ಬೆಂಗಳೂರು(ಫೆ.14):ಸರ್ವರಿಗೂ ಸಮಾನತೆ ದೊರಕಿಸಿಕೊಡುವ ದೂರದೃಷ್ಟಿಯ ಕೇಂದ್ರ ಬಜೆಟನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ್ದು, ಇದರಿಂದ ದೇಶದ ಅಭಿವೃದ್ಧಿ ಖಚಿತ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಕೇಂದ್ರದ ಬಜೆಟ್‌ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೂ ಆದ್ಯತೆ ಕೊಡಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ. 33 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು, 1,197 ಕಿ.ಮೀ.ಗೆ ಸಂಬಂಧಿಸಿದಂತೆ 10,904 ಕೋಟಿ ಬಿಡುಗಡೆ ಮಾಡಲಾಗಿದೆ. 2021-22ನೇ ಸಾಲಿನಲ್ಲಿ ರಾಜ್ಯದಲ್ಲಿ .1,16,144 ಕೋಟಿ ಮೂಲಸೌಕರ್ಯ ವ್ಯವಸ್ಥೆ ನಿರ್ಮಾಣಗೊಳ್ಳಲಿದೆ. ಎರಡನೇ ಹಂತದ ಬೆಂಗಳೂರು ಮೆಟ್ರೋ ನಿರ್ಮಾಣ ಕಾಮಗಾರಿಗೆ .14,788 ಕೋಟಿ ಬಿಡುಗಡೆಯಾಗಿದೆ. ಬೆಂಗಳೂರು ಉಪನಗರ ಯೋಜನೆಗೆ .23,093 ಕೋಟಿ, ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ .4,870 ಕೋಟಿ ಅನುದಾನ, ತುಮಕೂರು ವಸಂತನರಸಾಪುರದಲ್ಲಿ ಕೈಗಾರಿಕಾ ಕಾರಿಡಾರ್‌ ನಿರ್ಮಾಣಕ್ಕೆ .7,725 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದರಿಂದ 2.8 ಲಕ್ಷ ಉದ್ಯೋಗಾವಕಾಶ ಲಭಿಸಲಿದೆ ಎಂದು ಮಾಹಿತಿ ನೀಡಿದರು.

ಸಾಮಾನ್ಯ ಜನರಿಗೆ ಸಂತಸದ ಸುದ್ದಿ ನೀಡಿದ ಸರ್ಕಾರ..!

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ.ನಾರಾಯಣ ಇತರರು ಉಪಸ್ಥಿತರಿದ್ದರು.

ರೈತರ ಕಲ್ಯಾಣಕ್ಕೆ ಬದ್ಧವಾದ ಬಜೆಟ್‌ ಇದಾಗಿದೆ. 16.5 ಲಕ್ಷ ಕೋಟಿ ರು. ಕೃಷಿ ಸಾಲ ವಿತರಣೆಯ ಗುರಿ ಇದೆ. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ 40 ಸಾವಿರ ಕೊಟಿ ರು. ಏರಿಕೆಯಾಗಿದೆ. ಸೂಕ್ಷ್ಮ ನೀರಾವರಿ ಯೋಜನೆಗಳಿಗೆ ಅನುದಾನ ಇಮ್ಮಡಿಯಾಗಿದ್ದು, 10 ಸಾವಿರ ಕೋಟಿ ರು. ನೀಡಲಾಗುತ್ತಿದೆ. ಆರೋಗ್ಯ ಮತ್ತು ಯೋಗಕ್ಷೇಮಕ್ಕೆ 2,23,846 ಕೋಟಿ ರು. ಹಂಚಿಕೆ ಮಾಡಲಾಗಿದೆ ಎಂದರು.