ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವುದು ಉತ್ತಮ ನಿರ್ಧಾರ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಆದರೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ವಿರೋಧಿಸಿ, ಅಖಂಡ ಕರ್ನಾಟಕದ ಚಿಂತನೆಯೊಂದಿಗೆ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಅವರು ಕರೆ ನೀಡಿದರು.

ಬೆಳಗಾವಿ (ಡಿ.07): ರಾಜ್ಯದಲ್ಲಿ ಆಡಳಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವುದು ಗುಡ್ ನ್ಯೂಸ್ ಆಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೂ ಮಾತನಾಡಿದ್ದು, ಸ್ಥಳೀಯ ಶಾಸಕರು ಒಗ್ಗಟ್ಟಿನಿಂದ ನಿರ್ಧಾರ ಕೈಗೊಳ್ಳಬೇಕಿದೆ. ಇನ್ನು ರಾಜ್ಯವನ್ನು ದಕ್ಷಿಣ ಮತ್ತು ಉತ್ತರ ಕರ್ನಾಟಕ ಎಂದು ವಿಭಜನೆ ಮಾಡುವುದು ಸರಿಯಲ್ಲ. ನಾವೆಲ್ಲರೂ ಅಖಂಡ ಕರ್ನಾಟಕ ಚಿಂತನೆ ಇಟ್ಟುಕೊಂಡೇ ಅಭಿವೃದ್ಧಿ ಕಡೆಗೆ ಗಮಗ ಹರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಬೆಳಗಾವಿ ಮತ್ತು ಚಿಕ್ಕೋಡಿ ಎಂದು ಎರಡು ಜಿಲ್ಲೆಗಳನ್ನು ರಚಿಸುವ ವಿಚಾರದ ಬಗ್ಗೆ ಮಾತನಾಡಿದ ಸಚಿವೆ ಹೆಬ್ಬಾಳ್ಕರ್ ಅವರು, 'ಮಂಗಳೂರಿಗೆ ಹೋಗುವಾಗ ನಾನು ಮತ್ತು ಸಚಿವ ಸತೀಶ್ ಜಾರಕಿಹೋಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇವೆ. ಹೊಸ ಜಿಲ್ಲೆ ರಚನೆ ಬಗ್ಗೆ ಸಿಎಂ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಈ ಬಾರಿ ಸ್ಥಳೀಯ ಶಾಸಕರ ಜೊತೆ ಮಾತನಾಡಿ, ಆಡಳಿತಾತ್ಮಕ ಅನುಕೂಲಕ್ಕಾಗಿ ಜಿಲ್ಲೆಯ ವಿಭಜನೆಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಿಎಂ ಭರವಸೆ ನೀಡಿದ್ದಾರೆ. 'ಕೆಲವರು ವಿಭಜನೆಗೆ ಪರ-ವಿರೋಧ ಇರುತ್ತಾರೆ. ಆದರೆ, ಆಡಳಿತ ದೃಷ್ಟಿಯಿಂದ ಈ ವಿಭಜನೆ ವಿಚಾರವು ಒಂದು ಉತ್ತಮ ನಿರ್ಧಾರ (Good News) ಆಗಲಿದೆ' ಎಂದು ಅಭಿಪ್ರಾಯಪಟ್ಟರು.

