Bangalore Metro Saves Life Again: ಬೆಂಗಳೂರಿನ ತೀವ್ರ ಸಂಚಾರ ದಟ್ಟಣೆಯ ನಡುವೆಯೂ, ತುರ್ತು ಹೃದಯ ಕಸಿ ಶಸ್ತ್ರಚಿಕಿತ್ಸೆಗಾಗಿ ಆಸ್ಟರ್ ಆರ್‌ವಿ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯವನ್ನು ಮೆಟ್ರೋ ಮೂಲಕ ಯಶಸ್ವಿಯಾಗಿ ಸಾಗಿಸಲಾಯಿತು. ಕೇವಲ 7 ನಿಮಿಷಗಳಲ್ಲಿ ತಲುಪಿತು.
ಬೆಂಗಳೂರು (ನ.18): ನಗರದ ಭಾರಿ ಸಂಚಾರ ದಟ್ಟಣೆಯ ನಡುವೆಯೂ ಜೀವ ಉಳಿಸುವ ಕಾರ್ಯಾಚರಣೆಗೆ ಬೆಂಗಳೂರು ಮೆಟ್ರೋ ಮತ್ತೊಮ್ಮೆ 'ಲೈಫ್‌ಲೈನ್' ಯಾಗಿ ಪರಿವರ್ತನೆಗೊಂಡಿದೆ. ನವೆಂಬರ್ 17ರ ಸೋಮವಾರ ಸಂಜೆ, ತುರ್ತು ಹೃದಯ ಕಸಿ ಶಸ್ತ್ರಚಿಕಿತ್ಸೆಗಾಗಿ ಆಸ್ಟರ್ ಆರ್‌ವಿ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಕ್ಕೆ ಜೀವಂತ ಮಾನವ ಹೃದಯವನ್ನು ಮೆಟ್ರೋ ಮಾರ್ಗವಾಗಿ ಯಶಸ್ವಿಯಾಗಿ ಸಾಗಿಸಲಾಯಿತು. ಇದು ಬೆಂಗಳೂರು ಮೆಟ್ರೋದಲ್ಲಿ ನಡೆದ ಐದನೇ ಯಶಸ್ವಿ ಅಂಗಾಂಗ ವರ್ಗಾವಣೆ ಕಾರ್ಯಾಚರಣೆಯಾಗಿದೆ.
ಪ್ರಯಾಣದ ಸಂಪೂರ್ಣ ವಿವರ ಇಲ್ಲಿದೆ:
ಸಂಜೆ 7:26ಕ್ಕೆ ಆರು ಸದಸ್ಯ ಬಳಗದ ವೈದ್ಯಕೀಯ ತಂಡವು ವಿಶೇಷ ಕಂಟೇನರ್‌ನಲ್ಲಿ ಹೃದಯವನ್ನು ಹೊತ್ತು ರಾಗಿಗುಡ್ಡ ಮೆಟ್ರೋ ನಿಲ್ದಾಣ ತಲುಪಿತು.
ಭದ್ರತಾ ಸಿಬ್ಬಂದಿ ಮತ್ತು ನಿಲ್ದಾಣ ಸಿಬ್ಬಂದಿ ತಕ್ಷಣ ಸಹಕಾರ ನೀಡಿ, ಎಲ್ಲ ತಪಾಸಣೆಗಳನ್ನು ವೇಗವಾಗಿ ಮುಗಿಸಿ ಕೇವಲ 3 ನಿಮಿಷಗಳಲ್ಲಿ (7:29ಕ್ಕೆ) ತಂಡವನ್ನು ಪ್ಲಾಟ್‌ಫಾರ್ಮ್‌ಗೆ ಕರೆದೊಯ್ದರು.
7:32ಕ್ಕೆ ತಂಡ ಮೆಟ್ರೋ ರೈಲಿಗೆ ಏರಿತು. ಪ್ರಯಾಣದುದ್ದಕ್ಕೂ ಭದ್ರತಾ ಸಿಬ್ಬಂದಿ ಜೊತೆಗಿದ್ದು ಯಾವುದೇ ಅಡೆತಡೆ ಇಲ್ಲದಂತೆ ನೋಡಿಕೊಂಡರು.
ರೈಲು ರಾತ್ರಿ 7:39ಕ್ಕೆ ಬೊಮ್ಮಸಂದ್ರ ನಿಲ್ದಾಣ ತಲುಪಿತು (ಕೇವಲ 7 ನಿಮಿಷಗಳ ಪ್ರಯಾಣ!).
