ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್‌ಗೆ ಕೇಂದ್ರದ ಕುಣಿಕೆ
ಇದು ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದತಿಯ ಮೊದಲ ಕ್ರಮವಾಗಿದೆ. ಒಂದು ವೇಳೆ ಅವರ ಪಾಸ್‌ಪೋರ್ಟ್ ರದ್ದಾದರೆ ಅವರು ವಿದೇಶದಲ್ಲಿ ನೆಲೆಸುವುದು ಕಾನೂನುಬಾಹಿರವಾಗಲಿದೆ. ಅವರು ಯಾವ ದೇಶದಲ್ಲಿದ್ದಾರೋ ಆ ದೇಶದ ಸರ್ಕಾರ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ.
ನವದೆಹಲಿ(ಮೇ.25): ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿ ವಿದೇಶಕ್ಕೆ ಪರಾರಿ ಆಗಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿದೇಶಾಂಗ ಸಚಿವಾಲಯವು ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡುವ ಕುರಿತು ಶೋಕಾಸ್ ನೋಟಿಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಪ್ರಕರಣದಲ್ಲಿ ಮೊದಲ ಬಾರಿ ಕೇಂದ್ರ ಕಠಿಣ ಕ್ರಮ ಅನುಸರಿಸಿದ್ದು, ಸಂಸದನಿಗೆ ಇದು ಸಂಕಷ್ಟ ತಂದೊಡ್ಡಬಹುದು ಎಂದು ವಿಶ್ಲೇಷಿಸಲಾಗಿದೆ.
ಪ್ರಜ್ವಲ್ ಅವರಿಗೆ ಇ-ಮೇಲ್ ಮೂಲಕ ನೋಟಿಸ್ ನೀಡಲಾಗಿದ್ದು, ‘ರಾಜ್ಯ ಸರ್ಕಾರದ ಕೋರಿಕೆಯಂತೆ ಏಕೆ ನಿಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಲು ಅಗತ್ಯ ಕ್ರಮ ಕೈಗೊಳ್ಳಬಾರದು’ ಎಂದು ಪ್ರಶ್ನಿಸಲಾಗಿದೆ ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯನವರೇ ನಿಮ್ಮ ಪಕ್ಕದಲ್ಲಿ 'ಸಿಡಿ ಶಿವು' ಕೂರಿಸಿಕೊಳ್ಳಲು ಆತ್ಮಸಾಕ್ಷಿ ಒಪ್ಪುತ್ತದೆಯೇ; ಹೆಚ್‌ಡಿಕೆ
‘ಇದು ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದತಿಯ ಮೊದಲ ಕ್ರಮವಾಗಿದೆ. ಒಂದು ವೇಳೆ ಅವರ ಪಾಸ್‌ಪೋರ್ಟ್ ರದ್ದಾದರೆ ಅವರು ವಿದೇಶದಲ್ಲಿ ನೆಲೆಸುವುದು ಕಾನೂನುಬಾಹಿರವಾಗಲಿದೆ. ಅವರು ಯಾವ ದೇಶದಲ್ಲಿದ್ದಾರೋ ಆ ದೇಶದ ಸರ್ಕಾರ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ’ ಎಂದು ಮೂಲಗಳು ಹೇಳಿವೆ.
ತಮ್ಮ ಮೇಲೆ ಲೈಂಗಿಕ ಹಗರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪ್ರಜ್ವಲ್ ಮತದಾನದ ಮರುದಿನ ಜರ್ಮನಿಗೆ ತೆರಳಿದ್ದಾರೆ ಎನ್ನಲಾಗಿದೆ. ಬಳಿಕ ಅವರ ಮೇಲೆ ಕರ್ನಾಟಕದ ವಿಶೇಷ ತನಿಖಾ ತಂಡ (ಎಸ್‌ಐಟಿ) ಶಿಫಾರಸಿನ ಮೇರೆಗೆ ಮೇಲೆ ಬ್ಲೂಕಾರ್ನರ್ ನೋಟಿಸ್ ನೀಡಲಾಗಿತ್ತು. ಬಳಿಕ ಲೈಂಗಿಕ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ಅವರ ಪಾಸ್‌ಪೋರ್ಟ್ ಅಮಾನ್ಯ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ವಿನಂತಿಸಿದ್ದರು. ಆ ಪ್ರಕಾರ ಈಗ ನೋಟಿಸ್ ನೀಡಲಾಗಿದೆ.
