ಬೆಂಗಳೂರು(ಆ.15): ಪೂರ್ವ ವಿಭಾಗದ ಬೆಂಗಳೂರಿನಲ್ಲಿ ಗಲಭೆ ಎಬ್ಬಿಸಿದ್ದ ಕಿಡಿಗೇಡಿಗಳು,'ಪೊಲೀಸರು ಬಂಧಿಸಲು ಬಂದರೆ ಅವರ ಮೇಲೆ ಹಲ್ಲೆ ನಡೆಸಿ’ ಎಂದು ಸೂಚನೆ ನೀಡಿದ್ದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರ ಸೋದರಳಿಯ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಎಂಬುದನ್ನು ಅಸ್ತ್ರವಾಗಿಸಿಕೊಂಡು ಎಸ್‌ಡಿಪಿಐ ಸಂಘಟನೆ ಕಾರ್ಯಕರ್ತರು ಆ.11ರಂದು ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಭಾರೀ ದಾಂಧಲೆ ನಡೆಸಿದ್ದರು. ಹಿಂಸಾಚಾರದಲ್ಲಿ ಗಾಯಗೊಂಡಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಗುಂಡು ಹಾರಿಸಿದ್ದರು. ಇದಾದ ಬಳಿಕ ಪೊಲೀಸರು ಕಿಡಿಗೇಡಿಗಳ ಬಂಧನದ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈ ಮಾಹಿತಿ ಅರಿತ ಎಸ್‌ಡಿಪಿಐ ಕಾರ್ಯಕರ್ತರು ಮೊಬೈಲ್‌ ವಾಟ್ಸಪ್‌ ಗ್ರೂಪ್‌ವೊಂದನ್ನು ಮಾಡಿಕೊಂಡು, ಪೊಲೀಸರು ನಿಮ್ಮನ್ನು ಬಂಧನ ಮಾಡಲು ಬಂದರೆ ಬಿಡದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಪೊಲೀಸರು ಮನೆ ಬಳಿ ಬಂದ ವೇಳೆ ಮಹಿಳೆಯರು ಮುಂದೆ ನಿಂತುಕೊಂಡು ಪೊಲೀಸರನ್ನು ಹಿಮ್ಮೆಟ್ಟಿಸಬೇಕು. ಈ ಪರಿಸ್ಥಿತಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿಯಾದರೂ ಸರಿ ಅವರನ್ನು ಬಿಡಬಾರದು ಎಂದು ಸೂಚನೆ ನೀಡಲಾಗಿದೆ ಎಂಬುದು ಬೆಚ್ಚಿ ಬೀಳಿಸಿದೆ.

ಬೆಂಗಳೂರು ದಾಂಧಲೆ: ಗಲಭೆಕೋರರಿಂದ ಕೋಟಿ ಕೋಟಿ ಲೂಟಿ!

ಕೆಲ ಆರೋಪಿಗಳನ್ನು ಬಂಧಿಸಿದಾಗ ಪೊಲೀಸರ ಮೇಲೆ ಮತ್ತೇ ಹಲ್ಲೆಗೆ ಸಂಚು ರೂಪಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಕೃತ್ಯದ ಹಿಂದೆ ನೇರವಾಗಿ ಎಸ್‌ಡಿಪಿಐನ ಪ್ರಮುಖರು ಇದ್ದಾರೆ. ಈಗಾಗಲೇ ಮೊಬೈಲ್‌ ವಾಟ್ಸಪ್‌ನಲ್ಲಿ ಪೊಲೀಸ್‌ ಮೇಲೆ ಹಲ್ಲೆ ಬಗ್ಗೆ ಸಂದೇಶ ಹಾಕಲಾಗಿರುವ ಸಾಕ್ಷ್ಯವನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಚೋದನೆ: ವಾಟ್ಸಾಪ್‌ ಸಂದೇಶಗಳು ಲಭ್ಯ

ಗಲಭೆಗೆ ಪ್ರಚೋದನೆ ನೀಡಿದಂತಹ ಆರೋಪಿಗಳ ಮೊಬೈಲ್‌ಗಳಲ್ಲಿ ವಾಟ್ಸಾಪ್‌ ಸಂದೇಶಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇಸ್ಲಾಂ ಧರ್ಮಗುರು ಮಹಮ್ಮದ್‌ ಪೈಗಂಬರ್‌ ಕುರಿತು ನವೀನ್‌ ಹಾಕಿದ್ದ ಅವೇಹಳನಕಾರಿ ಪೋಸ್ಟ್‌ ಅನ್ನು ಸ್ಕ್ರೀನ್‌ಶಾಟ್‌ ಹೊಡೆದು ವೈರಲ್‌ ಮಾಡಿದ್ದ ಫೈರೋಜ್‌ ಪಾಷ, ತನ್ನ ಟಿಪ್ಪು ಆರ್ಮಿ ವಾಟ್ಸಾಪ್‌ ಗ್ರೂಪ್‌ನಲ್ಲಿ ಹಾಕಿ ಪ್ರತಿಭಟಿಸಲು ಡಿ.ಜೆ.ಹಳ್ಳಿ ಠಾಣೆ ಬಳಿ ಬರುವಂತೆ ಆತ ಸಂದೇಶ ಕಳುಹಿಸಿದ್ದ. ಬಳಿಕ ವಾಟ್ಸಾಪ್‌ನಲ್ಲಿ ಗಲಭೆಗೂ ಮುನ್ನ ಆರೋಪಿಗಳು ನಡುವೆ ಸಂದೇಶಗಳು ವಿನಿಮಯವಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರಿಗೆ ಪ್ರತಿಷ್ಠೆಯಾದ ಗಲಭೆ ಪ್ರಕರಣ

