ಜೈಲಿನಿಂದ ಮೊಬೈಲ್‌ ಕರೆಗಳು ಹೊರಹೋಗದಂತೆ ಟಿಎಚ್‌ಸಿಬಿ ಟವರ್‌ಗಳು ಸಿಗ್ನಲ್‌ಗಳನ್ನೇ ನಿರ್ಬಂಧಿಸಲಿವೆ. ಇದು ಮೊಬೈಲ್‌ ಜಾಮರ್‌ಗಳಿಗಿಂತ ಅತ್ಯುತ್ತಮ ಮಟ್ಟದ ತಾಂತ್ರಿಕ ವ್ಯವಸ್ಥೆಯಾಗಿದೆ. 

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು (ಜೂ.08): ನಾಡಿನ ಸೆರೆಮನೆಗಳಲ್ಲಿ ಮೊಬೈಲ್‌ ಬಳಕೆ ಸಂಪೂರ್ಣವಾಗಿ ನಿರ್ಬಂಧಿಸಲು ದೇಶದ ಪ್ರತಿಷ್ಠಿತ ಕಾರಾಗೃಹ ತಿಹಾರ್‌ ಜೈಲು ಮಾದರಿಯಲ್ಲಿ ‘ಟವರ್‌ ಫರ್‌ ಹಾರ್ಮೋನಿಯಸ್‌ ಕಾಲ್‌ ಬ್ಲಾಕಿಂಗ್‌ ಸಿಸ್ಟಂ’ (ಟಿಎಚ್‌ಸಿಬಿ) ಸ್ಥಾಪನೆ ಸಂಬಂಧ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಪ್ರಸ್ತಾಪಕ್ಕೆ ಸರ್ಕಾರವು ಹಸಿರು ನಿಶಾನೆ ತೋರಿದೆ.

ಜೈಲಿನಿಂದ ಮೊಬೈಲ್‌ ಕರೆಗಳು ಹೊರಹೋಗದಂತೆ ಟಿಎಚ್‌ಸಿಬಿ ಟವರ್‌ಗಳು ಸಿಗ್ನಲ್‌ಗಳನ್ನೇ ನಿರ್ಬಂಧಿಸಲಿವೆ. ಇದು ಮೊಬೈಲ್‌ ಜಾಮರ್‌ಗಳಿಗಿಂತ ಅತ್ಯುತ್ತಮ ಮಟ್ಟದ ತಾಂತ್ರಿಕ ವ್ಯವಸ್ಥೆಯಾಗಿದೆ. ಈ ಯೋಜನೆ ಪ್ರಾಯೋಗಿಕವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊದಲು ಜಾರಿಗೊಳಿಸಲಾಗುತ್ತದೆ. ಇಲ್ಲಿ ಸಾಧಕ-ಬಾಧಕ ಅವಲೋಕಿಸಿ ಬಳಿಕ ಮುಂದಿನ ಹಂತದಲ್ಲಿ ರಾಜ್ಯದ ಎಲ್ಲ ಕೇಂದ್ರ ಕಾರಾಗೃಹಗಳಲ್ಲಿ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಸದಾನಂದ ಗೌಡರ ವಿರುದ್ಧ ಅಪಪ್ರಚಾರ ತಪ್ಪು: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗಿ ಸೆರೆಮನೆ ಸೇರುವ ರೌಡಿಗಳು ಸೇರಿದಂತೆ ಕೆಲವು ಸಜಾ ಮತ್ತು ಶಿಕ್ಷಾ ಕೈದಿಗಳು, ಕಾರಾಗೃಹದಿಂದಲೇ ಹೊರಗಿನ ಪ್ರಪಂಚದ ಜತೆ ಮೊಬೈಲ್‌ ಮೂಲಕ ಸಂಪರ್ಕ ಹೊಂದುವ ಸಂಗತಿ ಆಗಾಗ್ಗೆ ಬಯಲಾಗುತ್ತಲೇ ಇವೆ. ಅಲ್ಲದೆ ಕೆಲವು ರೌಡಿಗಳು, ಜೈಲಿನಿಂದಲೇ ಕರೆ ಮಾಡಿ ಕೆಲವರಿಗೆ ಧಮ್ಕಿ ಹಾಕಿದ ಕೃತ್ಯಗಳು ಸಹ ನಡೆದಿವೆ. ಇತ್ತೀಚಿಗೆ ಬೆಳಗಾವಿ ಹಿಡಲಂಗಾ ಕೇಂದ್ರ ಕಾರಾಗೃಹದಿಂದ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಬೆದರಿಕೆ ಕರೆ ಹೋಗಿ ಚರ್ಚೆ ಹುಟ್ಟುಹಾಕಿತ್ತು. ಈ ಅಪರಾಧ ಕೃತ್ಯಗಳ ಹಿನ್ನೆಲೆಯಲ್ಲಿ ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್‌ ಬಳಕೆಗೆ ಕಡಿವಾಣ ಹಾಕಲು ಕಾರಾಗೃಹ ಇಲಾಖೆ ಭಾರಿ ಕಸರತ್ತು ನಡೆಸಿದ್ದು, ತಿಹಾರ್‌ ಜೈಲಿನಲ್ಲಿ ಯಶಸ್ಸು ಕಂಡಿರುವ ಮೊಬೈಲ್‌ ಸಿಗ್ನಲ್‌ ನಿಷ್ಕಿ್ರಯಗೊಳಿಸುವ ಟಿಎಚ್‌ಸಿಬಿ ಟವರ್‌ಗಳ ಸ್ಥಾಪನೆಗೆ ಯೋಜನೆ ರೂಪಿಸಿದೆ.

