‘ನನ್ನ ಬೆಂಚ್‌ಮೆಟ್‌ ಆಗಿದ್ದ ಆತ ಐಪಿಎಸ್‌ ಪಾಸ್‌ ಮಾಡಿ ಶಿಸ್ತಿನ ಅಧಿಕಾರಿಯಾಗಿದ್ದು ನೋಡಿ ಅಚ್ಚರಿಯಾಗಿತ್ತು. ಆತನನ್ನು ದ.ಕ. ಜಿಲ್ಲೆಗೆ ಕರೆಸಿಕೊಳ್ಳಬೇಕು ಎಂದು ಯೋಚಿಸಿದ್ದೆ. ಆದರೆ ಈಗ ಆತನೇ ನಮ್ಮೊಂದಿಗೆ ಇಲ್ಲ...’

-ಶುಕ್ರವಾರ ಅನಾರೋಗ್ಯದಿಂದ ಮೃತಪಟ್ಟಐಪಿಎಸ್‌ ಅಧಿಕಾರಿ ಮಧುಕರ್‌ ಶೆಟ್ಟಿಯವರ ಬಗ್ಗೆ ಅಲೋಶಿಯಸ್‌ ಹೈಸ್ಕೂಲ್‌ನಲ್ಲಿ ಅವರ ಬೆಂಚ್‌ಮೇಟ್‌ ಆಗಿದ್ದ ಸಚಿವ ಯು.ಟಿ.ಖಾದರ್‌ ಹೇಳಿದ್ದು ಹೀಗೆ. ಈಗ ಆತ ಇಲ್ಲ ಎಂದರೆ ನಂಬಲೇ ಸಾಧ್ಯವಾಗುತ್ತಿಲ್ಲ ಎಂದು ಖಾದರ್‌ ಅವರು ತಮ್ಮ ಸಹಪಾಠಿ ಜೊತೆಗಿನ ಶಾಲಾ ದಿನಗಳನ್ನು ಶನಿವಾರ ‘ಕನ್ನಡಪ್ರಭ’ ಜೊತೆಗೆ ನೆನಪಿಸಿಕೊಂಡರು.

Brother in Arms: ಅಣ್ಣಾಮಲೈ ಕಂಡಂತೆ ಮಧುಕರ್ ಶೆಟ್ಟಿ!

ಸಚಿವ ಖಾದರ್‌ ಮತ್ತು ಡಾ.ಮಧುಕರ್‌ ಶೆಟ್ಟಿಮಂಗಳೂರಿನ ಅಲೋಶಿಯಸ್‌ ಹೈಸ್ಕೂಲ್‌ನಲ್ಲಿ 5ರಿಂದ 10ನೇ ತರಗತಿವರೆಗೆ ಒಟ್ಟಿಗೆ, ಒಂದೇ ಬೆಚ್‌ನಲ್ಲಿ ಕುಳಿತು ಕಲಿತವರು. ಮಧುಕರ್‌ ಶೆಟ್ಟಿಅವರು ಮೂಲತಃ ಕುಂದಾಪುರದವರಾದರೂ ತಂದೆ ವಡ್ಡರ್ಸೆ ರಘುರಾಮ ಶೆಟ್ಟಿ ಅವರು ಮಂಗಳೂರಿನಲ್ಲಿ ಪತ್ರಿಕಾ ಸಂಪಾದಕರಾಗಿದ್ದುದರಿಂದ ಮಧುಕರ್‌ ಅವರ ಶಾಲಾ ಜೀವನವೂ ಇಲ್ಲಿಯೇ ನಡೆಯಿತು ಎಂದು ನೆನಪನ್ನು ಬಿಚ್ಚುತ್ತಾರೆ ಖಾದರ್‌.

