ಬೆಂಗಳೂರು(ಆ.13):  ನಾವು ಬಾಲ್ಯದಿಂದ ಧರ್ಮಗಳ ಭೇದವಿಲ್ಲದೆ ಹುಟ್ಟಿಗೆ ಬೆಳೆದವರು. ನಮ್ಮ ಮನೆ ಮೇಲೆ ದಾಳಿ ಆಘಾತ ತಂದಿದೆ. ರಾತ್ರಿ 15 ನಿಮಿಷ ತಡವಾಗಿದ್ದರೂ ನಾಲ್ವರು ಮೊಮ್ಮಕ್ಕಳು ಸೇರಿ ಇಡೀ ಕುಟುಂಬ ಬಲಿಯಾಗುತ್ತಿದ್ದೆವು. ಒಂದೆಡೆ ಮುಸಲ್ಮಾನರು ದಾಳಿ ನಡೆಸಿದರೆ, ಮತ್ತೊಂದೆಡೆ ಅದೇ ಮುಸ್ಲಿಂ ಜನರಿಂದ ನಾನು ಬದುಕು ಉಳಿದಿದೆ..!

"

ಇವು ಇಸ್ಲಾಂ ಧರ್ಮ ಗುರು ಮಹಮ್ಮದ್‌ ಪೈಗಂಬರ್‌ ಕುರಿತು ತಮ್ಮ ಪುತ್ರನ ವಿವಾದಿತ ಫೇಸ್‌ಬುಕ್‌ ಪೋಸ್ಟ್‌ ಹಿನ್ನೆಲೆಯಲ್ಲಿ ನಡೆದ ದುಷ್ಕರ್ಮಿಗಳ ದಾಳಿ ವೇಳೆ ಅಚ್ಚರಿ ರೀತಿಯಲ್ಲಿ ಪರಾದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕ ಜಯಂತಿ ನುಡಿಗಳು.

ದಾಳಿಯಿಂದ ಬೆಂದು ಹೋದ ಮನೆಯಲ್ಲಿ ಅಳಿದುಳಿದ ವಸ್ತುಗಳನ್ನು ಹೆಕ್ಕಿ ಜೋಪಾನ ಮಾಡುತ್ತಿದ್ದ ಜಯಂತಿ ಅವರನ್ನು ಭೇಟಿಯಾದ ‘ಕನ್ನಡಪ್ರಭ’ ಜತೆ ತಾವು ರಾತ್ರಿ ಎದುರಿಸಿದ ಅನಿರೀಕ್ಷಿತ ಭಯಂಕರ ಗಳಿಗೆಯನ್ನು ವಿವರಿಸುತ್ತಲೇ ಕಣ್ತುಂಬಿಕೊಂಡರು.

ಕಿಡಿಗೇಡಿಗಳಿಗೆ ಅಪರಿಚಿತನಿಂದ ಹಣ ಹಂಚಿಕೆ? ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಜಯಂತಿ ಅವರ ಭಾವುಕ ನುಡಿಗಳು ಹೀಗಿವೆ.

ನಾವು ಹುಟ್ಟಿ ಬೆಳೆದಿದ್ದೆಲ್ಲ ಕಾವಲ್‌ಭೈರಸಂದ್ರದಲ್ಲೇ. ಮದುವೆಯಾದ ಬಳಿಕ ಆರೋಗ್ಯ ಇಲಾಖೆಯಲ್ಲಿ ನೌಕರಿಯಲ್ಲಿದ್ದ ಪತಿ, 40 ವರ್ಷಗಳ ಹಿಂದೆ ಇಲ್ಲೇ ಮನೆ ಕಟ್ಟಿಸಿದರು. ನಮ್ಮದು ಹಿಂದೂ-ಮುಸ್ಲಿಂ ಎಂಬ ಧರ್ಮ ಭೇದವಿಲ್ಲದ ಅನ್ಯೋನ್ಯ ಬದುಕು. ನನ್ನ ಮಗ ನವೀನ್‌ ಸಾಧು ಸ್ವಭಾವದವನು. ಯಾವುದೇ ಗಲಾಟೆ ತಂಟೆಗಳಿಗೆ ಹೋದವನಲ್ಲ. ನನ್ನ ತಮ್ಮ ಅಖಂಡ ಶ್ರೀನಿವಾಸಮೂರ್ತಿ ಎರಡು ಬಾರಿ ಶಾಸಕನಾಗಿದ್ದಾನೆ. ಆತನೊಂದಿಗೆ ಮುಸ್ಸಿಂ ಸಮುದಾಯವದರು ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ನಮ್ಮ ಕುಟುಂಬದಲ್ಲಿ ನಾಲ್ವರು ಕಾರ್ಪೋರೇಟ್‌ಗಳಾಗಿದ್ದಾರೆ. ಆದರೆ ರಾತ್ರಿ ನಡೆದ ಘಟನೆ ನಿಜಕ್ಕೂ ನೋವು ತಂದಿದೆ. ಅಷ್ಟೇ ಮನದಲ್ಲಿ ಆಘಾತ ಮಾಡಿದೆ. ನನ್ನ ಮಗ ಏನೋ ಫೇಸ್‌ಬುಕ್‌ನಲ್ಲಿ ಹಾಕಿದ ಅಂತ ಕೆಲವರು ಗಲಾಟೆ ಮಾಡಿದ್ದಾರೆ. ಇದರ ಹಿಂದೆ ನಿಜಕ್ಕೂ ರಾಜಕೀಯ ಸಂಚು ಅಡಗಿದೆ. ಘಟನೆಯನ್ನು ನೆನೆದರೆ ಈಗಲೂ ಭಯವಾಗುತ್ತದೆ ಎಂದು ಜಯಂತಿ ಕಣ್ಣೀರಾದರು.

