ಬೆಂಗಳೂರು(ಆ.15): ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆಯಲ್ಲಿ ಶಾಸಕರು ಸೇರಿದಂತೆ ಐದಕ್ಕೂ ಹೆಚ್ಚಿನ ಮನೆಗಳಿಗೆ ನುಗ್ಗಿರುವ ದುಷ್ಕರ್ಮಿಗಳು ಕೋಟ್ಯಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಸಂಗತಿ ಬೆಳಕಿಗೆ ಬಂದಿದೆ.

ಹಣ ಮತ್ತು ಚಿನ್ನಾಭರಣ ಕಳೆದುಕೊಂಡವರು ಈಗ ಒಬ್ಬೊಬ್ಬರಾಗಿ ಬಂದು ದೂರು ಸಲ್ಲಿಸುತ್ತಿದ್ದಾರೆ. ಈ ಕಳ್ಳತನ ಸಂಬಂಧ ಡಿ.ಜೆ.ಹಳ್ಳಿ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಆದರೆ ತಮ್ಮ ಮನೆ ಲೂಟಿ ಬಗ್ಗೆ ದೂರು ನೀಡದ ಶಾಸಕರು 3 ಕೋಟಿ ರು. ನಷ್ಟವಾಗಿದೆ ಎಂದಿದ್ದಾರೆ.

ಗಲಭೆಯಲ್ಲಿ ಮನೆ ಕಳೆದುಕೊಂಡ ಶಾಸಕ ಅಖಂಡ ಹೋಟೆಲ್‌ನಲ್ಲಿ!

ಶಾಸಕರ ಮನೆಯಲ್ಲಿ ಕೋಟಿ ಕಳವು:

ಕೆಲ ದಿನಗಳ ಹಿಂದಷ್ಟೆ ಕಾವಲ್‌ಭೈರಸಂದ್ರದಲ್ಲಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಯಲ್ಲಿ ವರಲಕ್ಷ್ಮೀ ಹಬ್ಬ ಆಚರಿಸಲಾಗಿತ್ತು. ಈ ಹಬ್ಬದ ಆಚರಣೆ ಬಳಿಕ ಮನೆಯ ಲಾಕರ್‌ನಲ್ಲಿ ಸಾಕಷ್ಟು ಹಣ, ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಶಾಸಕರ ಕುಟುಂಬದವರು ಇಟ್ಟಿದ್ದರು. ಮಂಗಳವಾರ ರಾತ್ರಿ ಗಲಭೆ ವೇಳೆ ಶಾಸಕರ ಮನೆಯಲ್ಲಿ ಹಣ ಮತ್ತು ಆಭರಣ ಲೂಟಿ ಮಾಡಿದ ಬಳಿಕ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕಾವಲುಭೈರಸಂದ್ರದಲ್ಲಿ ಟಿ.ಪವನ್‌ಕುಮಾರ್‌ ಅವರು ದೂರಿನಲ್ಲಿ ಮನೆಯಲ್ಲಿ 5 ಲಕ್ಷ ನಗದು, ವಾಚ್‌, ಉಂಗುರ, ಬ್ರೆಸ್‌ಲೈಟ್‌ ಸೇರಿದಂತೆ ಚಿನ್ನಾಭರಣ ದೋಚಿದರು. ಕಾರು ಹಾಗೂ ಆಸ್ತಿ ಎಲ್ಲ ದಾಖಲೆ ಪತ್ರಗಳಿಗೆ ಬೆಂಕಿ ಹಾಕಿ ಸುಟ್ಟು ಹಾಕಿದರು. ಅಡುಗೆ ಅನಿಲ್‌ ಸೋರಿಕೆ ಮಾಡಿ ಸ್ಫೋಟಕ್ಕೆ ಸಹ ಯತ್ನಿಸಿದರು ಎಂದು ವಿವರಿಸಿದ್ದಾರೆ.

ಇನ್ನು ಗಲಭೆಗೆ ಮೂಲಕ ಕಾರಣಕರ್ತ ನವೀನ್‌ ಮನೆಯಲ್ಲಿ ಸಹ 10 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ ಎಂದು ನವೀನ್‌ ತಾಯಿ ಜಯಂತಿ ಆಪಾದಿಸಿದ್ದಾರೆ.

200 ಗ್ರಾಂ ಚಿನ್ನ, ಅರ್ಧ ಕೆ.ಜಿ. ಬೆಳ್ಳಿ ವಸ್ತುಗಳ ದೋಚಿದರು

ಡಿ.ಜೆ.ಹಳ್ಳಿ ಠಾಣೆಯಲ್ಲಿ ನಾಗಮ್ಮ ಲೇಔಟ್‌ನ ಕೆ.ಎಚ್‌.ರಾಮಸ್ವಾಮಿ ಎಂಬುವರು ನೀಡಿರುವ ದೂರಿನಲ್ಲಿ ತಮ್ಮ ಮನೆಗೆ ಆ.11ರ ರಾತ್ರಿ 9 ಗಂಟೆಯಲ್ಲಿ 200 ಮಂದಿ ಗುಂಪು ಮಾರಕಾಸ್ತ್ರಗಳನ್ನು ಹಿಡಿದು ನುಗ್ಗಿದರು. ವಾಹನಗಳು, ಎಲೆಕ್ಟ್ರಿಕಲ್‌ ವಸ್ತುಗಳು, ಸೋಫಾಸೆಟ್‌, ಪೀಠೋಪಕರಣ ಮತ್ತು ಇನ್ನಿತ್ತರ ವಸ್ತುಗಳಿಗೆ ಬೆಂಕಿ ಹಚ್ಚಿ ನಾಶ ಮಾಡಿದರು. ಮಲಗುವ ಕೋಣೆಗೆ ಹೋಗಿ ಬೀರು ಒಡೆದು 200 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ, 75 ಸಾವಿರ ಹಣ ಹಾಗೂ ಐದು ರೇಷ್ಮೆ ಸೀರೆ ಕಳವು ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.