ಎಲ್ಲರದಲ್ಲೂ ಸೈ ಹುಡುಗ

ಮಧುಕರ್‌ ಶೆಟ್ಟಿಅವರು ತರಗತಿಯಲ್ಲಿ ಕಲಿಯುವುದರಲ್ಲಿ ಪ್ರಥಮ ಸ್ಥಾನದಲ್ಲಿದ್ದರು. ಸಾಂಸ್ಕೃತಿಕ ಚಟುವಟಿಕೆಯಲ್ಲೂ ಎತ್ತಿದ ಕೈ. ಹಾಗೆಯೇ ಕ್ರೀಡೆಯಲ್ಲೂ ಮಧುಕರ್‌ ಶೆಟ್ಟಿಸಾಧನೆ ಮಾಡಿದ್ದಾರೆ. ಶಾಲೆ ಬಿಟ್ಟಕೂಡಲೇ ಎಲ್ಲ ಮಕ್ಕಳು ಮನೆಗೆ ಓಡುತ್ತಿದ್ದರೆ, ನಾನು ಮತ್ತು ಮಧುಕರ್‌ ಶೆಟ್ಟಿಹೈಸ್ಕೂಲ್‌ ಮೈದಾನಕ್ಕೆ ಹೋಗಿ ಆಡುತ್ತಿದ್ದೆವು. ಲಾಂಗ್‌ಜಂಪ್‌, ಫುಟ್‌ಬಾಲ್‌, ಖೋಖೋ ಇಷ್ಟದ ಆಟವಾಗಿತ್ತು. ನಂತರ ಸ್ಕೌಟ್‌ಗೆ ಸೇರ್ಪಡೆಯಾಗಿ ರಾಜ್ಯದ ವಿವಿಧ ಕಡೆಗಳಲ್ಲಿ ಶಿಬಿರಗಳಲ್ಲಿ ಭಾಗವಹಿಸಿದ್ದೆವು ಎಂದು ಮೆಲುಕು ಹಾಕುತ್ತಾರೆ ಖಾದರ್‌.

ಆತನ ಅಣ್ಣ ಮುರಳಿ ಮೇಲಿನ ತರಗತಿಯಲ್ಲಿದ್ದ. ಮಂಗಳೂರು ಕೇಬಲ್‌ ನೆಟ್‌ವರ್ಕ್ನ ಡಾ.ಶಿವಶರಣ್‌ ಶೆಟ್ಟಿಕೂಡ ಮಧುಕರ್‌ ಶೆಟ್ಟಿಯ ಸಹಪಾಠಿ ಎಂದು ಹೇಳುತ್ತಾರೆ ಯು.ಟಿ.ಖಾದರ್‌.

ಮಧುಕರ್‌ ಉತ್ತಮ ಹುಡುಗ. ಮಿತ ಭಾಷಿ. ತರಗತಿಯಲ್ಲಿ ತಂಟೆ, ತಲೆಹರಟೆ ಮಾಡುವವನಲ್ಲ. ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ನನಗಿಂತ ಮುಂದೆ ಇರುತ್ತಿದ್ದ. ಕಾಲೇಜಿನಲ್ಲಿ ಆತ ವಿಜ್ಞಾನ ವಿಭಾಗ ಆಯ್ಕೆ ಮಾಡಿದರೆ, ನಾನು ಕಲಾ ವಿಭಾಗವನ್ನು ಸೇರಿದೆ. ನಂತರ ಆತ ಬೇರ್ಪಟ್ಟರೂ ಐಪಿಎಸ್‌ ಆಗಿ ಉನ್ನತಾಧಿಕಾರಿಯಾದ್ದು ಮಾತ್ರವಲ್ಲ, ಶಿಸ್ತಿನಲ್ಲಿ ಹೆಸರು ಗಳಿಸಿರುವುದನ್ನು ಕೇಳಿ ಆಶ್ಚರ್ಯಗೊಂಡೆ ಎಂದು ಖಾದರ್‌ ಹೇಳುತ್ತಾರೆ.

‘ವ್ಹಾಟ್‌ ಮಿಸ್ಟರ್‌ ಮಧುಕರ್‌?’