ಹೇಗೆ ಕಾರ್ಯನಿರ್ವಹಣೆ: ಮೊಬೈಲ್‌ ಜಾಮರ್‌ಗಳಲ್ಲಿ ಮೊಬೈಲ್‌ನಿಂದ ಮೊಬೈಲ್‌ಗೆ ಕರೆಗಳು ಸಂಪರ್ಕಗೊಂಡರೂ ಸಂಭಾಷಣೆ ನಡೆಸಲು ತಾಂತ್ರಿಕ ಅಡಚಣೆ ಉಂಟಾಗುತ್ತದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಟಿಎಚ್‌ಸಿಬಿ ಟವರ್‌ಗಳು ಕಾರ್ಯನಿರ್ವಹಿಸುತ್ತವೆ. ಅಂದರೆ ಮೊಬೈಲ್‌ನಿಂದ ಮೊಬೈಲ್‌ಗೆ ಕರೆಗಳೇ ಸಂಪರ್ಕವಾಗುವುದಿಲ್ಲ. ಜೈಲಿನಿಂದ ಮೊಬೈಲ್‌ ಕರೆ ಮಾಡಿದರೆ ಅವುಗಳಿಗೆ ಸಿಗ್ನಲ್‌ಗಳೇ ಸಿಗುವುದಿಲ್ಲ. ಜೈಲಿನ ಆವರಣದಲ್ಲಿ ಸ್ಥಾಪಿಸುವ ಟವರ್‌ನಲ್ಲಿ ಪ್ರಮುಖ ಮೊಬೈಲ್‌ ಸೇವಾ ಕಂಪನಿಗಳಾದ ಜಿಯೋ, ಏರ್‌ಟೆಲ್‌, ವೋಡಾಫೋನ್‌ ಹಾಗೂ ಬಿಎಸ್‌ಎನ್‌ಎಲ್‌ಗಳ ಅಂಟೆನಾಗಳನ್ನು ಅಳವಡಿಸಲಾಗುತ್ತದೆ. ಈ ಅಂಟೆನಾಗಳು ತಮ್ಮ ಕಂಪನಿಗಳ ಮೊಬೈಲ್‌ ಕರೆಗಳನ್ನು ನಿರ್ಬಂಧಿಸುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲಿಗೆ 3 ಟವರ್‌ಗಳು: ರಾಜ್ಯದ 9 ಕೇಂದ್ರ ಕಾರಾಗೃಹಗಳ ಪೈಕಿ ಮೊದಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಟಿಎಚ್‌ಬಿಸಿ ಟವರ್‌ಗಳನ್ನು ಸ್ಥಾಪಿಸಲಾಗುತ್ತದೆ. ಈ ಜೈಲಿನ ಆವರಣದಲ್ಲಿ ತಲಾ 1.5 ಕೋಟಿ ರು. ನಂತೆ 4.5 ಕೋಟಿ ರು. ವೆಚ್ಚದಲ್ಲಿ ಮೂರು ಟವರ್‌ಗಳನ್ನು ಅಳವಡಿಸಲಾಗುತ್ತದೆ ಎಂದು ಕಾರಾಗೃಹ ಇಲಾಖೆಯ ಮುಖ್ಯಸ್ಥ ಮನೀಷ್‌ ಕರ್ಬೀಕರ್‌ ಮಾಹಿತಿ ನೀಡಿದ್ದಾರೆ.