ಪ್ರತ್ಯೇಕ ರಾಜ್ಯಕ್ಕೆ ವಿರೋಧ, ಅಭಿವೃದ್ಧಿಗೆ ಒತ್ತು

ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ವಿಭಜಿಸುವ ಮತ್ತು ಪ್ರತ್ಯೇಕ ಬಜೆಟ್ ಮಂಡಿಸಬೇಕೆಂಬ ಒತ್ತಾಯದ ಕುರಿತು ಮಾತನಾಡಿದ ಸಚಿವರು, 'ನಮ್ಮ ಚಿಂತನೆ ಯಾವಾಗಲೂ ಅಖಂಡ ಕರ್ನಾಟಕದ ಪರವಾಗಿದೆ. ಅಖಂಡ ಕರ್ನಾಟಕ ನಮ್ಮ ಹೆಮ್ಮೆ. ಇಲ್ಲಿ ಉತ್ತರ, ದಕ್ಷಿಣ ಕರ್ನಾಟಕ ಎಂಬ ಪ್ರಶ್ನೆ ಬರಬಾರದು ಮತ್ತು ಹಾಗೆ ಮಾತನಾಡುವುದು ಸರಿಯಲ್ಲ. ಆದರೂ, ಸರ್ಕಾರದ ಮಟ್ಟದಲ್ಲಿ ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿ ಕಡೆಗೆ ಎಲ್ಲರೂ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದರು.

ಮುಂದಿನ 10 ದಿನಗಳಲ್ಲಿ ನಡೆಯುವ ಬೆಳಗಾವಿ ಅಧಿವೇಶನದಲ್ಲಿ, ಆಡಳಿತ ಮತ್ತು ವಿಪಕ್ಷದ ಶಾಸಕರು ರಾಜಕೀಯವನ್ನು ಪಕ್ಕಕ್ಕಿಟ್ಟು, ಈ ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿ, ನೀರಾವರಿ ಯೋಜನೆಗಳು ಮತ್ತು ಅನುದಾನದ ಕುರಿತು ಚರ್ಚಿಸಬೇಕು ಎಂದು ಹೆಬ್ಬಾಳ್ಕರ್ ಎಲ್ಲ ಜನಪ್ರತಿನಿಧಿಗಳಿಗೆ ಕರೆ ನೀಡಿದರು.

ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ: ನೈತಿಕತೆ ಇಲ್ಲ

ರೈತರ ಸಮಸ್ಯೆಗಳ ಕುರಿತು ಬಿಜೆಪಿ ಪಕ್ಷದವರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಪ್ರಯತ್ನಕ್ಕೆ ಪ್ರತಿಕ್ರಿಯಿಸಿದ ಸಚಿವೆ ಹೆಬ್ಬಾಳ್ಕರ್, 'ಬಿಜೆಪಿ ಅವರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ದೆಹಲಿಯಲ್ಲಿ ರೈತರು 11 ತಿಂಗಳು ಹೋರಾಟ ನಡೆಸಿದಾಗ 120 ಜನರು ಸತ್ತು ಹೋದರು. ಬಿಜೆಪಿ ಗೃಹ ಸಚಿವರ ಮಗನೇ ರೈತನ ಮೇಲೆ ಕಾರ್ ಹತ್ತಿಸಿ, ಹೋರಾಟವನ್ನು ಹತ್ತಿಕ್ಕಿದರು. ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿದವರೂ ಬಿಜೆಪಿ ಅವರೇ. ಮಹದಾಯಿ ಯೋಜನೆ ಆಗಿದೆ ಎಂದು ಚುನಾವಣೆಗೂ ಮುನ್ನ ಪೇಡ ಹಂಚಿ ಜನರಿಗೆ ಸುಳ್ಳು ಹೇಳಿದ್ದರು' ಎಂದು ಹಳೆಯ ಪ್ರಕರಣಗಳನ್ನು ಉಲ್ಲೇಖಿಸಿ ಟೀಕಿಸಿದರು.

ಇವತ್ತು ಬಿಜೆಪಿ ನಾಯಕರು ಮೊಸಳೆ ಕಣ್ಣೀರು ಸುರಿಸಿ ರೈತರ ಪರ ಎಂದು ಹೇಳಿದರೆ ರೈತರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಪುಕ್ಕಟ್ಟೆ ವಿದ್ಯುತ್ ಕೊಟ್ಟವರು ಯಾರು? ಜೈ ಜವಾನ್, ಜೈ ಕಿಸಾನ್ ಎಂದು ಹೇಳಿದವರು ಯಾರು? ರೈತರ ಬಗ್ಗೆ ಪ್ರಾಮಾಣಿಕ ಆಸಕ್ತಿ ಇರುವುದು ನಮಗೆ. ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.