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣ ರಾಜಧಾನಿ ಪೊಲೀಸರಿಗೆ ಪ್ರತಿಷ್ಠೆಯಾಗಿದ್ದು, ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಇತ್ತೀಚಿನ ಕೆಲ ವರ್ಷಗಳಿಂದ ರೌಡಿಸಂ ಸೇರಿದಂತೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಿರುವ ಪೊಲೀಸರು ನಗರದಲ್ಲಿ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳು ಬಾಲ ಬಿಚ್ಚದಂತೆ ನೋಡಿಕೊಂಡಿದ್ದರು. ಆದರೆ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರ ಸೋದರಳಿಯ ನವೀನ್‌ ಇಸ್ಲಾಂ ಧರ್ಮ ಗುರು ಮಹಮ್ಮದ್‌ ಪೈಗಂಬರ್‌ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ್ದಾನೆ ಎಂಬುದನ್ನು ನೆಪವಾಗಿಟ್ಟುಕೊಂಡು ದುಷ್ಟಶಕ್ತಿಗಳು ಶಾಂತಿ ಕದಡಿವೆ. ಅಲ್ಲದೆ, ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ, ಪೊಲೀಸರ ವಾಹನ ಹಾಗೂ ಪೊಲೀಸ್‌ ಸಿಬ್ಬಂದಿ ಮೇಲೆ ಕೊಲೆಗೆ ಯತ್ನಿರುವುದು ಪೊಲೀಸರನ್ನು ಕೆಣಕುವಂತೆ ಮಾಡಿದೆ.

ನಾಡಿನ ರಕ್ಷಣೆ ಕಾಯುತ್ತಿರುವ ಪೊಲೀಸರ ಮೇಲೆ ದಾಳಿ ನಡೆಸಿದ ದುಷ್ಟಶಕ್ತಿಗಳನ್ನು ಮಟ್ಟಹಾಕಲು ಖಾಕಿ ಪಡೆ ಸನ್ನದ್ಧವಾಗಿದ್ದು, ಹೆಡೆಮುರಿ ಕಟ್ಟಲು ಪಣ ತೊಟ್ಟಿದೆ ಎನ್ನಲಾಗಿದೆ. ರಾತ್ರೋರಾತ್ರಿ ಇಂತಹ ಹಿಂಸಾಚಾರಕ್ಕೆ ಮುಂದಾಗಿದ್ದನ್ನು ನೋಡಿದ ಇಲಾಖೆ ಇದರ ಹಿಂದೆ ಯಾರೇ ಇದ್ದರೂ ಕಂಬಿ ಹಿಂದೆ ತಳ್ಳಲು ಪಣ ತೊಟ್ಟಿದೆ.

ಇನ್ನು ಪೊಲೀಸರ ಕೊಲೆಗೆ ಯತ್ನ, ಪೊಲೀಸ್‌ ಠಾಣೆಗೆ ಬೆಂಕಿ ಹಾಕಿದ ವಿಷಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ದುಷ್ಟಶಕ್ತಿ ಹೆಡೆಮುರಿ ಕಟ್ಟಿದರೆ ಮಾತ್ರ ಮತ್ತೆ ಪೊಲೀಸರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಧೈರ್ಯ ಬರಲು ಸಾಧ್ಯ. ಹೀಗಾಗಿ, ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದೇ ಹೇಳಲಾಗುತ್ತಿದೆ. ಹೀಗಾಗಿಯೇ ಪ್ರಕರಣ ನಡೆದ ರಾತ್ರಿಯಿಂದ ಪೂರ್ವ ವಿಭಾಗದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಐಜಿಪಿ, ಡಿಐಜಿ, ಡಿಸಿಪಿ, ಎಸಿಪಿ ಮತ್ತು ಇನ್ಸ್‌ಪೆಕ್ಟರ್‌ಗಳನ್ನು ತನಿಖೆಗೆ ಬಳಸಿಕೊಳ್ಳಲಾಗಿದೆ. ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಜಾಗ್ರತೆ ವಹಿಸಿರುವ ಪೊಲೀಸರು ಎಷ್ಟುಸಾವಿರ ಮಂದಿ ಇದ್ದರೂ, ಸೂಕ್ತ ಸಾಕ್ಷ್ಯವನ್ನು ಕಲೆ ಹಾಕಿ ಬಂಧನಕ್ಕೆ ಬಲೆ ಬೀಸಿದೆ. ಅದಕ್ಕೆ ಪುಷ್ಟಿನೀಡುವಂತೆ ಪೂರ್ವ ವಿಭಾಗದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಇಲ್ಲಿ ತನಕ ಪಾಲಿಕೆ ಸದಸ್ಯೆಯ ಪತಿ ಸೇರಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಈ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದ್ದು, ಪೊಲೀಸರು ಕಾರ್ಯಾಚರಣೆ ತೀವ್ರವಾಗಿದೆ.