ನಾನು ಶಾಸಕನಾಗುವ ಮುನ್ನ ಎರಡೇ ಬಾರಿ ಸಹಪಾಠಿ ಮಧುಕರ್‌ ಶೆಟ್ಟಿಅವರನ್ನು ಭೇಟಿ ಮಾಡಿದ್ದೆ. ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಿಂದ ಮಂಡ್ಯಕ್ಕೆ ಕಾಂಗ್ರೆಸ್‌ ಕಾವೇರಿ ಪಾದಯಾತ್ರೆಯನ್ನು ಸಂಘಟಿಸಲಾಗಿತ್ತು. ನಾನು ಕಾಂಗ್ರೆಸ್‌ ಪದಾಧಿಕಾರಿಯಾಗಿ ಅದರಲ್ಲಿ ಪಾಲ್ಗೊಂಡಿದ್ದೆ. ಮಧುಕರ್‌ ಶೆಟ್ಟಿರಾಮನಗರ ಎಸಿಪಿ ಆಗಿದ್ದ. ಪಾದಯಾತ್ರೆಯಲ್ಲಿ ನಾನು ಇರುವುದು ಆತನಿಗೆ ಗೊತ್ತಿರಲಿಲ್ಲ. ಪಾದಯಾತ್ರೆ ಸಾಗುತ್ತಿದ್ದಾಗ ಆತ ಬಂದೋಬಸ್‌್ತ ನಡೆಸುತ್ತಿದ್ದ. ನಾನು ಪಾದಯಾತ್ರೆ ವೇಳೆ ಹಿಂದಿನಿಂದ ಆತನನ್ನು ಉದ್ದೇಶಿಸಿ, ‘ವ್ಹಾಟ್‌ ಮಿಸ್ಟರ್‌ ಮಧುಕರ್‌?’ ಎಂದು ಮೆಲ್ಲನೆ ಪ್ರಶ್ನಿಸಿದ್ದೆ. ತಕ್ಷಣ ತಿರುಗಿ ಯಾರೆಂದು ನೋಡಿದ ಆತ, ನನ್ನನ್ನು ಕಂಡು ಅವಕ್ಕಾದ. ಬಹಳ ವರ್ಷದ ಕಳೆದರೂ ಆತ ನನ್ನ ಗುರುತು ಮರೆಯಲಿಲ್ಲ. ನಂತರ ನಾವು ಆಗಾಗ ತಮಾಷೆ, ಇದು, ಇದು ಎಂದು ಮಾತನಾಡಿದೆವು ಎನ್ನುತ್ತಾರೆ ಖಾದರ್‌.

ಮಧುಕರ್ ಶೆಟ್ಟಿ ನಿಧನಕ್ಕೆ ರವಿ ಡಿ. ಚನ್ನಣ್ಣನವರ್ ಕಂಬನಿ ಮಿಡಿದಿದ್ದು ಹೀಗೆ

ಎರಡನೇ ಬಾರಿ ನಾನು ಕಾಂಗ್ರೆಸ್‌ ಪದಾಧಿಕಾರಿಯಾಗಿದ್ದಾಗ ಮಂಗಳೂರಿನ ಐಜಿಪಿ ಕಚೇರಿಗೆ ಬಂದಿದ್ದೆ. ಆಗ ಮಧುಕರ್‌ ಕಚೇರಿ ಕೆಲಸದ ನಿಮಿತ್ತ ಅಲ್ಲಿಗೆ ಆಗಮಿಸಿದ್ದ. ಆಗ ನಾವು ಉಭಯ ಕುಶಲೋಪರಿ ಮಾತನಾಡಿದ್ದೆವು ಎಂದು ನೆನಪಿಸುತ್ತಾರೆ ಖಾದರ್‌.

