ಬೀದರ್ ತಾಲೂಕಿನ ಮಲ್ಕಾಪುರ ಗ್ರಾಮ ಸಭೆಯಲ್ಲಿ ಆಶ್ರಯ ಯೋಜನೆಯ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅರ್ಹರನ್ನು ಕೈಬಿಟ್ಟು ಅನರ್ಹರಿಗೆ ನಿವೇಶನ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸಭೆಯು ರಣರಂಗವಾಯ್ತು.
ಬೀದರ್ (ಜ.28): ಬೀದರ್ ತಾಲೂಕಿನ ಮಲ್ಕಾಪುರ ಗ್ರಾಮದಲ್ಲಿ ಇಂದು ನಡೆದ ಗ್ರಾಮ ಸಭೆಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು. ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ಘಟನೆ ನಡೆದಿದೆ.
ಹಣಬಲಕ್ಕೆ ಮಣಿದರೇ ಅಧಿಕಾರಿಗಳು? ಭ್ರಷ್ಟಾಚಾರದ ಗಂಭೀರ ಆರೋಪ
ಬಡವರಿಗಾಗಿ ಮೀಸಲಿಟ್ಟ ಸುಮಾರು 2.5 ಎಕರೆ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಲು ಇಂದು ಇಒ (EO) ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಆದರೆ, ಅರ್ಹ ಫಲಾನುಭವಿಗಳನ್ನು ಕೈಬಿಟ್ಟು, ಹಣಬಲ ಇರುವವರಿಗೆ ಮತ್ತು ಅನರ್ಹರಿಗೆ ನಿವೇಶನ ನೀಡಲಾಗುತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರ ಆಕ್ರೋಶ ಕಟ್ಟೆಯೊಡೆಯಿತು. 'ಹಣ ಪಡೆದು ಮನೆ ಆಯ್ಕೆ ಪ್ರಕ್ರಿಯೆಯಲ್ಲಿ ಮೋಸ ಮಾಡಲಾಗುತ್ತಿದೆ' ಎಂದು ಸಾರ್ವಜನಿಕರು ನೇರವಾಗಿಯೇ ಅಧಿಕಾರಿಗಳನ್ನು ಪ್ರಶ್ನಿಸಿದರು.
ಪಂಚಾಯತ್ ಅಧಿಕಾರಿಗಳು, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ
ಸಭೆಯ ಆರಂಭದಲ್ಲೇ ಆಯ್ಕೆ ಪಟ್ಟಿಯ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ತೀವ್ರ ಸ್ವರೂಪದ ಗಲಾಟೆ ನಡೆಯಿತು. ನೈಜ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜನರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ
ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳಕ್ಕೆ ಬೀದರ್ ಗ್ರಾಮೀಣ ಪೊಲೀಸರು ಧಾವಿಸಿದರು. ರೊಚ್ಚಿಗೆದ್ದಿದ್ದ ಗ್ರಾಮಸ್ಥರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸಾಕಷ್ಟು ಸಮಯದ ನಂತರ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತು. ಸದ್ಯ ಮಲ್ಕಾಪುರದಲ್ಲಿ ಬಿಗುವಿನ ವಾತಾವರಣವಿದ್ದು, ನಿವೇಶನ ಹಂಚಿಕೆ ಪ್ರಕ್ರಿಯೆ ಬಗ್ಗೆ ಗ್ರಾಮಸ್ಥರಲ್ಲಿ ಅಸಮಾಧಾನ ಮುಂದುವರಿದಿದೆ.


