ಬೆಂಗಳೂರು ಮೆಟ್ರೊ ನಿಲ್ದಾಣಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಇ.ಮೇಲ್ ಕಳುಹಿಸಿದ್ದ 62 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಈತ, ಕುಚೇಷ್ಟೆಗಾಗಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಐಪಿ ಅಡ್ರೆಸ್ ಮೂಲಕ ಆರೋಪಿಯನ್ನು ಪತ್ತೆಹಚ್ಚಲಾಗಿದೆ.
ಬೆಂಗಳೂರು (ನ.20): ಮೆಟ್ರೊ ರೈಲು ನಿಲ್ದಾಣಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಇ.ಮೇಲ್ ಸಂದೇಶ ಕಳುಹಿಸಿದ್ದ ವ್ಯಕ್ತಿಯೊಬ್ಬನನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳತ್ತೂರು ನಿವಾಸಿ ರಾಜೀವ್ (62) ಬಂಧಿತನಾಗಿದ್ದು, ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಆತ ಕುಚೇಷ್ಟೆಗೆ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬಾಂಬ್ ಬೆದರಿಕೆಗೆ ಕಾರಣವೇನು?
ಹದಿನೈದು ವರ್ಷಗಳ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಮ್ಮ ಪತ್ನಿಯಿಂದ ರಾಜೀವ್ ಪರಿತ್ಯಕ್ತರಾಗಿದ್ದಾರೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಕಳೆದ ಐದು ವರ್ಷಗಳಿಂದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಖಿನ್ನತೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದು, ಬಾಡಿಗೆ ಕೋಣೆಯಲ್ಲಿ ಏಕಾಂಗಿಯಾಗಿ ನೆಲೆಸಿರುವ ಅವರಿಗೆ ಬಂಧುಗಳು ಹಾಗೂ ಸ್ನೇಹಿತರು ಆಸರೆ ಆಗಿದ್ದಾರೆ. ಆದರೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲು ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹುಸಿ ಬಾಂಬ್ ಕರೆ:
ನ.11 ರಂದು ರಾತ್ರಿ ಬಿಎಂಎಆರ್‌ಸಿಎಲ್ ಅಧಿಕೃತ ಇಮೇಲ್‌ಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ಬಂದಿತ್ತು. ಈ ಬಗ್ಗೆ ಕೂಡಲೇ ಪೊಲೀಸರಿಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು. ಮುಂಜಾಗ್ರತಾ ಕ್ರಮವಾಗಿ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ ಬಳಿಕ ಹುಸಿ ಬಾಂಬ್ ಬೆದರಿಕೆ ಎಂಬುದು ಖಚಿತವಾಯಿತು. ಕೊನೆಗೆ ಐಪಿ ಅಡ್ರೆಸ್ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ಮೂಲಗಳು ಹೇಳಿವೆ.


