ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಜಾರಿಗೊಳಿಸಿದೆ. ಸರ್ಕಾರ ಬಡವರ, ಹಿಂದುಳಿದವರಿಗೆ, ವಸತಿ ರಹಿತರ ಕಾಳಜಿಗೆ ವಿಶೇಷವಾಗಿ ಒತ್ತು ನೀಡಿದ್ದು, 2026ರ ಅಂತ್ಯದೊಳಗೆ ವಸತಿ ರಹಿತರಿಗೆ ಸೂರು ಕಲ್ಪಿಸಲಾಗುತ್ತದೆ
ಹೊಸಪೇಟೆ: ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಜಾರಿಗೊಳಿಸಿದೆ. ಸರ್ಕಾರ ಬಡವರ, ಹಿಂದುಳಿದವರಿಗೆ, ವಸತಿ ರಹಿತರ ಕಾಳಜಿಗೆ ವಿಶೇಷವಾಗಿ ಒತ್ತು ನೀಡಿದ್ದು, 2026ರ ಅಂತ್ಯದೊಳಗೆ ವಸತಿ ರಹಿತರಿಗೆ ಸೂರು ಕಲ್ಪಿಸಲಾಗುತ್ತದೆ. ಇದು ಸರ್ಕಾರದ ಆರನೇ ಗ್ಯಾರಂಟಿ ಎಂದು ವಕ್ಫ್, ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
42,345 ಮನೆ ಹಂಚಿಕೆ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ 2024ರ ಮಾರ್ಚ್ ನಲ್ಲಿ ವಿವಿಧ ಯೋಜನೆಗಳಡಿ 36,780 ಹಾಗೂ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 42,345 ಮನೆ ಹಂಚಿಕೆ ಮಾಡಲಾಗಿದ್ದು, ಒಟ್ಟಾರೆ 80 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಸಂಡೂರಿನಲ್ಲಿ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ₹1600 ಕೋಟಿ ಮತ್ತು ಕೊಪ್ಪಳದಲ್ಲಿ ₹1310 ಕೋಟಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ. ರಾಜೀವ್ ಗಾಂಧಿ ಮತ್ತು ಆಶ್ರಯ ಯೋಜನೆಯಡಿ ಬಡವರಿಗೆ, ವಸತಿ ರಹಿತರಿಗೆ ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ಸರ್ಕಾರದ ವತಿಯಿಂದಲೇ ಸೂರು ಕಲ್ಪಿಸಲಾಗುವುದು ಎಂದರು.
ಈಗಾಗಲೇ ಮುಖ್ಯಮಂತ್ರಿಗೆ ಸಮಗ್ರ ವರದಿ ಸಲ್ಲಿಸಲಾಗಿದ್ದು, ಅನುಮೋದನೆ ನೀಡುವ ಭರವಸೆ ಇದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಬಡಜನತೆಯ ಅನುಕೂಲವಾಗುವ ನಿಟ್ಟಿನಲ್ಲಿ 2016ರಲ್ಲಿ 1023 ಎಕರೆ ರಾಜೀವ್ ಗಾಂಧಿ ವಸತಿ ಯೋಜನೆಗೆ ನೀಡಿ ಬಡಜನರಿಗೆ ಸ್ವಂತ ನಿವಾಸ ಕಟ್ಟಿಕೊಳ್ಳಲು ಸಹಕಾರ ನೀಡಲಾಗಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ₹60 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ, ಮಧ್ಯಮ ವರ್ಗದವರಿಗೆ ಸಾಕಷ್ಟು ಅನುಕೂಲಗಳಾಗಿದೆ. ಈ ಯೋಜನೆಗಳಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದ್ದು ಆರ್ಥಿಕಮಟ್ಟ ಸುಧಾರಣೆಯಾಗಿ ಜೀವನಮಟ್ಟ ಸುಧಾರಿಸಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಲಿದೆ ಎಂದು ಟೀಕಿಸುವವರಿಗೆ ಅಭಿವೃದ್ಧಿಗಳ ಮೂಲಕ ಪ್ರತ್ಯುತ್ತರ ನೀಡಲಾಗುತ್ತಿದೆ ಎಂದರು.
ಚಿರು ಅವರಿಗೆ ₹50 ಸಾವಿರ ನಗದು ಬಹುಮಾನ
ರಾಜ್ಯ ಯುವ ಸಂಸತ್ ಭವನದ ಚರ್ಚಾ ಸ್ಪಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಚಿರು ಅವರಿಗೆ ₹50 ಸಾವಿರ ನಗದು ಬಹುಮಾನ ಹಾಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಪತ್ರಕರ್ತ ಲಕ್ಷ್ಮಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪರೇಡ್ ಕಮಾಂಡರ್ ಗೋವಿಂದ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಗೃಹರಕ್ಷದಳ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ಸೇರಿ ವಿವಿಧ ಶಾಲೆಗಳ ವಿದ್ಯಾರ್ಥಿಗಳ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ವಿವಿಧ ಶಾಲಾ ಮಕ್ಕಳಿಂದ ಕನ್ನಡ ಭಾಷೆ ಮತ್ತು ನಾಡು, ನುಡಿಯ ದೇಶ ಭಕ್ತಿ ಮೂಡಿಸುವ ನೃತ್ಯ ಸಂಯೋಜನೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು.
ನಗರಸಭೆ ಅಧ್ಯಕ್ಷ ಎನ್. ರೂಪೇಶಕುಮಾರ, ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶಿವಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಸಹಾಯಕ ಆಯುಕ್ತ ಪಿ.ವಿವೇಕಾನಂದ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.