ಪ್ರಜ್ವಲ್ ಪಾಸ್ಪೋರ್ಟ್ ರದ್ದತಿಗೆ ಕೋರಿಕೆ ಬಂದಿದ್ದೇ ಮೇ 21ಕ್ಕೆ: ಕೇಂದ್ರ
ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್ಪೋರ್ಟ್ ರದ್ದತಿಗೆ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ‘ವಾಸ್ತವವಾಗಿ ನಮಗೆ ಅಂಥ ಕೋರಿಕೆ ಬಂದಿದ್ದೇ ಮೇ 21ರಂದು. ಕೋರಿಕೆ ಬಂದಾಕ್ಷಣ ನಾವು ಆ ಸಂಬಂಧ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ’ ಎಂದು ಸಚಿವರು ಹೇಳಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಜೈಶಂಕರ್, ‘ಯಾವುದೇ ಪಾಸ್ಪೋರ್ಟ್ ರದ್ದತಿಗೆ ನಾವು ಪಾಸ್ಪೋರ್ಟ್ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಬೇಕು. ಇಂಥ ಕ್ರಮ ಕೈಗೊಳ್ಳಲು ನಮಗೆ ನ್ಯಾಯಾಲಯ ಅಥವಾ ಪೊಲೀಸರಿಂದ ಮನವಿ ಸಲ್ಲಿಕೆಯಾಗಬೇಕು. ಪ್ರಜ್ವಲ್ ರೇವಣ್ಣ ಕುರಿತು ಕರ್ನಾಟಕದಿಂದ ನಮಗೆ ಕೋರಿಕೆ ಬಂದಿದ್ದೇ ಮೇ 21ರಂದು’ ಎಂದು ಸ್ಪಷ್ಟಪಡಿಸಿದರು.
'ಪ್ರಜ್ವಲ್ ಪರಾರಿಯಾಗುವ ಮುನ್ನ ನನ್ನ ಜೊತೆ ಮಾತಾಡಿಲ್ಲ' : ಆರ್ ಅಶೋಕ್ ಆರೋಪಕ್ಕೆ ಸಿಎಂ ಸ್ಪಷ್ಟನೆ
‘ನಮಗೆ ಕೋರಿಕೆ ಸಲ್ಲಿಕೆಯಾದ ಬೆನ್ನಲ್ಲೇ ನಾವು ಅದರ ಬಗ್ಗೆ ಕ್ರಮ ಕೈಗೊಂಡಿದ್ದೇವೆ. ಮೇ 23ರಂದು ನಾವು ಪಾಸ್ಪೋರ್ಟ್ ರದ್ದತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ’ ಎಂದು ಜೈಶಂಕರ್ ಸ್ಪಷ್ಟಪಡಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರವು ಪ್ರಜ್ವಲ್‌ರನ್ನು ರಕ್ಷಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪ ತಳ್ಳಿಹಾಕಿದ ಅವರು, ‘ಅವರೇ (ಕಾಂಗ್ರೆಸ್) ಮೊದಲು ಕ್ರಮ ಕೈಗೊಳ್ಳಲಿಲ್ಲ’ ಎಂದು ಕಿಡಿಕಾರಿದರು. ಪ್ರಜ್ವಲ್ ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳದ ತನಿಖೆಗೆ ಕರ್ನಾಟಕ ಸರ್ಕಾರ ಏ.27ರಂದು ಎಸ್‌ಐಟಿ ರಚಿಸಿದ ಬೆನ್ನಲ್ಲೇ, ಪ್ರಜ್ವಲ್ ಜರ್ಮನಿಗೆ ತೆರಳಿದ್ದರು. ಬಳಿಕ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.