ಮೂರು ತಿಂಗಳ ಹಿಂದಷ್ಟೆ ನವೀನ್‌ಗೆ ವಿವಾಹವಾಗಿದೆ. ಸಂಜೆ ದಂಪತಿ ಹೊರ ಹೋಗಿದ್ದರು. ವರ ಮಹಾಲಕ್ಷ್ಮೀ ಹಬ್ಬವನ್ನು ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸುತ್ತೇವೆ. ಅಂತೆಯೇ ಹಬ್ಬಕ್ಕೆ ಮಕ್ಕಳು, ಮೊಮ್ಮಕ್ಕಳು ಎಲ್ಲ ಬಂದಿದ್ದರು. ರಾತ್ರಿ 8.15 ಗಂಟೆ ಸುಮಾರಿಗೆ ಯಾರೋ ಮನೆ ಮೇಲೆ ಕಲ್ಲು ತೂರಾಟ ನಡೆಸಿದರು. ಭಯವಾಯಿತು. ತಕ್ಷಣವೇ ಮನೆಯಲ್ಲಿದ್ದ ಮೊಮ್ಮಕ್ಕಳು ಸೇರಿದಂತೆ 12 ಮಂದಿಯನ್ನು ಮಹಡಿ ಮೂಲಕ ಪಕ್ಕದ ಮನೆಗೆ ಕಳುಹಿಸಿ ನಾನೊಬ್ಬಳೇ ಉಳಿದೆ.

ಡಿ.ಜೆ.ಹಳ್ಳಿ ದಾಂಧಲೆ: ಕಾಂಪೌಂಡ್‌ ಒಡೆದು ನಮ್ಮವರ ರಕ್ಷಿಸಿದೆವು, ಹಿರಿಯ ಅಧಿಕಾರಿ

ನನ್ನನ್ನೇನು ಮಾಡುತ್ತಾರೆ ಎಂಬ ಭಾವನೆ ಇತ್ತು. ಅಲ್ಲದೆ ಬೀರುವಿನಲ್ಲಿ ಹಬ್ಬಕ್ಕೆ ಸಲುವಾಗಿ ಬ್ಯಾಂಕ್‌ನಿಂದ ತಂದಿದ್ದ 5 ಲಕ್ಷ ಹಣ ಹಾಗೂ ಆಭರಣಗಳಿದ್ದವು. ಆದರೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಏಕಾಏಕಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದರು. ರೂಮಿನಲ್ಲಿದ್ದ ನನ್ನನ್ನು ಸುತ್ತುವರೆದರು. ಅವರೆಲ್ಲ ಅಪರಿಚಿತರು. ನಮ್ಮೊಂದಿಗೆ ಬೆಳೆದವರಲ್ಲ. ತಕ್ಷಣವೇ ಸ್ಥಳೀಯ ಕೆಲವು ಮುಸ್ಲಿಂ ಹುಡುಗರು ಬಂದು, ಅಕ್ಕ ನೀವು ಮೊದಲು ಹೊರಡಿ. ಇಲ್ಲವೆಂದರೆ ಸಾಯಿಸಿ ಬಿಡುತ್ತಾರೆ ಅಂತ ಹೇಳಿ ನನ್ನನ್ನು ಬಲವಂತವಾಗಿ ಮನೆಯಿಂದ ಹೊರಗೆ ಕರೆತಂದರು ಎಂದು ವಿವರಿಸಿದರು.

ಬಳಿಕ ಮನೆಯಲ್ಲಿ ಸಿಕ್ಕಿದ ವಸ್ತುಗಳನ್ನೆಲ್ಲ ಧ್ವಂಸ ಮಾಡಿದರು. ಬೀರುವಿನಲ್ಲಿದ್ದ ಒಡವೆ ಹಾಗೂ ಹಣವನ್ನು ದೋಚಿದರು. ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದರು. ಹೊರಗಡೆ ನಿಂತಿದ್ದ ಕಾರು ಹಾಗೂ ಬೈಕ್‌ಗಳು ಬೆಂಕಿಗೆ ಬೆಂದವು. ಪಕ್ಕದ ಬಾಡಿಗೆದಾರರ ಮನೆ ನುಗ್ಗಿ ದಾಂಧಲೆ ನಡೆಸಿದರು. ಕೆಲ ಹೊತ್ತಿನ ಬಳಿಕ ಪೊಲೀಸರು ಬಂದ್ರು. ಆಗಲೇ ನಮಗೆ ಜೀವ ಮತ್ತೆ ಬಂದಂತಾಯಿತು. ರಾತ್ರಿಯೇ ಆಯುಕ್ತರು ಬಂದು ಧೈರ್ಯ ಹೇಳಿದರು. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಆತನ ಮೊಬೈಲ್‌ ಅನ್ನು ಕದ್ದು ಯಾರೋ ಕಿಡಿಗೇಡಿ ಕೃತ್ಯ ಎಸಗಿದ್ದಾರೆ. ತಮ್ಮ ಮೇಲಿನ ರಾಜಕೀಯ ಜಿದ್ದಿಗೆ ನಾವು ಬಲಿಯಾಗಿದ್ದೇವೆ ಎಂದು ಜಯಂತಿ ಭಾವುಕರಾದರು.