ಬೆಂಗಳೂರು(ಆ.07):  ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತೀವ್ರ ನೆರೆ ಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ(ಶುಕ್ರವಾರ) ತಮ್ಮ ಜಿಲ್ಲೆಗಳಲ್ಲಿ ಮೊಕ್ಕಾಂ ಹೂಡುವುದಾಗಿ ಕೊಡಗು ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಚಿಕ್ಕಮಗಳೂರು ಜಿಲ್ಲೆ ಉಸ್ತುವಾರಿ ಸಿ.ಟಿ. ರವಿ ಹೇಳಿದ್ದಾರೆ.

"

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿ. ಸೋಮಣ್ಣ, ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ನೆರೆ ಹಾನಿ ಬಗ್ಗೆ ಮಾಹಿತಿ ಪಡೆದಿದ್ದೇನೆ. ಬ್ರಹ್ಮಗಿರಿ ಬೆಟ್ಟ ಕುಸಿದಿದೆ. ಅರ್ಚಕರು ಗುಡ್ಡ ಕುಸಿತಕ್ಕೆ ಸಿಲುಕಿದ್ದು, ಐದು ಮಂದಿ ನಾಪತ್ತೆಯಾಗಿದ್ದಾರೆ. ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಸುನಿಲ್‌ ಸ್ಥಳಕ್ಕೆ ಹೋಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿದ್ದು, ಇಂದಿನಿಂದ ಕೊಡಗು ಜಿಲ್ಲೆಯಲ್ಲೇ ಇರುತ್ತೇನೆ ಎಂದು ಹೇಳಿದರು.

ವರುಣನ ಆರ್ಭಟ: ಕೊಡಗು ಜಿಲ್ಲೆಯಲ್ಲಿ ಸತತ ಮೂರನೇ ವರ್ಷ ಪ್ರಕೃತಿ ದುರಂತ..!

ಚಿಕ್ಕಮಗಳೂರಿಗೆ ತೆರಳುತ್ತೇನೆ​: ರವಿ

ಚಿಕ್ಕಮಗಳೂರು ಜಿಲ್ಲೆ ಉಸ್ತುವಾರಿ ಸಚಿವ ಸಿ.ಟಿ. ರವಿ, ಶೃಂಗೇರಿ, ಮೂಡಿಗೆರೆ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಬಾಳೂರು, ದೇವರಮನೆ ಭಾಗದಲ್ಲಿ 300 ಮಿ.ಮೀ. ಮಳೆಯಾಗಿ 12 ಮನೆಗಳು ಜಖಂ ಆಗಿವೆ. ಕಳೆದ ವರ್ಷ ಭೂ ಕುಸಿತ ಉಂಟಾಗಿದೆ. ಇದೀಗ ಅದೇ ಜಾಗದಲ್ಲಿ ಮತ್ತೆ ಭೂ ಕುಸಿತವಾಗಿದೆ. ಎರಡು ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿವೆ. ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಶುಕ್ರವಾರದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮಹಾಮಳೆ: ಸಿಎಂ ಖಡಕ್‌ ಆದೇಶ

"