20 ಲ್ಯಾಂಡ್‌ಲೈನ್‌ಗೆ ಅಧಿಕಾರಿಗಳ ಬೇಡಿಕೆ: ಟಿಎಚ್‌ಸಿಬಿ ಟವರ್‌ಗಳ ಅಳವಡಿಕೆ ಹಿನ್ನಲೆಯಲ್ಲಿ ತಮ್ಮ ಕಚೇರಿ ಹಾಗೂ ಮನೆಗಳಿಗೆ ಹೆಚ್ಚುವರಿ 20 ಸ್ಥಿರ ದೂರವಾಣಿ (ಲ್ಯಾಂಡ್‌ ಲೈನ್‌) ಸಂಪರ್ಕ ಕಲ್ಪಿಸಿಕೊಡುವಂತೆ ಕೋರಿ ಕಾರಾಗೃಹ ಇಲಾಖೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಮೇಶ್‌ ಮನವಿ ಮಾಡಿದ್ದಾರೆ. ಟಿಎಚ್‌ಸಿಬಿ ಟವರ್‌ ಅಳವಡಿಸಿದರೆ ಜೈಲಿನ ಆವರಣ ಹಾಗೂ ಜೈಲಿಗೆ ಹೊಂದಿಕೊಂಡೇ ಇರುವ ವಸತಿ ಗೃಹದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕೂಡಾ ಮೊಬೈಲ್‌ ಬಳಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ದೂರವಾಣಿ ಸೌಲಭ್ಯಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

24 ಪುಟಗಳ ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ: ಪ್ರಿಯಕರನಿಗೆ 'ಐ ಲವ್ ಯೂ' ಸಂದೇಶ!

ರಾಜ್ಯದ ಜೈಲುಗಳಲ್ಲಿ ಅಕ್ರಮವಾಗಿ ಮೊಬೈಲ್‌ಗಳ ಬಳಕೆಗೆ ಸಂಪೂರ್ಣವಾಗಿ ನಿರ್ಬಂಧಿಸಲು ತಾಂತ್ರಿಕ ತಜ್ಞರ ಅಭಿಪ್ರಾಯ ಟಿಎಚ್‌ಸಿಬಿ ಯೋಜನೆ ರೂಪಿಸಿದ್ದೇವೆ. ಈ ಟವರ್‌ಗಳ ಸ್ಥಾಪನೆಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
- ಮನೀಷ್‌ ಕರ್ಬೀಕರ್‌, ಮುಖ್ಯಸ್ಥ, ರಾಜ್ಯ ಕಾರಾಗೃಹ ಹಾಗೂ ಸುಧಾರಣಾ ಇಲಾಖೆ