ಗಳಿಗೆ ಹೊಸ ರೀತಿ ಡ್ಯೂಟಿ..!

ವೇತನ ಪಾವತಿ ವಿಳಂಬವಾದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ವೇತನ ಇಲ್ಲದೆ ಹೊಸವರ್ಷ ಮೊದಲ ಹಬ್ಬ ಆಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸಾರಿಗೆ ನಿಗಮಗಳು ಡಿಸೆಂಬರ್‌ ತಿಂಗಳ ಅರ್ಧ ವೇತನವನ್ನು ಸದ್ಯಕ್ಕೆ ನೌಕರರ ಖಾತೆಗೆ ಹಾಕಿವೆ. ಹೀಗಾಗಿ ನೌಕರರು ನಿಟ್ಟುಸಿರು ಬಿಟ್ಟಿದ್ದಾರೆ.