ಬೆಂಗಳೂರು(ಆ.13):  ಕಾವಲ್‌ ಭೈರಸಂದ್ರದಲ್ಲಿರುವ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಾಕಿದ ಹಿನ್ನೆಲೆಯಲ್ಲಿ ಶಾಸಕರು ಹೋಟೆಲ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ.

"

ಮಂಗಳವಾರ ರಾತ್ರಿ ಅಖಂಡ ಶ್ರೀನಿವಾಸ್‌ ಮೂರ್ತಿ ಅವರ ಕುಟುಂಬ ದೇವಸ್ಥಾನಕ್ಕೆ ತೆರಳಿತ್ತು. ಈ ವೇಳೆ ಮನೆಗೆ ನುಗ್ಗಿದ ಕಿಡಿಗೇಡಿಗಳು ಮನೆಗೆ ಬೆಂಕಿ ಹಾಕಿದ್ದು, ಮನೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರು ಕ್ರೆಸೆಂಟ್‌ ರಸ್ತೆಯ ಹೋಟೆಲೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ. 

ಬೆಂಗಳೂರು ಗಲಭೆ: ಅಖಂಡ ಶ್ರೀನಿವಾಸ ಮೂರ್ತಿ–ಡಿಕೆ ಶಿವಕುಮಾರ್ ಭೇಟಿ

ಹೋಟೆಲ್‌ ಸಮೀಪ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇನ್ನು ಶಾಸಕರ ಪತ್ನಿ ಮತ್ತು ಮಕ್ಕಳು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಶಾಸಕರ ಕುಟುಂಬಸ್ಥರು ಆಶ್ರಯ ಪಡೆದಿರುವ ಸಂಬಂಧಿಕರ ಮನೆಗೂ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಘಟನೆಯಲ್ಲಿ ಶಾಸಕರ ಸ್ನೇಹಿತನ ನೆರೆ ಮನೆ ನಿವಾಸಿ ಮುನೇಗೌಡ ಅವರ ಮನೆಗೂ ನುಗ್ಗಿ ದಾಂಧಲೆ ನಡೆಸಿದ್ದಾರೆ. ಘಟನೆಯಲ್ಲಿ ಮುನೇಗೌಡರ ಮನೆಯಲ್ಲಿನ ಪೀಠೋಪಕರಣಗಳು ಕಿಡಿಗೇಡಿಗಳು ಕೃತ್ಯಕ್ಕೆ ಧ್ವಂಸವಾಗಿವೆ.