ಡಿ.ಜೆ.ಹಳ್ಳಿ ದಾಂಧಲೆ: ಕಾಂಪೌಂಡ್ ಒಡೆದು ನಮ್ಮವರ ರಕ್ಷಿಸಿದೆವು, ಹಿರಿಯ ಅಧಿಕಾರಿ
ಠಾಣೆ ಹೊರಗಡೆ ಉದ್ರಿಕ್ತರ ಗುಂಪು ನೆರೆದಿತ್ತು: ಹಿರಿಯ ಅಧಿಕಾರಿ|ಗಲಭೆ ಶುರುವಾದಾಗ ಡಿ.ಜೆ.ಹಳ್ಳಿ ಠಾಣೆಯಲ್ಲಿ 15 ಸಿಬ್ಬಂದಿ ಇದ್ದರು| ಠಾಣೆ ನೆಲಮಹಡಿಗೆ ನುಗ್ಗಿ ಬೆಂಕಿ ಹಚ್ಚಿದ್ದ ಉದ್ರಿಕ್ತರು|
ಬೆಂಗಳೂರು(ಆ.13): ಡಿ.ಜೆ.ಹಳ್ಳಿ ಠಾಣೆಯಲ್ಲಿ 15 ಸಿಬ್ಬಂದಿ ಸಿಲುಕಿದ್ದರು. ಹೊರಗಡೆಗೆ ಉದ್ರಿಕ್ತರ ಗುಂಪು ನೆರೆದಿತ್ತು. ರಕ್ಷಣೆಗೆ ತೆರಳಲು ಠಾಣೆಗೆ ಸಾಗುವ ದಾರಿಯನ್ನೇ ದುಷ್ಕರ್ಮಿಗಳು ಬಂದ್ ಮಾಡಿದ್ದರು. ಕೊನೆಗೆ ಕಾಂಪೌಂಡ್ ಒಡೆದು ಠಾಣೆ ಆವರಣಕ್ಕೆ ಬರಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಮಗೆ ರಾತ್ರಿ 9.20 ಗಂಟೆಗೆ ಗಲಭೆ ಬಗ್ಗೆ ಮಾಹಿತಿ ಸಿಕ್ಕಿತು. ಅಷ್ಟರಲ್ಲಿ ಠಾಣೆ ಬಳಿ ಬರುವಂತೆ ಆಯುಕ್ತರ ಸೂಚನೆ ಬಂತು. ತಕ್ಷಣ ಘಟನಾ ಸ್ಥಳಕ್ಕೆ ಹೊರಟು ಬಂದೆ. ಆದರೆ ಇಲ್ಲಿ ನೋಡಿದರೆ ಪರಿಸ್ಥಿತಿ ಭಾರಿ ಆತಂಕಕಾರಿಯಾಗಿತ್ತು. ಎಲ್ಲೆಲ್ಲೂ ಕಲ್ಲು ತೂರಾಟ, ಲಾಂಗು ಮಚ್ಚುಗಳನ್ನು ಹಿಡಿದು ದುಷ್ಕರ್ಮಿಗಳು ದಾಂಧಲೆ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದರು.
ಡಿಜೆ ಹಳ್ಳಿ ಗಲಭೆ ಹೊಣೆಯನ್ನು ಪೊಲೀಸರ ತಲೆಗೆ ಕಟ್ಟಿದ SDPI
ಗಲಭೆ ಶುರುವಾದಾಗ ಡಿ.ಜೆ.ಹಳ್ಳಿ ಠಾಣೆಯಲ್ಲಿ 15 ಸಿಬ್ಬಂದಿ ಇದ್ದರು. ಆದರೆ ಉದ್ರಿಕ್ತರ ನೂರಾರು ಸಂಖ್ಯೆಯಲ್ಲಿದ್ದರು. ಠಾಣೆ ನೆಲಮಹಡಿಗೆ ನುಗ್ಗಿ ಬೆಂಕಿ ಹಚ್ಚಿದರು. ಆದರೆ ಠಾಣೆಯಲ್ಲಿ ಸಿಲುಕಿದ ಪೊಲೀಸರ ರಕ್ಷಣೆಗೆ ಹೋಗೋಣವೆಂದರೆ ದಾರಿಯಲ್ಲಿ ಸೈಜ್ ಕಲ್ಲುಗಳನ್ನು ಹಾಕಿದ್ದರು. ಟೈರ್‌ಗಳಿಗೆ ಬೆಂಕಿ ಹಚ್ಚಿದ್ದರು. ಕೂಡಲೇ ಠಾಣೆ ಹಿಂಬದಿಯ ಕಾಂಪೌಂಡ್ ಒಡೆದು ಆಯುಕ್ತರನ್ನು ಕರೆದುಕೊಂಡು 25 ಪೊಲೀಸರ ಜತೆ ಠಾಣೆ ಬಳಿಗೆ ತೆರಳಿದೆ. ಆಗ ಎರಡ್ಮೂರು ಬಾರಿ ನಮ್ಮನ್ನು ಹಿಮ್ಮೆಟ್ಟಿಸಲು ದುಷ್ಕರ್ಮಿಗಳು ಯತ್ನಿಸಿದರು. ಆಗ ಬಲಪ್ರಯೋಗ ನಡೆಸಿ ಅವರನ್ನು ಠಾಣೆ ಆವರಣದಿಂದ ಹೊರದಬ್ಬಿ ಗೇಟ್ ಹಾಕಲಾಯಿತು. ಆ ವೇಳೆಗೆ ಬಂದ ಶಾಸಕ ಜಮೀರ್ ಅಹಮ್ಮದ್ ಅವರು ಶಾಂತಿ ಕಾಪಾಡುವಂತೆ ಗಲಭೆಕೋರರಿಗೆ ಮನವಿ ಮಾಡುತ್ತಿದ್ದರು. ಆದರೆ ಶಾಸಕರ ಮಾತಿಗೆ ಬೆಲೆಗೆ ಕೊಡದೆ ಮತ್ತೆ ದಾಂಧೆಲೆಗೆ ದುಷ್ಕರ್ಮಿಗಳು ಮುಂದಾದರು. ಆಗ ಅನಿವಾರ್ಯವಾಗಿ ಗುಂಡು ಹಾರಿಸಲಾಯಿತು. ಗುಂಡು ಹಾರಿದ ಬಳಿಕ ಒಂದು ಗಂಟೆಯಲ್ಲೇ ಪರಿಸ್ಥಿತಿ ಹತೋಟಿಗೆ ಬಂತು ಎಂದು ಅಧಿಕಾರಿ ತಿಳಿಸಿದರು.