ಬೆಂಗಳೂರು(ಜ.30): ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ವಸತಿ ಕಲ್ಪಿಸುವ ಉದ್ದೇಶದಿಂದ ಮಾರ್ಚ್‌ನಲ್ಲಿ ಪ್ರಧಾನಿ ಟೌನ್‌ಶಿಪ್‌ಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಗೃಹ ಮಂಡಳಿ ಹೊರ ತಂದಿರುವ ಕ್ಯಾಲೆಂಡರ್‌ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 65 ಬಡಾವಣೆಗಳ ನಕ್ಷೆ ಮಂಜೂರಾತಿಯನ್ನು 21 ವರ್ಷದ ನಂತರ ಮಾಡಲಾಗಿದೆ. ಸಾಮಾನ್ಯ ಜನರಿಗೆ ನಿವೇಶನ ನೀಡುವ ಕಾರ್ಯ ಮಾಡಿದ್ದೇವೆ. ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ವಸತಿ ಕಲ್ಪಿಸುವ ಉದ್ದೇಶದಿಂದ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಮನೆಗಳನ್ನೊಳಗೊಂಡ ಟೌನ್‌ಶಿಪ್‌ ಮಾಡಲಾಗಿದೆ. ಅದಕ್ಕೆ ಪ್ರಧಾನಿ ಟೌನ್‌ಶಿಪ್‌ ಎಂದು ಕರೆದು ಮಾರ್ಚ್‌ ತಿಂಗಳಲ್ಲಿ ಚಾಲನೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಅರುಣ್‌ ಸಿಂಗ್ ಕೈಯಲ್ಲಿ ಕಚೇರಿ ಉದ್ಘಾಟನೆ: ಚರ್ಚೆಗೆ ಕಾರಣವಾದ ಸಚಿವರ ' ಶಕ್ತಿ ಪ್ರದರ್ಶನ' ನಡೆ

7,700 ಕೋಟಿ ವೆಚ್ಚದಲ್ಲಿ ರಾಜ್ಯದ ವಿವಿಧ ಜಿಲ್ಲೆಯಲ್ಲಿಯೂ ವಸತಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ರಾಜೀವ್‌ಗಾಂಧಿ ವಸತಿ ಯೋಜನೆಯಲ್ಲಿ 30 ಸಾವಿರ ಮನೆಗಳು ಈಗಾಗಲೇ ಸಿದ್ಧವಾಗುತ್ತಿವೆ. ಶನಿವಾರ ಸ್ಥಳ ಪರಿಶೀಲನೆ ನಡೆಸಲಾಗುವುದು. ಏಪ್ರಿಲ್‌ ತಿಂಗಳೊಳಗೆ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 40 ಸಾವಿರ ಮನೆಗಳನ್ನು ನೀಡಲಾಗುವುದು ಎಂದ ಅವರು, ಮುಂದಿನ ವರ್ಷದಿಂದ ಕರ್ನಾಟಕ ಗೃಹ ಮಂಡಳಿ ಕೈಪಿಡಿ ನೂರರಷ್ಟು ಕನ್ನಡದಲ್ಲಿಯೇ ಇರಬೇಕು. ಮುದ್ರಣ ಗುಣಮಟ್ಟದಲ್ಲಿಯೂ ಉತ್ತಮ ಆಯ್ಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಈ ವೇಳೆ ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ, ಇಲಾಖಾ ಅಧಿಕಾರಿಗಳು ಭಾಗಿಯಾಗಿದ್ದರು.