ಮಂಗಳೂರಿಗೆ ಕರೆಸಬೇಕು ಎಂದಿದ್ದೆ

ನಂತರ ನಾನು ಶಾಸಕನಾಗಿ, ಸಚಿವನಾದರೂ ಮಧುಕರ್‌ ಶೆಟ್ಟಿಯ ಸಂಪರ್ಕ ಇರಲಿಲ್ಲ. ಆತನೊಂದಿಗೆ ಮಾತನಾಡಬೇಕು, ಆತನನ್ನು ಭೇಟಿ ಮಾಡಬೇಕು ಎಂದು ಭಾವಿಸಿದ್ದೆ. ಆದರೆ ಆತ ವಿದೇಶದಲ್ಲಿ ತರಬೇತಿಯಲ್ಲಿದ್ದ, ಬಳಿಕ ಕೇಂದ್ರ ಸೇವೆಗೆ ತೆರಳಿದ್ದ. ಇದೇ ವೇಳೆ ಮಧುಕರ್‌ ಶೆಟ್ಟಿಯನ್ನು ಹೇಗಾದರೂ ಮಾಡಿ ಮಂಗಳೂರಿಗೆ ವರ್ಗಾವಣೆಗೊಳಿಸಬೇಕು ಎಂದು ನಾನು ಯೋಚಿಸಿದ್ದೆ. ಆದರೆ ಕೊನೆವರೆಗೂ ಅದು ಕೈಗೂಡಲೇ ಇಲ್ಲ ಎಂದು ಮೌನವಾಗುತ್ತಾರೆ ಖಾದರ್‌.

ಮಧುಕರ್‌ ಶೆಟ್ಟಿರಾಮನಗರ ಎಸಿಪಿ ಆಗಿದ್ದ. ಪಾದಯಾತ್ರೆಯಲ್ಲಿ ನಾನು ಇರುವುದು ಆತನಿಗೆ ಗೊತ್ತಿರಲಿಲ್ಲ. ಪಾದಯಾತ್ರೆ ಸಾಗುತ್ತಿದ್ದಾಗ ಆತ ಬಂದೋಬಸ್‌್ತ ನಡೆಸುತ್ತಿದ್ದ. ನಾನು ಪಾದಯಾತ್ರೆ ವೇಳೆ ಹಿಂದಿನಿಂದ ಆತನನ್ನು ಉದ್ದೇಶಿಸಿ, ‘ವ್ಹಾಟ್‌ ಮಿಸ್ಟರ್‌ ಮಧುಕರ್‌?’ ಎಂದು ಮೆಲ್ಲನೆ ಪ್ರಶ್ನಿಸಿದ್ದೆ. ತಕ್ಷಣ ತಿರುಗಿ ಯಾರೆಂದು ನೋಡಿದ ಆತ, ನನ್ನನ್ನು ಕಂಡು ಅವಾಕ್ಕಾದ. ಬಹಳ ವರ್ಷದ ಕಳೆದರೂ ಆತ ನನ್ನ ಗುರುತು ಮರೆಯಲಿಲ್ಲ. ನಂತರ ನಾವು ಆಗಾಗ ತಮಾಷೆ, ಇದು, ಇದು ಎಂದು ಮಾತನಾಡಿದೆವು.

-ಸಚಿವ, ಯು. ಟಿ. ಖಾದರ್

ಅಂತ್ಯಸಂಸ್ಕಾರದ ಕೊನೆವರೆಗೆ...

ಸಹಪಾಠಿಯ ಅಂತ್ಯಸಂಸ್ಕಾರವರೆಗೆ ನಾನು ಆತನ ಪಾರ್ಥಿವ ಶರೀರದ ಜೊತೆಗೆ ತೆರಳುತ್ತಿದ್ದೇನೆ. ಶನಿವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿ ಸಹಪಾಠಿಯ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸುವುದರೊಂದಿಗೆ ಶವವನ್ನು ಹುಟ್ಟೂರಿಗೆ ಕೊಂಡೊಯ್ಯುವಾಗಲೂ ಜೊತೆಯಲ್ಲೇ ಇರುತ್ತೇನೆ. ನಂತರ ಭಾನುವಾರ ಹುಟ್ಟೂರಿನಲ್ಲಿ ನಡೆಯುವ ಶವಸಂಸ್ಕಾರದಲ್ಲೂ ಭಾಗವಹಿಸುತ್ತೇನೆ ಎನ್ನುವ ಮೂಲಕ ಅಗಲಿದ ಬೆಂಚ್‌ಮೆಟ್‌ಗೆ ಗೌರವ ನಮನ ಸಲ್ಲಿಸುತ್ತೇನೆ ಎನ್ನುತ್ತಾರೆ ಯು.ಟಿ.ಖಾದರ್‌.

-ಆತ್ಮಭೂಷಣ್‌