ನಿಲ್ದಾಣದಿಂದ ತಕ್ಷಣವೇ ತಂಡವನ್ನು ಹೊರಗೆ ಕರೆದೊಯ್ಯಲಾಯಿತು; ಕಾಯುತ್ತಿದ್ದ ಆಂಬ್ಯುಲೆನ್ಸ್‌ನಲ್ಲಿ ಹೃದಯವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ರಾತ್ರಿ 8:12ಕ್ಕೆ ನಾರಾಯಣ ಹೃದಯಾಲಯ ತಲುಪಿ ಕಸಿ ತಂಡಕ್ಕೆ ಹೃದಯವನ್ನು ಸಮಯಕ್ಕೆ ಸರಿಯಾಗಿ ಒಪ್ಪಿಸಲಾಯಿತು.
ಈ ತುರ್ತು ವೈದ್ಯಕೀಯ ವರ್ಗಾವಣೆಯು ಈ ವರ್ಷದ ಆರಂಭದಲ್ಲಿ ಬಿಎಂಆರ್‌ಸಿಎಲ್ ಮತ್ತು ಆರೋಗ್ಯ ಇಲಾಖೆಯಿಂದ ಹೊರಡಿಸಲಾಗಿದ್ದ 'ಗ್ರೀನ್ ಕಾರಿಡಾರ್' ಜಂಟಿ ಕಾರ್ಯವಿಧಾನದಡಿ ನಡೆಯಿತು. ಅಂಗಾಂಗ ಕಸಿಗೆ ಸೂಕ್ತವಾದ ಸಮಯದೊಳಗೆ (ಗೋಲ್ಡನ್ ಅವರ್) ತಲುಪಿಸುವುದು ಅತಿ ಮುಖ್ಯ. ಬೆಳಗ್ಗೆ-ಸಂಜೆ ರಸ್ತೆ ಸಂಚಾರ ದಟ್ಟಣೆಯಲ್ಲೂ ಮೆಟ್ರೋ ಅತ್ಯಂತ ವಿಶ್ವಾಸಾರ್ಹ ಮಾರ್ಗವಾಗಿ ಸಾಬೀತಾಗುತ್ತಿದೆ.
ಜೀವ ಉಳಿಸುವ ತುರ್ತು ಸಂದರ್ಭಗಳಿಗೆ ನಮ್ಮ ಮೆಟ್ರೋ ಸದಾ ಸಿದ್ಧ!
ಬಿಎಂಆರ್‌ಸಿಎಲ್ ಪ್ರಕಟಣೆಯ ಪ್ರಕಾರ, ಅಂಗಾಂಗ ಕಸಿಗೆ ಸೂಕ್ತವಾಗಿ ಉಳಿಯುವಂತೆ ನೋಡಿಕೊಳ್ಳಲು ಅವುಗಳನ್ನು ತ್ವರಿತವಾಗಿ ಸಾಗಿಸುವ ಅಗತ್ಯವಿದ್ದ ಸ್ಪರ್ಶ ಆಸ್ಪತ್ರೆಯಿಂದ ಈ ವಿನಂತಿ ಬಂದಿತ್ತು. ಬೆಳಗಿನ ಸಮಯದಲ್ಲಿ ರಸ್ತೆ ಸಂಚಾರ ಅನಿರೀಕ್ಷಿತವಾಗಿದ್ದರಿಂದ, ತಂಡವು ಮೆಟ್ರೋದತ್ತ ಮುಖ ಮಾಡಿತ್ತು. ಅಂತಹ ತುರ್ತು ಸಂದರ್ಭಗಳಲ್ಲಿ 'ಜೀವ ಉಳಿಸುವ ಯಾವುದೇ ತುರ್ತು ಸಂದರ್ಭದಲ್ಲಿ ಬೆಂಗಳೂರು ಮೆಟ್ರೋ ಸದಾ ಸಿದ್ಧವಾಗಿದೆ. ನಗರದ ಜನರಿಗೆ ನಾವು ನಿಜವಾದ ಜೀವನರೇಖೆಯಾಗಿ ಮುಂದುವರಿಯುತ್ತೇವೆ' ಎಂದು ತಿಳಿಸಿದೆ. ಕಳೆದ ಎರಡು ವಾರಗಳಲ್ಲಿ ಮಾತ್ರವೇ ಮೆಟ್ರೋ ಮಾರ್ಗದಲ್ಲಿ ಹೃದಯ ಮತ್ತು ಶ್ವಾಸಕೋಶ ಸಾಗಾಟ ಮಾಡಲಾಗಿದ್ದು, ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ 'A human face ಎಂಬ ಪ್ರಶಂಸೆಗೆ ಬೆಂಗಳೂರು ಮೆಟ್ರೋ ಪಾತ್ರವಾಗುತ್ತಿದೆ.
