ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಿ: ಯಶ್‌ಪಾಲ್ ಸುವರ್ಣ ಮನವಿ
ಶ್ರೀ ರಾಮ ಮಂದಿರ ಉದ್ಘಾಟನೆ ಜನವರಿ 22ರಂದು ನಡೆಯಲಿದ್ದು, ಅಂದು ರಾಜ್ಯದ ಜನತೆಗೆ ಹಬ್ಬವನ್ನಾಗಿ ಆಚರಣೆ ಮಾಡಲು ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಶಾಸಕ ಯಶ್‌ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
ಉಡುಪಿ (ಜ.01): ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಇಡೀ ದೇಶವೇ ಸಡಗರದಲ್ಲಿ ಮುಳುಗಿದೆ. ಶ್ರೀ ರಾಮ ಮಂದಿರ ಉದ್ಘಾಟನೆ ಜನವರಿ 22ರಂದು ನಡೆಯಲಿದೆ. ಆದ್ದರಿಂದ ರಾಮ ಮಂದಿರಕ್ಕೆ ಹೋಗಿಬರಲು ಹಾಗೂ ಎಲ್ಲರೂ ರಾಮ ಮಂದಿರ ಉದ್ಘಾಟನೆ ದಿನವನ್ನು ಹಬ್ಬವಾಗಿ ಆಚರಣೆ ಮಾಡಲು ಅನುಕೂಲ ಆಗುವಂತೆ ಜ.22 ರಂದು ಸಾರ್ವತ್ರಿಕ ರಜಾ ದಿನವೆಂದು ಘೋಷಣೆ ಮಾಡುವಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರವನ್ನು ಬರೆದಿರುವ ಅವರು, ಕೋಟ್ಯಂತರ ಭಾರತೀಯರ ಶತಮಾನಗಳ ಕನಸು ಜನವರಿ 22ರಂದು ನನಸಾಗುತ್ತಿದೆ. ಹಿಂದೂಗಳ ಶ್ರದ್ಧಾ ಭಕ್ತಿ ಕೇಂದ್ರವಾದ ಅಯೋಧ್ಯೆತಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯೊಂದಿಗೆ ಭವ್ಯ ರಾಮ ಮಂದಿರ ಉದ್ಘಾಟನೆ ಆಗುತ್ತದೆ. ಶ್ರೀರಾಮ ಮಂದಿರದ ಲೋಕಾರ್ಪಣೆಯು ಭಕ್ತರ ಭಾವನಾತ್ಮಕ ಮತ್ತು ಧಾರ್ಮಿಕತೆಯ ಐತಿಹಾಸಿಕ ಕ್ಷಣವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಈ ಪೂಜ್ಯ ದಿನವನ್ನು ದೇಶಾದ್ಯಂತ ದೇವಸ್ಥಾನ, ಮಂದಿರ, ಸಂಘ ಸಂಸ್ತೆಗಳು ಮತ್ತು ಮನೆ ಮನಗಳಲ್ಲಿ ರಾಮ ಜ್ಯೋತಿ ಬೆಳಗಿಸುವುದರೊಂದಿಗೆ ವಿಶೇಷ ಪೂಜೆಗಳು, ಭಜನಾ ಸಂಕೀರ್ತನೆಗಳು ಹಾಗೂ ಅನ್ನ ಸಂತರ್ಪಣೆಗಳ ಮೂಲಕ ಅತ್ಯಂತ ಸಂಭ್ರಮ ಸಡಗರದಿಂದ ದೀಪಾವಳಿಯ ಹಬ್ಬದಂತೆ ಆಚರಿಸಲು ಕೋಟ್ಯಂತರ ಶ್ರೀರಾಮ ಭಕ್ತರು ಇಚ್ಛಿಸಿರುತ್ತಾರೆ.
ಕ್ಯೂಆರ್ ಕೋಡ್ ಮೂಲಕ ರಾಮ ಮಂದಿರ ದೇಣಿಗೆ ಸಂಗ್ರಹ ವಂಚನೆ ಬಯಲು, VHP ಎಚ್ಚರಿಕೆ!
ಆದ್ದರಿಂದ ಈ ರಾಮಮಂದಿರ ಲೋಕಾರ್ಪಣೆಯ ದಿನದಂದು ಶ್ರೀರಾಮ ದೇವರ ಸೇವೆಯಲ್ಲಿ ಪಾಲ್ಗೊಂಡು ಮತ್ತು ದೇವರ ಕೃಪೆಗೆ ಪಾತ್ರರಾಗಲು ಅಯೋಧ್ಯೆ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ದಿನಾಂಕ 22/01.2024ರ ಸೋಮವಾರ ಶಾಲಾ, ಕಾಲೇಜು, ಸರ್ಕಾರಿ ಕಚೇರಿ ಹಾಗೂ ಬ್ಯಾಂಕ್ ಮತ್ತಿತರ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮನವಿ ಮಾಡಿದ್ದಾರೆ.
ಆಯೋಧ್ಯೆ ತೆರಳಿದ ಮೊದಲ ವಿಮಾನದಲ್ಲಿ ಪ್ರಯಾಣಿಕರಿಂದ ಹನುಮಾನ್ ಚಾಲೀಸ ಪಠಣ!
ಆಯೋಧ್ಯೆ ರಾಮಮಂದಿರ ಉದ್ಘಾಟನೆಗೆ ನನಗೆ ಆಹ್ವಾನ ಬಂದಿಲ್ಲ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ನನಗೆ ಇನ್ನೂ ಆಹ್ವಾನ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಈ ಕುರಿತು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಶದ ಹಲವಾರು ಪ್ರಮುಖ ವ್ಯಕ್ತಿಗಳು ಮತ್ತು ರಾಜಕೀಯ ನಾಯಕರನ್ನು ಈ ಮಹಾಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಆದರೆ ಇಂದಿನವರೆಗೂ ನನಗೆ ಯಾವುದೇ ಆಹ್ವಾನ ಬಂದಿಲ್ಲ, ಆಹ್ವಾನ ಬಂದ ನಂತರ ಹೋಗಬೇಕೋ ಬೇಡವೋ ಎಂಬ ಬಗ್ಗೆ ಯೋಚಿಸುತ್ತೇನೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು.