Bhatkal ಎಸ್ಸಿ ಪ್ರಮಾಣಪತ್ರ ವಿತರಣೆಗೆ ಆಗ್ರಹಿಸಿ ಭಟ್ಕಳದಲ್ಲಿ ಮೊಗೇರರ ಬೃಹತ್ ಪ್ರತಿಭಟನೆ!

ಎಸ್ಸಿ ಸೌಲಭ್ಯ ನಿಲ್ಲಿಸಿದ್ದಕ್ಕಾಗಿ ಸರ್ಕಾರದ ವಿರುದ್ಧ ಆಕ್ರೋಶ

ಭಟ್ಕಳದಲ್ಲಿ ಮೊಗೇರರ ಬೃಹತ್ ಪ್ರತಿಭಟನೆ

ಭಟ್ಕಳ ಸರ್ಕಲ್ ನಲ್ಲಿದ್ದ ಕ್ಲಾಕ್ ಟವರ್ ಏರಿ ವಿಷ ಸೇವಿಸುವ ಪ್ರಯತ್ನ ನಡೆಸಿದ ವ್ಯಕ್ತಿ

moger community in Bhatkal stage big protest to demand issue SC caste certificate san

ಭರತ್ ರಾಜ್ ಕಲ್ಲಡ್ಕ, ಗಿರೀಶ್ ನಾಯ್ಕ್ ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ

ಭಟ್ಕಳ (ಮಾ. 23): ಪರಿಶಿಷ್ಟ ಜಾತಿ (SC) ಸೌಲಭ್ಯಗಳನ್ನು ಸರಕಾರ ಮೊಗೇರ ಸಮುದಾಯಕ್ಕೆ (Moger Community) ನಿಲ್ಲಿಸಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿರುವ ಈ ಸಮುದಾಯದ ಜನರು, ಉತ್ತರಕನ್ನಡ (Uttar Kannada) ಜಿಲ್ಲೆಯ ಭಟ್ಕಳದಲ್ಲಿ (Bhatkal) ಭಾರೀ ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದೆ ಸರಕಾರ ಒದಗಿಸುತ್ತಿದ್ದ ಸೌಲಭ್ಯವನ್ನು ಮತ್ತೆ ಮುಂದುವರಿಸಲು ಸಾಕಷ್ಟು ಬಾರಿ ಮನವಿಯನ್ನು ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ, ಈ ಸಮುದಾಯದ ಜನರು ಇದೀಗ ಬೀದಿಗಿಳಿದು ಹೋರಾಟ ನಡೆಸಿದ್ದಲ್ಲೇ, ಆತ್ಮಹತ್ಯೆಯ ಎಚ್ಚರಿಕೆಯನ್ನೂ ನೀಡಿದ್ದಾರೆ. 

ಒಂದೆಡೆ ಬೃಹತ್ ಸಂಖ್ಯೆಯಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಜನರು, ಇನ್ನೊಂದೆಡೆ ವಿಷ ಸೇವಿಸಲು ಯತ್ನಿಸುತ್ತಿರುವ ಯುವಕ, ಮತ್ತೊಂದೆಡೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವ ಪೊಲೀಸರು. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಉತ್ತರಕನ್ನಡ ಜಿಲ್ಲೆಯ ಭಟ್ಕಳ ನಗರದಲ್ಲಿ. ಮೊಗೇರ ಸಮುದಾಯಕ್ಕೆ ಸರಕಾರ ಈ ಹಿಂದೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ, ಸಿಂಧುತ್ವ ಹಾಗೂ ಸೌಲಭ್ಯಗಳನ್ನು ಒದಗಿಸುತ್ತಿತ್ತು. ಆದರೆ, ಸಾಕಷ್ಟು ಸಮಯಗಳಿಂದ ಸರ್ಕಾರ ನೀಡುತ್ತಿರುವ ಈ ಸೌಲಭ್ಯಗಳನ್ನು ನಿಲ್ಲಿಸಲಾಗಿರೋದ್ರಿಂದ ಇದು ಮೊಗೇರರ ಆಕ್ರೋಶಕ್ಕೆ ಕಾರಣವಾಗಿದೆ.

ಹಿಂದೆ ಈ ಬಗ್ಗೆ ದೂರನ್ನು ನೀಡಿದಾಗಲೂ ಹೈಕೋರ್ಟ್ ಕೂಡಾ ಮೊಗೇರರು ಪರಿಶಿಷ್ಟರು ಎಂದು ಆದೇಶ ನೀಡಿತ್ತು.  ಆದ್ರೆ, 2008ರಿಂದ ಸರ್ಕಾರ ಮೊಗೇರರಿಗೆ ಎಸ್ಸಿ ಸೌಲಭ್ಯಗಳನ್ನು ನಿಲ್ಲಿಸಿದೆ. ಅಲ್ಲದೇ, ಹಲೋ ಸಿಎಂ ಕಾರ್ಯಕ್ರಮದ ಮೂಲಕವೂ ಮೊಗೇರ ಸಮಾಜದ ಜನರು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಬಳಿ ತಮ್ಮ ಬೇಡಿಕೆ ಮಂಡಿಸಿದ್ದರು. ಆದರೆ, ಇಲ್ಲಿಯವರೆಗೆ ಅವರ ಬೇಡಿಕೆ ಮಾತ್ರ ನೆರವೇರಿಲ್ಲ. ಇವೆಲ್ಲಾ ಕಾರಣಗಳಿಂದ ಸರಕಾರ ಬಡ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಂದಹಾಗೆ, ಸರ್ಕಾರದ ನಿರ್ಣಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜನರು ಭಟ್ಕಳ ತಾಲೂಕಿನ ವೆಂಕಟಾಪುರದಿಂದ ಭಟ್ಕಳ ನಗರದವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಪ್ರತಿಭಟನೆಯ ವೇಳೆ ಮಹಿಳೆಯರು ನೇಣು, ಪಾಯಿಸನ್ ಬಾಟಲಿ ಹಿಡಿದುಕೊಂಡು ಎಚ್ಚರಿಕೆ ನೀಡಿದ್ರೆ, ಯುವಕ ಉಮೇಶ ಮೊಗೇರ ಎಂಬಾತ ಶಂಶುದ್ಧಿನ್ ವೃತ್ತದ ಕ್ಲಾಕ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ಸರ್ಕಾರ ತಮ್ಮ ಬೇಡಿಕೆ ಈಡೇರಿಸಬೇಕಿದ್ದು, ಪಟ್ಟಭದ್ರ ಹಿತಾಸಕ್ತಿಗಳ ಮಾತು ಕೇಳಿ ಸರಕಾರ ತಮಗೆ ವಂಚಿಸಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ. ಅಲ್ಲದೇ, ಭಟ್ಕಳ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು  ಮುಂದಾಗಿದ್ದ ಪ್ರತಿಭಟನಾಕಾರರು, ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಸಿದ್ದಾರೆ. 

Hijab Verdict ಸರ್ಕಾರ ಲೆಕ್ಕಕ್ಕಿಲ್ಲ, ಕೋರ್ಟ್ ಹೇಳಿದ್ರೂ ಕೇಳೋದಿಲ್ಲ, ಭಟ್ಕಳದಲ್ಲಿ 3ನೇ ದಿನಕ್ಕೆ ಮುಸ್ಲಿಂ ವರ್ತಕರ ಬಂದ್!
ಒಟ್ಟಿನಲ್ಲಿ ಸರಕಾರ ಮೊಗೇರ ಸಮುದಾಯದ ಜನರನ್ನು ಪ್ರವರ್ಗ 1ರಿಂದ ಕೈಬಿಟ್ಟು ಈ ಪರಿಶಿಷ್ಟ ಜಾತಿಯಲ್ಲೇ ಪರಿಗಣಿಸಬೇಕಲ್ಲದೇ, ಈ ಸಮುದಾಯಕ್ಕೆ ಸರಕಾರದ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರಿಸದಿದ್ದಲ್ಲಿ ಉಗ್ರ ಹೋರಾಟ ನಡೆಯಲಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. 

Hijab Verdict ಭಟ್ಕಳದಲ್ಲಿ ಮುಸ್ಲಿಂ ಅಂಗಡಿಗಳು ಬಂದ್, ನಾಲ್ವರು PFI ಕಾರ್ಯಕರ್ತರ ಬಂಧನ!
ಇದೇ ವೇಳೆ ಹಲವು ಬೇಡಿಕೆಗಳುಳ್ಳ ಮನವಿಯನ್ನು ಪ್ರತಿಭಟನೆಯ ವೇಳೆ ಉಪವಿಭಾಗಾಧಿಕಾರಿಗೆ ಸಮುದಾಯದ ಜನರು ನೀಡಿದ್ದಾರೆ.  ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸಿಸುವ ಮೊಗೇರರಿಗೆ ಸರ್ಕಾರ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬೇಕು. ಕೇಂದ್ರ ಸರ್ಕಾರದ ಎಸ್‌ಸಿ ಜಾತಿ ಪಟ್ಟಿಯನ್ನು ಹೊರತುಪಡಿಸಿ ಇನ್ನುಳಿದ ಹಿಂದುಳಿದ ವರ್ಗ ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗದ ಪಟ್ಟಿಯಿಂದ ಮೊಗೇರ ಜಾತಿಯನ್ನ ಕೈಬಿಡಬೇಕು. ಬಾಕಿ ಇರುವ ಸಿಂಧುತ್ವ ಪ್ರಮಾಣ ಪತ್ರವನ್ನ ವಿತರಿಸಬೇಕು. ಸುಳ್ಳು ಜಾತಿ ಪತ್ರ ಎಂದು ತಮ್ಮ ಸಮಾಜದ ವಿರುದ್ಧ ಹೂಡಿದ ದೂರುಗಳನ್ನ ಹಿಂಪಡೆಯಬೇಕು. ಪ್ರವರ್ಗ 1ರಲ್ಲಿರುವ ಮೊಗೇರ ಜಾತಿಯ ಹೆಸರನ್ನುನ್ನ ಉತ್ತರ ಕನ್ನಡ ಜಿಲ್ಲೆಯ ತಂತ್ರಾಂಶದಿಂದ ಕೈಬಿಡಬೇಕೆಂದು ಬೇಡಿಕೆಯಲ್ಲಿ ತಿಳಿಸಲಾಗಿದೆ.

Latest Videos
Follow Us:
Download App:
  • android
  • ios